ಪ್ರಖರ ಬಿಸಿಲಲ್ಲಿ ಅಬ್ಬರದ ಪ್ರಚಾರ
ಕನ್ನಡಪ್ರಭ ವಾರ್ತೆ, ಗದಗ. ಏ. 12
ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೆ ಜಿಲ್ಲಾದ್ಯಂತ ಚುನಾವಣೆಯ ಕಾವು ಬಿಸಿಲಿನಂತೆಯೇ ಏರುತ್ತಿದೆ. ಎಲ್ಲೆಡೆಯೂ ರಾಜಕೀಯದ ಚರ್ಚೆ ನಡೆಯುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ತತ್ತರಿಸಿದ್ದಾರೆ.
ಮತ ಸೆಳೆಯಲು ಕಸರತ್ತು ನಿರಂತರವಾಗಿದೆ. ಮೈಕ್ ಬ್ಯಾನರ್, ಬಂಟಿಂಗ್ಸ್, ಅಬ್ಬರದ ಪ್ರಚಾರಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಚುನಾವಣೆ ಆಯೋಗದ ಕ್ರಮ ಎಲ್ಲ ಅಭ್ಯರ್ಥಿಗಳಿಗೂ ಬಿಸಿ ಮುಟ್ಟಿಸಿದೆ. ಈ ಬಾರಿಯ ಪ್ರಚಾರ ಕಾರ್ಯವೂ ವಿಭಿನ್ನವಾಗಿಯೇ ಸಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತ ಯಾಚಿಸುವ ವಿಧಾನಕ್ಕೆ ಎಲ್ಲ ಅಭ್ಯರ್ಥಿಗಳೂ ಶರಣು ಹೋಗಿದ್ದು, ಉರಿ ಬಿಸಿಲನ್ನೂ ಲೆಕ್ಕಿಸದೇ ಎಡೆಬಿಡದ ಪ್ರಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಮಂತ್ರಿಗಳು ಮಾಜಿ ಶಾಸಕರು, ಜಿಪಂ ಸದಸ್ಯರು - ಹೀಗೆ ನಾನಾ ನಮೂನೆಯ ಮಂದಿ ಅಖಾಡಾದಲ್ಲಿದ್ದು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
ಕುಶಲೋಪರಿ ವಿಚಾರಣೆ: ಜಿಲ್ಲೆಯ ಎಲ್ಲ ಪಟ್ಟಣ, ಗ್ರಾಮಗಳ ವಾರ್ಡ್ವಾರು ಕಾರ್ಯಕರ್ತರು ಸಾರ್ವಜನಿಕರ ಬಹಿರಂಗ ಸಭೆ, ಗುಪ್ತಸಭೆಗಳ ಮೂಲಕ ಪ್ರಚಾರ ಕಾರ್ಯ ಭರದಿಂದ ನಡೆಸಿದ್ದು, ಮತದಾರರನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ಕಸರತ್ತು ಮಾಡುತ್ತಿದ್ದಾರೆ. ಹಿಂಬಾಲಕರ ಮನವೊಲಿಕೆ ತಮ್ಮ ಮತಕ್ಷೇತ್ರ ವ್ಯಾಪ್ತಿಯ ಪ್ರಮುಖ ವ್ಯಕ್ತಿಗಳು, ಗಣ್ಯರು, ಅತಿಗಣ್ಯರ ಪಟ್ಟಿ ಮಾಡಿಟ್ಟುಕೊಂಡಿರುವ ಅನೇಕ ಅಭ್ಯರ್ಥಿಗಳು ಅವರ ಮನೆಗೆ ಭೇಟಿ ನೀಡಿ, ಕುಶಲೋಪರಿ ವಿಚಾರಿಸುವುದರೊಂದಿಗೆ ಮತ ಯಾಚಿಸುತ್ತಿರುವುದು ವಿಶೇಷ. ಇವರ ಮೂಲಕ ಇತರ ಮತದಾರರ ಮೇ ಲೂ ಪ್ರಭಾವ ಬೀರುವುದು ಅವರ ಉದ್ದೇಶ. ಇನ್ನು ಕೆಲವರು ವಿವಿಧ ಧಾರ್ಮಿಕ ಮುಖಂಡರನ್ನು ಕಂಡು ಆಶೀರ್ವಾದ ಪಡೆದುಕೊಳ್ಳುವ ಜತೆಗೆ ಅವರ ಹಿಂಬಾಲಕರ ಮನವೊಲಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.
