ಗದಗ

ನಿವೇಶನ, ಹಕ್ಕುಪತ್ರಕ್ಕಾಗಿ ಧರಣಿ

Published On :

ಶಿರಹಟ್ಟಿ: ಗುಡಿಸಲು ನಿವಾಸಿಗಳಿಗೆ ಮನೆ ಕಟ್ಟಿಕೊಡಬೇಕು. ಗ್ರಾಮಗಳ ಅಕ್ಕಪಕ್ಕದಲ್ಲಿರುವ ಸರ್ಕಾರಿ ಬಂಜರು ಭೂಮಿಯನ್ನು ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ತಾಲೂಕು ಸಮಿತಿ ಶಿರಹಟ್ಟಿ ವತಿಯಿಂದ ಸೋಮವಾರ ವಿಠ್ಠಲ ನಾಯಕ ನೇತೃತ್ವದಲ್ಲಿ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ವಿಠ್ಠಲ ನಾಯಕ ಮಾತನಾಡಿ,  2 ವರ್ಷಗಳಿಂದ ಸ್ವಂತ ಮನೆ, ನಿವೇಶನ ಇಲ್ಲದ ಕೃಷಿ ಕೂಲಿಕಾರರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ವಸತಿ ರಹಿತರಿಗೆ ಮನೆಗಳನ್ನು ಒದಗಿಸುವ ಕ್ರಮಕ್ಕೆ ಮುಂದಾಗಿಲ್ಲ. ಗುಡಿಸಲು ರಹಿತ ರಾಜ್ಯ ನಿರ್ಮಾಣದ ಘೋಷಣೆ ಮಾಡುತ್ತಿರುವ ಸರ್ಕಾರ, ಬಡ ಜನತೆ ನೆಮ್ಮದಿಯಿಂದ ವಾಸಿಸಲು ನಿವೇಶನ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇಂದಿರಾ ಆವಾಸ್ ಮತ್ತಿತರ ಯೋಜನೆಗಳಡಿಯಲ್ಲಿ ಗುಡಿಸಲು ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ರು. 1.25 ಲಕ್ಷ ನೆರವು ನೀಡುವುದಾಗಿ ಹೇಳಿದ್ದರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆ ಕಟ್ಟಲು ಫಲಾನುಭವಿಗಳು ಪ್ರಾರಂಭಿಸಿದ್ದು, ಮನೆಗಳು ಅರ್ಧಕ್ಕೆ ನಿಂತಿವೆ. ಸರ್ಕಾರ ನೀಡುವ ಬಾಕಿ ಹಣ ಬಾರದೇ ವಿಳಂಬವಾಗಿದ್ದರಿಂದ ಖಾಸಗಿ ಲೇವಾದೇವಿಗಾರರ ಹತ್ತಿರ ಬಡ್ಡಿ ನೀಡಿ ಸಾಲ ಪಡೆದು ಮನೆ ಕಟ್ಟಿಕೊಳ್ಳುತ್ತಿದ್ದು, ಸಾಲ ನೀಡಿದವರ ಕಿರುಕುಳದಿಂದ ಫಲಾನುಭವಿಗಳು ಬೇಸತ್ತಿದ್ದಾರೆ. ಈ ಕುರಿತು ಗ್ರಾಮ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗಂಜಿ ಕುಡಿದು ಗುಡಿಸಲು ಮನೆಯಲ್ಲಿಯೇ ವಾಸವಾಗಿದ್ದ ಸಮಯದಲ್ಲಿ ಬಾಳು ನೆಮ್ಮದಿಯಾಗಿತ್ತು. ಸರ್ಕಾರ ನೆರವು ನೀಡುವ ಭರವಸೆ ನೀಡಿದ್ದರಿಂದ ಸಾಲ ಮಾಡಿದ್ದು, ಬಡ ಜನತೆ ನೆಮ್ಮದಿಯ ಬದುಕು ಸಾಗಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ನಮ್ಮ ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ. ಕೃಷ್ಣ ಮಾಳಗಿಮನಿ, ಹೇಮವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಗಿರಿಜವ್ವ ಲಮಾಣಿ, ರಾಮವ್ವ ಲಮಾಣಿ, ಕಾಳಪ್ಪ ಲಮಾಣಿ, ಸಾಲವ್ವ ಲಮಾಣಿ, ಪಾಂಡಪ್ಪ ರಜಪುತ, ಫಕ್ಕೀರಪ್ಪ ಮಾಳಗಿಮನಿ, ಹನುಮಂತ ಲಮಾಣಿ, ಸೋಮವ್ವ ಲಮಾಣಿ, ಶೀತವ್ವ ಲಮಾಣಿ ಮತ್ತಿತರರು ಸತ್ಯಾಗ್ರಹದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.