ಗದಗ

ವೈದ್ಯಕೀಯ ಕಾಲೇಜಿಗೆ ರು. 29 ಕೋಟಿ: ಎಚ್ಕೆ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 28
ಜಿಲ್ಲೆಯ ಮಲ್ಲಸಮುದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರು. 29 ಕೋಟಿ ಮಂಜೂರು ಮಾಡಲು ಸರ್ಕಾರ ನಿರ್ಣಯಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಉತ್ತಮವಾದ ವೈದ್ಯಕೀಯ ಕಾಲೇಜು ನಿರ್ಮಿಸಲು ಸರ್ಕಾರ ಅನುದಾನ ಬಿಡುಗಡೆಗೆ ಒಪ್ಪಿಕೊಂಡಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅಲ್ಲದೇ ರಾಜ್ಯದಲ್ಲಿನ 12 ಸಾವಿರ ಕೆರೆಗಳಿಗೂ ಎನ್ಆರ್ಇಜಿ ಯೋಜನೆಯ ಅನುದಾನದಲ್ಲಿ ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿಗೊಳಿಸಲಾಗುವುದಲ್ಲದೆ, ಸರ್ಕಾರದ ವಿವಿಧ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರೈತರು ಬೆಳೆದ ಜೋಳಕ್ಕೆ 1 ಕ್ವಿಂಟಲ್ಗೆ ರು. 1800 ಬೆಂಬಲ ಬೆಲೆಗೆ ಸರ್ಕಾರವು ಖರೀಧಿಸಿ ಅನ್ನಭಾಗ್ಯ ಯೋಜನೆಯ ಮಾದರಿಯಲ್ಲಿಯೇ ಕೆಜಿಗೆ  ರು. 1 ರಂತೆ ವಿತರಿಸಲಾಗುವುದು. ಹೊಂಬಳ ಗ್ರಾಮದಲ್ಲಿ ರು. 20 ಲಕ್ಷಗಳಲ್ಲಿ ಕುಡಿವ ನೀರಿನ ಕೆರೆಯ ಹೂಳು ಎತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಕ್ಕೆ ಅನುದಾನದ ಕೊರತೆ ಇರುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ರು. 6 ಲಕ್ಷಗಳಲ್ಲಿ  ಕಾಂಕ್ರೀಟ್ ರೋಡ್ ನಿರ್ಮಾಣ ಹಾಗೂ ರು. 27.6 ಲಕ್ಷಗಳಲ್ಲಿ ಗ್ರಾಪಂ ಹೊಸ ಕಟ್ಟಡಕ್ಕೆ ಚಾಲನೆ ನೀಡಲಾಯಿತು. ರು. 5.40 ಲಕ್ಷಗಳಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಕೊಠಡಿಯನ್ನು ಮತ್ತು ರು. 4.25 ಲಕ್ಷದಲ್ಲಿ ನಿರ್ಮಿಸಿರುವ ಉರ್ದು ಸರ್ಕಾರಿ ಶಾಲೆಯನ್ನು ಸಚಿವರು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ನರಗುಂದ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಗದಗ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿಸುವಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು. ತಾಪಂ ಅಧ್ಯಕ್ಷ ಎಚ್.ಐ. ಇಂಗಳಹಳ್ಳಿ, ಜಿಪಂ ಸದಸ್ಯ ಆರ್.ಡಿ. ಕೊಂಡಿಕೊಪ್ಪ, ತಾಪಂ ಸದಸ್ಯ ಎ.ಎಸ್. ಕರೂರ, ಗ್ರಾಪಂ ಉಪಾಧ್ಯಕ್ಷ ರತ್ನಮ್ಮ ಲಕ್ಕುಂಡಿ, ಗ್ರಾಪಂ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.