ವ್ಯಾಪಾರಸ್ಥರಿಗೆ ಲಭ್ಯವಾಗದ ವಾಣಿಜ್ಯ ಮಳಿಗೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಸೆ. 26
ಬೆಳ್ಳಟ್ಟಿ ರಸ್ತೆ ಪಕ್ಕದ ಬಸ್ ನಿಲ್ದಾಣದ ಜಾಗದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ, ಮಾರುಕಟ್ಟೆ ಸುಧಾರಣೆ ಹಾಗೂ ವ್ಯಾಪಾರ ವಹಿವಾಟು ವೃದ್ಧಿಗೆ ನಂಜುಂಡಪ್ಪ ವರದಿ ಯೋಜನೆಯಡಿ 2 ವರ್ಷಗಳ ಹಿಂದೆಯೇ ರು. 32 ಲಕ್ಷ ವೆಚ್ಚದಲ್ಲಿ 12 ಮಾರಾಟ ಮಳಿಗೆ ನಿರ್ಮಿಸಿದ್ದು, ಅವುಗಳು ಇನ್ನೂ ವ್ಯಾಪಾರಸ್ಥರಿಗೆ ಲಭ್ಯವಾಗಿಲ್ಲ.
2 ವರ್ಷಗಳ ಹಿಂದೆಯೇ ಮಳಿಗೆಗಳ ಕಾಮಗಾರಿ ಪೂರ್ಣಗೊಂಡಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಳಿಗೆಗಳ ಮಾಸಿಕ ಬಾಡಿಗೆ ದರವನ್ನು ಹೆಚ್ಚಿಗೆ ಮಾಡಿ ಟೆಂಡರ್ ಕರೆದಿದ್ದು, ಮಳಿಗೆಗಳತ್ತ ಯಾವೊಬ್ಬ ವ್ಯಾಪಾರಸ್ಥರೂ ತಿರುಗಿ ನೋಡುತ್ತಿಲ್ಲ. ಇದಕ್ಕೆ ಬೇರೆ ವ್ಯವಸ್ಥೆ ಕಂಡುಕೊಳ್ಳದೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಂಡಿದ್ದರಿಂದ ಮಳಿಗೆಗಳಿಗೆ ಬೀಗ ಹಾಕಿರುವುದು ಮಾತ್ರ ತೆರೆದಿಲ್ಲ.
ಮಳಿಗೆ ನೀಡುವುದು ಅವಶ್ಯ: ಪಟ್ಟಣದ ವ್ಯಾಪಾರು ವಹಿವಾಟಿಗೆ ಅನುಗುಣವಾಗಿ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ದರ ನಿಗದಿಗೊಳಿಸಿ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಈ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ನೀಡುವುದು ಅವಶ್ಯವಾಗಿದೆ. ಈ ಬಗ್ಗೆ ಏನಾದರೂ ಕಾನೂನು ತೊಡಕಿದೆಯೇ ಅಥವಾ ಹರಾಜು ಪ್ರಕ್ರಿಯೆ ಬೇಡವೆಂದೇ ಬಿಟ್ಟಿದ್ದಾರೆಯೇ ಎಂಬುದು ತಿಳಿಯದಾಗಿದ್ದು, ಲಕ್ಷಾಂತರ ಹಣ ಖರ್ಚು ಮಾಡಿ ಯಾವ ಉದ್ದೇಶಕ್ಕಾಗಿ ನಿರ್ಮಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ.
ಸಾರಿಗೆ ಸಂಸ್ಥೆಯ ಹಣವನ್ನು ಖರ್ಚು ಮಾಡಿ, ಅದರಿಂದ ಲಾಭ ಪಡೆಯಬೇಕಾದ ಸಂಸ್ಥೆಯೇ ಈ ಮಳಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇವುಗಳ ಕಾರ್ಯಾರಂಭಕ್ಕೆ ಯಾರೊಬ್ಬರೂ ಚಕಾರವೆತ್ತದಿರುವುದು ಏಕೆ ಎಂಬುದು ಮಾತ್ರ ತಿಳಿಯದಾಗಿದೆ. ವಾಣಿಜ್ಯ ಮಳಿಗೆಗಳ ಅಕ್ಕಪಕ್ಕದಲ್ಲಿಯೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಮೂಗು ಮುಚ್ಚಿಕೊಂಡು ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗಬ್ಬೆದ್ದ ಬಸ್ ನಿಲ್ದಾಣ: ವಿಶಾಲವಾದ ಬಸ್ ನಿಲ್ದಾಣ ತಿಪ್ಪೆಗುಂಡಿಯಾಗಿ ರೂಪುಗೊಳ್ಳುತ್ತಿದೆ. ಸುಸಜ್ಜಿತವಾದ ಸುಲಭ ಶೌಚಾಲಯ ನಿರ್ಮಿಸಿದ್ದರೂ ಸಾರ್ವಜನಿಕರು ಸ್ವಚ್ಛತೆ ಕಾಯ್ದುಕೊಳ್ಳದೇ ಬಸ್ ನಿಲ್ದಾಣದ ಸುತ್ತಲಿರುವ ಬಯಲು ಜಾಗೆಯಲ್ಲಿಯೇ ಮಲಮೂತ್ರ ಮಾಡುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ರಾತ್ರಿಯಾಗುತ್ತಿದ್ದಂತೆ ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ಕುಳಿತುಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬಸ್ ನಿಲ್ದಾಣದ ಅಕ್ಕಪಕ್ಕ ಇರುವ ಸಣ್ಣ, ದೊಡ್ಡ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡುವ ಮೂಲಕ ಸ್ವಚ್ಛತೆ ಕಾಪಾಡಲು ಘಟಕ ವ್ಯವಸ್ಥಾಪಕರು, ಪಪಂ ಆಡಳಿತ ಮಂಡಳಿ ಹಾಗೂ ಮುಖ್ಯಾಧಿಕಾರಿಗಳು ಮುಂದಾಗಬೇಕು. ಎಚ್ಚರಿಕೆ ನಂತರವೂ ಗಲೀಜು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
-ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

