ಗದಗ

ಮಹಿಳೆ ಮೇಲೆ ನಿಲ್ಲದ ದೌರ್ಜನ್ಯ: ಕೃಷ್ಣವೇಣಿ ವಿಷಾದ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 22
ಮಹಿಳೆ ಅಬಲೆ ಅಲ್ಲ, ಶಕ್ತಿಯ ಸ್ವರೂಪ. ಸಮಾಜದಲ್ಲಿ ಪೂಜ್ಯ ಸ್ಥಾನ ಪಡೆದ ಹೆಣ್ಣಿಗೆ ಇಂದು ಗೌರವದಿಂದ ಕಾಣುತ್ತಿಲ್ಲ. ಮಹಿಳೆಯ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಗದಗ ಶಹರ ಠಾಣೆಯ ಪಿಎಸ್‌ಐ ಕೃಷ್ಣವೇಣಿ ಹೇಳಿದರು.
ಅವರು ಶನಿವಾರ ತಾಲೂಕಿನ ಬೆಳದಡಿ ಗ್ರಾಪಂ ಆವರಣದಲ್ಲಿ ಗದಗ ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಏರ್ಪಡಿಸಿದ್ದ ಮಹಿಳೆಯ ರಕ್ಷಣೆಯಲ್ಲಿ ಸಮಾಜದ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಶಾಂತಿ, ಸಹನೆಯ ತ್ಯಾಗ ಜೀವಿ ಹೆಣ್ಣು. ನಾಗಾಲೋಟದಲ್ಲಿ ಮುನ್ನಡೆಯುತ್ತಿರುವ ದಿನಗಳಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವ, ಅವಳಿಗೆ ಸಾಮಾಜಿಕ, ಶೈಕ್ಷಣಿಕವಾಗಿ ನೈತಿಕ ಧೈರ್ಯ ತುಂಬುವ ಕಾರ್ಯ ನಡೆಯಬೇಕಿದೆ. ಅದಕ್ಕಾಗಿ ಸಮಾಜ ಮತ್ತು ಸಾಮಾಜಿಕ ಸಂಘಟನೆಗಳು ಮುಂದಾಗಬೇಕು. ದೌರ್ಜನ್ಯ ಮತ್ತು ವಂಚನೆಗೆ ಒಳಗಾಗುವ ಮಹಿಳೆಯರಿಗೆ ಸರ್ಕಾರ ಹಲವಾರು ಯೋಜನೆ ರೂಪಿಸಿದೆ, ಅವರಿಗೆ ನೈತಿಕ ಸ್ಥೈರ್ಯ ನೀಡುತ್ತಿದೆ. ಜತೆಗೆ ಕಾನೂನುಗಳೂ ಸಹ ಮಹಿಳೆಯ ಧ್ವನಿಗೆ ಮಾನ್ಯತೆ ನೀಡುತ್ತಿವೆ. ಇದರ ಸದುಪಯೋಗ ಪಡೆಯಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಮಾತನಾಡಿ, ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇನ್ನರ್‌ವ್ಹೀಲ್ ಕ್ಲಬ್ ಕೇವಲ ನಗರ ಪ್ರದೇಶದಲ್ಲಿ ತನ್ನ ಕಾರ್ಯವನ್ನು ಸೀಮಿತಗೊಳಿಸದೇ ಸಾಮಾಜಿಕ ಸೇವಾ ಕೈಂಕರ್ಯವನ್ನು ಗ್ರಾಮೀಣ ಪ್ರದೇಶದವರೆಗೂ ವಿಸ್ತರಿಸಿಕೊಂಡಿದೆ. ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಜಾಗೃತರನ್ನಾಗಿಸುವ ಮೂಲಕ ಅವರಿಗೆ ಕಾನೂನಿನ ಅರಿವು ನೀಡುವ ಕಾರ್ಯಕ್ಕೂ ಮುಂದಾಗಿದೆ ಎಂದರು.
ಬೆಳದಡಿ ಗ್ರಾಪಂನ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಶಂಭುಲಿಂಗಯ್ಯ ಕಲ್ಮಠ ಅವರನ್ನು ಸನ್ಮಾನಿಸಲಾಯಿತು. ಸುನಂದಾ ಮಾಳೆಕೊಪ್ಪಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೇಮಾ ಮೇಟಿ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಲಮಾಣಿ, ಗ್ರಾಪಂ ಸದಸ್ಯ ಬ್ರಹ್ಮಾನಂದ ಜಡಿ, ನಾಗಾವಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಎಂ. ಜಮಾದಾರ, ಗೋಪಾಲ, ದ್ರಾಕ್ಷಾಯಣಿ ಬಡಿಗೇರ, ಸಿದ್ದಮ್ಮ ಹೊಸಳ್ಳಿ, ರಾಜಮ್ಮ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾ ಗಂಜಿಹಾಳ ಪ್ರಾರ್ಥಿಸಿದರು. ಪ್ರೇಮಾ ಮೇಟಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಮಾನ್ವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.