ಕಾಂಗ್ರೆಸ್ನಿಂದ ರೈತರಿಗಿಲ್ಲ ಯೋಜನೆ
ಬ್ಯಾಡಗಿ: ರೈತಪರ ಯಾವುದೇ ಯೋಜನೆ ಘೋಷಿಸದಿರುವ ಕಾಂಗ್ರೆಸ್ ದೇಶದಲ್ಲಿ ಕೃಷಿಯನ್ನು ನಾಶಪಡಿಸುವ ಹಿಡನ್ ಅಜೆಂಡಾ ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಚುನಾವಣಾ ಪ್ರಚಾರ ಭಾಷಣವನ್ನುದ್ದೇಶಿಸಿ ಅವರು ಮಾತನಾಡಿದರು.
ಸುಮಾರು 57 ವರ್ಷ ದೇಶವನ್ನು ಮುನ್ನಡೆಸಿರುವ ಕಾಂಗ್ರೆಸ್ ಹುಟ್ಟುವ ಪ್ರತಿ ಮಗುವಿನ ಮೇಲೂ ರು. 28 ಸಾವಿರ ದೇಶದ ಸಾಲದ ಹೊರೆ ಹಾಕಿದ್ದೇ ಈವರೆಗಿನ ಸಾಧನೆಯಾಗಿದೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ ಎಂದರು.
ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಹೀಗಾಗಿ ಕಾಂಗ್ರೆಸ್ಗೆ ಪ್ರಚಾರ ಮಾಡಲು ವಿಷಯಗಳಿಲ್ಲದಂತಾಗಿದ್ದು, ಬಿಜೆಪಿ ಮುಸ್ಲಿಂ ವಿರೋಧಿ ಎಂಬುದಾಗಿ ಅಪಪ್ರಚಾರದಲ್ಲಿ ತೊಡಗಿದ್ದು ಬಹುದೊಡ್ಡ ಸಂಖ್ಯೆಯ ಮುಸ್ಲಿಂ ಮತದಾರರನ್ನು ತನ್ನತ್ತ ಸೆಳೆಯುವ ಯತ್ನಕ್ಕೆ ಮುಂದಾಗಿದೆ. ಆದರೆ, ಶೇ. 60ರಷ್ಟು ಮುಸ್ಲಿಂ ಮುಖಂಡರು ಈಗಾಗಲೇ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಹೀಗಾಗಿ ಈ ಬಾರಿಯ ಫಲಿತಾಂಶ ಕಾಂಗ್ರೆಸ್ಗೆ ಅಚ್ಚರಿ ನೀಡಲಿದೆ ಎಂದರು.
ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಏನನ್ನೋ ಹೇಳಿ, ಏನನ್ನೋ ತೋರಿಸಿ ಮತಗಳನ್ನು ಪಡೆಯುವ ಕಾಲ ದೂರವಾಗಿದೆ. ಕೇಂದ್ರದಲ್ಲಿ ಸತತ ಎರಡು ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಜನತೆಗೆ ನೀಡಿದ ಕೊಡುಗೆಯಾದರೂ ಏನು? ಸುಮ್ಮನೆ ಕುಳಿತುಕೊಳ್ಳುವ ಕಾಲ ಇದಲ್ಲ. ಕಮಲದ ಗುರುತಿಗೆ ಮತ ಹಾಕುವ ಮೂಲಕ ಪ್ರತಿಯೊಬ್ಬರೂ ಕಾಂಗ್ರೆಸ್ನ್ನು ಬೇರು ಸಹಿತ ಕಿತ್ತೆಸೆಯುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಸುರೇಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಶಂಕ್ರಣ್ಣ ಮಾತನವರ, ಭಾರತಿ ಜಂಬಗಿ, ಬಿಜೆಪಿ ವಕ್ತಾರ ರವೀಂದ್ರ ಪಟ್ಟಣಶೆಟ್ಟಿ, ಶಿವಬಸಪ್ಪ ಕುಳೇನೂರ, ಅಜೀಜ್ ಬಿಜಾಪುರ, ರಾಮಣ್ಣ ಉಕ್ಕುಂದ, ಮುರಿಗೆಪ್ಪ ಶೆಟ್ಟರ, ಎನ್.ಎಂ. ಈಟೇರ, ಚಂದ್ರಣ್ಣ ಮುಚ್ಚಟ್ಟಿ, ನಾಗರಾಜ ಬಳ್ಳಾರಿ, ವೀರಭದ್ರಗೌಡ ಹೊಮ್ಮರಡಿ, ಮಲ್ಲಿಕಾರ್ಜುನ ದೊಡ್ಮನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

