ಗದಗ

ಕೂಸಿದ್ದವರಿಗೆ ಚುನಾವಣೆ ಕೆಲಸ!

Published On :

 ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಏ. 7
ಸುಸೂತ್ರವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ನಿಯಮ ರೂಪಿಸಿದೆ. ಆದರೆ, ಹೆರಿಗೆಯಾಗಿ ಇನ್ನೂ ವರ್ಷ ಪೂರೈಸದ ಮಹಿಳೆಯರನ್ನು ಗದಗ ಜಿಲ್ಲಾಡಳಿತ ಚುನಾವಣಾ ಕೆಲಸಕ್ಕಾಗಿ ನಿಯುಕ್ತಿ ಮಾಡಿದೆ.
ಆಯೋಗ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ನಿಯುಕ್ತಿಗೊಳಿಸುವ ಪೂರ್ವ ಆಯಾ ಜಿಲ್ಲಾಡಳಿತ ಅನುಸರಿಸಬೇಕಾದ ಸೂತ್ರಗಳನ್ನು ಸ್ಪಷ್ಟವಾಗಿ ಸೂಚಿಸಿದೆ. ಮಹಿಳಾ ಸಿಬ್ಬಂದಿ ಹೆರಿಗೆಯಾಗಿ, ಮಗು ಇನ್ನೂ ಎದೆಹಾಲು ಕುಡಿಯುತ್ತಿದ್ದರೆ, ಅಂಥವರನ್ನು ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಳಿಸಿದರೆ, ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ವಿನಾಯಿತಿ ನೀಡಲಾಗುತ್ತದೆ. ಆದರೆ, ಗದುಗಿನಲ್ಲಿ ಹೆರಿಗೆಯಾಗಿ ಇನ್ನೂ ಒಂದು ವರ್ಷವೂ ಆಗದ ಆರು ಮಹಿಳೆಯರನ್ನು  ಜಿಲ್ಲಾಡಳಿತ ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿದೆ.
ಆರು ಮಹಿಳೆಯರು: ಹೆರಿಗೆಯಾಗಿ ಇನ್ನು ಒಂದು ವರ್ಷ ಪೂರೈಸದ ರೋಣ ತಾಲೂಕಿನ ಕೊಡಗಾನೂರ, ಶಿರಹಟ್ಟಿ ತಾಲೂಕಿನ ಮಾಡಳ್ಳಿ ಶಾಲೆಯ ಒಟ್ಟು 6 ಶಿಕ್ಷಕಿಯರನ್ನು ಸದ್ಯ ಚುನಾವಣಾ ಕಾರ್ಯಕ್ಕೆ ನಿಯುಕ್ತಿ ಮಾಡಲಾಗಿದೆ.
ಇವರೆಲ್ಲರ ಮಕ್ಕಳೂ ಇನ್ನೂ ಒಂದು ವರ್ಷಕ್ಕಿಂತ ಚಿಕ್ಕವರು. ಚುನಾವಣಾ ಕಾರ್ಯಕ್ಕೆ ಒಂದು ದಿನ ಮೊದಲೇ ಹೋಗಬೇಕಾಗುತ್ತದೆ. ಮತದಾನ ಪ್ರಕ್ರಿಯೆ ನಿರ್ವಹಿಸಿ, ಮತಯಂತ್ರ ಒಪ್ಪಿಸಿ ಮರಳುವ ತನಕ ಮಗುವಿಗೆ ಹಾಲುಣಿಸಲು, ಅದರ ಯೋಗಕ್ಷೇವು ನೋಡಿಕೊಳ್ಳಲು ತೊಂದರೆಯಾಗುತ್ತದೆ ಎನ್ನುವುದು ಅವರ ಗೋಳು.
ಗಮನ ನೀಡುತ್ತಿಲ್ಲ: ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಳಿಸಿದ ಯಾವುದೇ ಸಿಬ್ಬಂದಿಯ ಬದಲಾವಣೆ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ತಮ್ಮ ಕಚೇರಿ ಮುಂದೆ ಭಿತ್ತಿಪತ್ರ ಅಂಟಿಸಿದ್ದಾರೆ. ನಮ್ಮ ಮಗು ವರ್ಷಕ್ಕಿಂತ ಕಡಿಮೆ ವಯಸ್ಸಿನದಿದೆ, ಚುನಾವಣಾ ಆಯೋಗದ ಸೂಚನೆಯಂತೆ ನಮ್ಮನ್ನು ನಿಯೋಜಿಸಲು ಆಗದು ಎಂದು ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಿಗೆ ಮನವಿ ಕೊಡಲು ಹೋದರೆ, ಅವರು ಜಿಲ್ಲಾಧಿಕಾರಿಗಳನ್ನೇ ಭೇಟಿ ಮಾಡಿ ಎನ್ನುತ್ತಾರೆ. ಅವರನ್ನು ಸಂಪರ್ಕಿಸಿದರೆ, ನೀವು ಚುನಾವಣಾಧಿಕಾರಿ (ಸೆಕ್ಟರ್ ಆಫಿಸರ್ಸ್) ಭೇಟಿಯಾಗಿ ಎನ್ನುತ್ತಾರೆ. ಅಲ್ಲಿ ಹೋದಾಗ, ತಹಸೀಲ್ದಾರ್ಗೆ ಕೇಳಿ ಎಂಬ ಉತ್ತರ ಸಿಕ್ಕಿತು. ತಹಸೀಲ್ದಾರ್, ಬಿಇಒರನ್ನೇ ಕೇಳಿ ಎಂದು ಅಲೆದಾಡಿಸಿದರು ಎಂದು ಈ ತಾಯಂದಿರು ಅಲವತ್ತುಕೊಂಡರು.
ಬದಲಾವಣೆ ಅಸಾಧ್ಯವೇ?: ನಾವು ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದೇವೆ. ಮಗುವಿನ ಜನನ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದ್ದೇವೆ. ಆದರೆ, ಹಿರಿಯ ಅಧಿಕಾರಿಗಳು ಸ್ವೀಕೃತಿ ನೀಡುತ್ತಿಲ್ಲ. ನಿಮ್ಮನ್ನು ಚುನಾವಣಾ ಕಾರ್ಯದಿಂದ ಮುಕ್ತಿಗೊಳಿಸಲಾಗಿದೆ ಎಂದು ಈಗಲೇ ಹೇಳಲಾಗದು. ನಿಮ್ಮ ಅರ್ಜಿ ಸ್ವೀಕರಿಸಿ, ಜಿಲ್ಲಾಧಿಕಾರಿಗೆ ರವಾನಿಸಿದ್ದೇವೆ. ಏ. 11ರಂದು ನಡೆಯುವ ಚುನಾವಣಾ ತರಬೇತಿ ಕೇಂದ್ರಕ್ಕೆ ಬರಬೇಕು. ಅಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ, ನಿಮ್ಮನ್ನು ಬಿಡುಗಡೆ ಮಾಡಿದಂತೆ. ನಿಮ್ಮ ಹೆಸರು ಬಂದಲ್ಲಿ ಯಾವ ಕಾರಣಕ್ಕೂ ಬದಲಾವಣೆ ಅಸಾಧ್ಯ ಎನ್ನುತ್ತಾರೆ ಎಂದು ಈ ಶಿಕ್ಷಕಿಯರು ದೂರಿದರು.