ಎಲ್ಲೆಡೆ ಬೇಡಿಕೆ: ನಿನ್ನೆ ಮೊನ್ನೆಯಷ್ಟೇ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡವರು ಈಗ ಮತ್ತೊಂದು ಪಕ್ಷದ ಪ್ರಚಾರ ಕಾರ್ಯದಲ್ಲಿ ಮಗ್ನರಾಗುವ ಮೂಲಕ ಪ್ರಚಾರವನ್ನು ಒಂದು ಬೇಡಿಕೆಯ ವಸ್ತುವನ್ನಾಗಿಸಿಕೊಂಡಿದ್ದಾರೆ. ಇದು ಕೆಲವೆಡೆ ಮತದಾರರಲ್ಲಿ ಗೊಂದಲಕ್ಕೂ ಕಾರಣವಾಗುತ್ತಿದೆ.
ಮೂಲ ಕಾರ್ಯಕರ್ತರು ಎಲ್ಲೆಡೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಾಡಿಗೆ ಆಧಾರದಲ್ಲಿ ಪ್ರಚಾರಕರನ್ನು ನೇಮಕ ಮಾಡಿಕೊಂಡಿದ್ದು, ಅವರು ಆಯಾ ಪಕ್ಷದ ಧ್ವಜಗಳನ್ನು ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಎಲ್ಲಿ ಹೆಚ್ಚಿಗೆ ಹಣ ನೀಡುತ್ತಾರೆ ಅವರತ್ತ ಮುಖ ಮಾಡುತ್ತಿದ್ದು, ಅಂತಹ ಪ್ರಚಾರಕರೀಗ ಭಾರಿ ಬೇಡಿಕೆ ಇದೆ.
ಜಾತಿ ಸಂಘಟನೆಗೆ ಮಣೆ
ಈ ಬಾರಿಯ ಚುನಾವಣೆಯಲ್ಲಿ ಜಾತಿ ಸಮೀಕರಣದ ಪ್ರಭಾವ ಬಲು ಜೋರಾಗಿಯೇ ನಡೆಯುತ್ತಿದೆ. ತಮ್ಮ ಜಾತಿ ಬಾಂಧವರ ಸಭೆ ಸಂಘಟಿಸಿ, ಎಲ್ಲಾ ವೋಟ್ಗಳನ್ನೂ ನಿಮಗೆ ಕೊಡಿಸುತ್ತೇವೆ ಎಂದು ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಕಾರ್ಯದಲ್ಲಿ ನಿರತರಾಗಿರುವ ಕೆಲವರು, ಶತಾಯ-ಗತಾಯ ಅಭ್ಯರ್ಥಿಗಾಗಿ ಹಗಲಿರುಳು ದುಡಿಯುತ್ತಿರುವ ಭಾವನೆ ಬಿಂಬಿಸುವಲ್ಲಿ ನಿರತರಾಗಿರುವುದೂ ಕಂಡುಬರುತ್ತಿದೆ. ನಮ್ಮ ವಾರ್ಡಿನಲ್ಲಿ ಇಂತಿಷ್ಟು ಮತಗಳಿವೆ. ಅವೆಲ್ಲವೂ ನಿಮಗೇ ಬರುವಂತೆ ನೋಡಿಕೊಂಡರೆ ವಾರ್ಡಿಗೆ ಏನು ಕೊಡುತ್ತೀರಿ? ನಮಗೇನು ಮಾಡುತ್ತೀರಿ? ಎಂದು ಮುಲಾಜಿಲ್ಲದೇ ಅಭ್ಯರ್ಥಿಗಳ ದುಂಬಾಲು ಬೀಳುತ್ತಿರುವವರ ಸಂಖ್ಯೆಗೂ ಈ ಬಾರಿ ದಿನೇ ದಿನೇ ಹೆಚ್ಚಳವಾಗುತ್ತಿದೆ ಎಂದು ಆಯಾ ಪಕ್ಷಗಳ ಮೂಲಗಳೇ ಮಾತನಾಡುತ್ತಿವೆ.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

