ಗದಗ

ಕಾಂಗ್ರೆಸ್‌ಗೆ ಸೇನಾಧಿಪತಿ ಓಡಿಹೋದ ಸ್ಥಿತಿ: ಬಿಎಸ್‌ವೈ

Published On :

ಹಿರೇಕೆರೂರು: ಎಲ್ಲ ಕಡೆ ಬಿಜೆಪಿ ಪರ ಅಲೆ ನಿರೀಕ್ಷೆ ಮೀರಿ ಹೆಚ್ಚುತ್ತಿದೆ. ಇದರಿಂದ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ರಣರಂಗದಲ್ಲಿ ಸೇನಾಧಿಪತಿ ಓಡಿಹೋದರೆ ಆ ಸೈನಿಕರ ಸ್ಥಿತಿ ಹೇಗಾಗುತ್ತದೆಯೋ ಅದೇ ಸ್ಥಿತಿ  ಕಾಂಗ್ರೆಸ್‌ಗೆ ಬಂದೊದಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೊರಬ ತಾಲೂಕಿಗೆ ಮತಪ್ರಚಾರ ನಡೆಸಲು ಹೋಗುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಗುರುವಾರ ಶಾಸಕ ಯು.ಬಿ. ಬಣಕಾರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಇರುವುದು ಸಮರ್ಥ ನಾಯಕನ ಕೊರತೆಯನ್ನು ತೋರಿಸುತ್ತದೆ. ಈಗಾಗಲೇ 10 ಲೋಕಸಭಾ ಕ್ಷೇತ್ರಗಳಲ್ಲಿ ಮತ ಪ್ರಚಾರ ನಡೆಸಿದ್ದೇನೆ. ಶುಕ್ರವಾರ ತುಮಕೂರು ಮತ್ತು ಚಿತ್ರದುರ್ಗದಲ್ಲಿ ಪ್ರಚಾರ ಮಾಡುವುದಾಗಿ ತಿಳಿಸಿದ ಅವರು, 5 ವರ್ಷದ ಬಿಜೆಪಿಯ ಆಡಳಿತಾವಧಿಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ ಬಹು ಮುಖ್ಯವಾಗಿ 17 ಲಕ್ಷ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದೆ. ಸಂಧ್ಯಾ ಸುರಕ್ಷಾ, ಸುವರ್ಣ ಭೂಮಿ, ಸುವರ್ಣ ಗ್ರಾಮ, 108 ವಾಹನ ಹಾಗೂ ಹೈನುಗಾರಿಕೆಗೆ ಉತ್ತೇಜನ, ಇನ್ನೂ ಹಲವಾರು ಮಹತ್ತರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವು  ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿವೆ. ರಾಜ್ಯದಲ್ಲಿ 11 ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಆಭಿವೃದ್ಧಿ ಕೆಲಸಗಳಲ್ಲಿ ವಿಫಲವಾಗಿದೆ. ಇವರು ಆಡಳಿತ ವಹಿಸಿಕೊಂಡಾಗಿನಿಂದಲೂ ರಾಜ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದೆ ಎಂದರು. ಏ. 7 ರಿಂದ ರಾಜ್ಯದ ವಿವಿಧೆಡೆ ಪಕ್ಷದ ಅಭ್ಯರ್ಥಿಗಳ ಪರ ಮತಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸುತ್ತೇನೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವು ನನ್ನದೇ ಎಂದು ತಿಳಿಸಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನಾದ್ಯಂತ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚನೆ ಪ್ರಾರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರತಿದೆ. ಕಳೆದ ಬಾರಿಗಿಂತ ಈ ಭಾರಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಭೋಜರಾಜ ಕರೂದಿ, ತಾಲೂಕು ಅಧ್ಯಕ್ಷ ಎಸ್.ಆರ್. ಅಂಗಡಿ, ಜಿ.ಪಂ. ಸದಸ್ಯೆ ಬಸಮ್ಮ ಅಬಲೂರ, ಮುಖಂಡರಾದ ಎನ್.ಎಂ. ಈಟೇರ, ಪಾಲಾಕ್ಷಗೌಡ ಪಾಟೀಲ, ನಿಂಗಪ್ಪ ಚಳಗೇರಿ, ಗಂಗಾಧರ ಮಲೆಬೆನ್ನೂರ, ಮಹೇಂದ್ರ ಬಡಳ್ಳಿ, ರಘು ಮಾಳಮ್ಮನವರ, ರವಿ ಪುಟ್ಟಪ್ಪಗೌಡ್ರ, ಶಿವು ತಿಪ್ಪಶೆಟ್ಟಿ, ಶಿವಯೋಗಿ ಬಸಪ್ಪನವರ, ಚನ್ನಬಸಪ್ಪ ರಾಮಜ್ಜನವರ, ದತ್ತಾತ್ರೇಯ ರಾಯ್ಕರ, ರವಿ ಸಿದ್ದಪ್ಪಗೌಡ್ರ, ಬಿ.ಟಿ. ಚಿಂದಿ, ಷಣ್ಮುಖ ಮಳಿಮಠ, ಗಂಗನಗೌಡ ಪಾಟೀಲ, ಮೃತ್ಯುಂಜಯ ಕೆಳಗಿನಮನಿ, ಶರಣಪ್ಪ ಬಂಡೇರ, ಪ್ರಭು ಮಳವಳ್ಳಿ, ರಾಮು ಮುರಡೇಶ್ವರ, ಸಿದ್ದನಗೌಡ ನರೇಗೌಡ, ರಾಮು ಚಿಗಮೊರಬ, ರವಿ ಚಿಂದಿ ಗಂಗಾಧರ ಮಾಗನೂರು ರವಿ ಸಿದ್ದಪ್ಪಗೌಡರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.