ಅತಿಯಾದ ಮಳೆ: ಈರುಳ್ಳಿ ಬೆಳೆಗಾರರಲ್ಲಿ ಆತಂಕ
ಕನ್ನಡಪ್ರಭ ವಾರ್ತೆ, ಗದಗ, ಸೆ. 20
ಸೆಪ್ಟೆಂಬರ್ ಮೊದಲ ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಈರುಳ್ಳಿ ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.
ಮಳೆಯಾಗದೇ ಮುಂಗಾರಿನಲ್ಲಿ ತೊಂದರೆ ಅನುಭವಿಸಿದ್ದ ರೈತರಿಗೆ ಈಗ ಅತಿಯಾದ ಮಳೆಯಿಂದ ಸಂಕಷ್ಟ ಎದುರಿಸುವಂತಾಗಿದೆ. ರೋಣ, ಶಿರಹಟ್ಟಿ ಗದಗ ಹಾಗೂ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ಈರುಳ್ಳಿ ಪ್ರಮುಖವಾಗಿ ಬಿತ್ತನೆ ಮಾಡಿದ್ದು, ಇದೇ ಭಾಗದಲ್ಲಿಯೇ ಹೆಚ್ಚಿನ ಮಳೆ ಆಗಿದೆ.
ವಾಡಿಕೆಗಿಂತ ಹೆಚ್ಚಿನ ಮಳೆ: ಸೆಪ್ಟೆಂಬರ್ನಲ್ಲಿ ಹವಾಮಾನ ಇಲಾಖೆಯ ಮಾಹಿತಿ ಹಾಗೂ ಜಿಲ್ಲೆಯ ಅಂಕಿ ಸಂಖ್ಯಾ ವಿಭಾಗದ ಮಾಹಿತಿ ಆಧಾರದಲ್ಲಿ 137.4 ಮಿ.ಮೀ. ಮಳೆಯಾಗಬೇಕು. (ಒಂದು ತಿಂಗಳಲ್ಲಿ) ಆದರೆ, ಸೆ. 18 ರವರೆಗೆ 141.8 ಮಿ.ಮೀ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಈ ತಿಂಗಳು ಕೊನೆಗೊಳ್ಳಲು ಇನ್ನೂ ಹತ್ತು ದಿನ ಬಾಕಿ ಇರುವಾಗಲೇ ಹೆಚ್ಚಿಗೆ ಮಳೆಯಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ 1ಲಕ್ಷ 10ಸಾವಿರ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಈ ಎಲ್ಲ ರೈತರು ಸಮಸ್ಯೆ ಎದುರಿಸುವಂತಾಗಿದೆ.
ಕಪ್ಪು ಮಣ್ಣಲ್ಲಿ ಸಮಸ್ಯೆ: ಜಿಲ್ಲೆಯ ಒಟ್ಟು ಕೃಷಿ ಭೂಮಿಯಲ್ಲಿ ಶೇ. 55ರಷ್ಟು ಕಪ್ಪು ಭೂಮಿ (ಯರಿ)ಯನ್ನು ಹೊಂದಿದ್ದು, ಯರಿ ಭೂಮಿಯನ್ನು ಹೊಂದಿರುವ ಬಹುತೇಕ ರೈತರು ವಾಣಿಜ್ಯ ಬೆಳೆಯನ್ನಾಗಿ ಈರುಳ್ಳಿಯನ್ನೇ ನಂಬಿದ್ದಾರೆ. ಇನ್ನು ಯರಿಭೂಮಿಗೆ ಅತಿಯಾದ ಮಳೆಯಾದರೆ ಬೆಳೆ ಬೆಳೆಯುವುದೇ ಇಲ್ಲ. ಇಲ್ಲಿನ ಭೂಮಿಯೂ ಬಯಲು ಸೀಮೆಯ ವಾತಾವರಣಕ್ಕೆ ಅನುಕೂಲವಾಗಿದ್ದು, ಹೆಚ್ಚಿಗೆ ಮಳೆಯಾದಲ್ಲಿ ಭೂಮಿಯ ರೂಪವೇ ಬದಲಾಗುತ್ತದೆ. ಅದರಲ್ಲಿಯೂ ಪ್ರತಿ ದಿನವೂ ಮಳೆಯಾದರಂತೂ ಹೊಲಗಳಿಗೆ ಹೋಗುವುದೇ ದುಸ್ತರವಾಗುತ್ತದೆ. ಅತಿಯಾದ ಕಸಗಳಿಂದ (ಕಳೆ) ಬಿತ್ತಿದ ಬೆಳೆಯೇ ನಾಶವಾಗುವಂತಹ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಯೂರಿಯಾ ಕೊರತೆ: ಮಳೆ ಹೆಚ್ಚಾದ ಪ್ರದೇಶದಲ್ಲಿ ಮತ್ತು ಈರುಳ್ಳಿ ಬಿತ್ತನೆಯಾಗಿ ಒಂದೂವರೆ ತಿಂಗಳು ಗತಿಸಿದ ನಂತರ ಈರುಳ್ಳಿ ಬೆಳೆಗೆ ಯೂರಿಯಾ ಹಾಕುವುದು ವಾಡಿಕೆ. ಆದರೆ 10 ದಿನಗಳಿಂದ ಜಿಲ್ಲೆಯಾದ್ಯಂತ ಯೂರಿಯಾ ಕೊರತೆ ತೀವ್ರವಾಗಿದ್ದು, ರೈತರು ಅನಿವಾರ್ಯವಾಗಿ ಹೆಚ್ಚಿನ ಬೆಲೆಯನ್ನು ನೀಡಿ ಗೊಬ್ಬರ ಖರೀದಿಸುವಂತಾಗಿದೆ.
ಅತಿಯಾದ ತೇವಾಂಶವಿರುವ ಈರುಳ್ಳಿ ಬೆಳೆದ ಹೊಲಕ್ಕೆ ಯಾರಿಯಾ ಅತಿ ಅವಶ್ಯಕವಾಗಿದೆ. ಯೂರಿಯಾ ಸಿಂಪರಣೆ ಮಾಡುವುದರಿಂದ ಬೆಳೆಗೆ ಚೈತನ್ಯ ದೊರೆಯುತ್ತದೆ. ಆದರೆ ಮಾರಾಟಗಾರರು ಕೃತಕ ಅಭಾವವನ್ನು ಸೃಷಿಸುವ ಮೂಲಕ ಅವರೂ ರೈತರಿಗೆ ತೊಂದರೆ ನೀಡುತ್ತಿದ್ದಾರೆ.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