ವರ್ಷಪೂರ್ತಿ ಹೇಗೆ ಮಾಡ್ತಾರೆ?
ನಾನು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಂತಹ ಯಾವುದೇ ತೊಂದರೆಗಳಿಲ್ಲ. ಮಗುವಿನ ಸ್ಥಿತಿಗಳ ಬಗ್ಗೆ ವೈದ್ಯಕೀಯ ದಾಖಲೆ ಸಲ್ಲಿಸಿ, ಅಗತ್ಯ ಎನಿಸಿದಲ್ಲಿ ವಿನಾಯ್ತಿ ನೀಡಲಾಗುವುದು. ಸುಳ್ಳು ಪ್ರಮಾಣಪತ್ರ ನೀಡಿದಲ್ಲಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಂದು ದಿನದ ಚುನಾವಣಾ ಕಾರ್ಯ ಮಾಡಲು ಸಿದ್ಧರಿಲ್ಲದ ಸಿಬ್ಬಂದಿ ವರ್ಷಪೂರ್ತಿ ಹೇಗೆ ಸರ್ಕಾರದ ಕೆಲಸ ಮಾಡುತ್ತಾರೆ?
 ಎನ್.ಎಸ್. ಪ್ರಸನ್ನಕುಮಾರ,
ಜಿಲ್ಲಾಧಿಕಾರಿ, ಗದಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.