ಗದಗ

ಮೋದಿ ವರ್ತನೆ ಸಂಸ್ಕೃತಿಗೆ ಅಪಮಾನ: ಎಚ್ಕೆ

Published On :

ಗದಗ: ಮೋದಿ ತಮ್ಮ ಪತ್ನಿಯ ಬಗ್ಗೆ ಹಲವಾರು ವರ್ಷಗಳ ಕಾಲ ಮಾಹಿತಿ ಬಚ್ಚಿಟ್ಟು, ಈಗ ಅವರ ಹೆಸರು ಬಹಿರಂಗ ಪಡಿಸಿದ್ದು, ಇದು ಹಿಂದೂ ಸಂಸ್ಕೃತಿಗೆ ಮಾಡಿದ ಅಪಮಾನ ಎಂದರೆ ತಪ್ಪಾಗಲಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಅವರು, ತಮ್ಮ ವೈವಾಹಿಕ ಜೀವನದ ಕುರಿತು ವಾಸ್ತವ ಮರೆ ಮಾಚಿ ಮತದಾರರಿಗೆ ವಂಚನೆ ಮಾಡಿದ್ದಾರೆ. ಹಾಗಾಗಿ ಸ್ಪರ್ಧೆಯಲ್ಲಿ ಮುಂದುವರಿಯಲು ಅವರಿಗೆ ನೈತಿಕ ಹಕ್ಕಿಲ್ಲ ಎಂದರು.
ರಾಷ್ಟ್ರ ಮತ್ತು ಶ್ರೀಮಂತರು - ಈ ಆಯ್ಕೆ ಅವಕಾಶ ನೀಡಿದರೆ ಮೋದಿ ಶ್ರೀಮಂತರನ್ನೇ ಆಯ್ಕೆ ಮಾಡುತ್ತಾರೆ. ಅವರ ಆಡಳಿತಾವಧಿಯಲ್ಲಿ ಅದಾನಿ ಅವರಿಗೆ 45 ಸಾವಿರ ಎಕರೆ ಭೂಮಿ ನೀಡಿದ್ದೇ ಅದಕ್ಕೆ ಉತ್ತಮ ಉದಾಹರಣೆ.
ನೈಜ ಮುಖವಾಡ: ಗುಜರಾತ್ ಮಾದರಿ ಎನ್ನುತ್ತಿದ್ದಾರೆ. ಆದರೆ, ಆ ರಾಜ್ಯದಲ್ಲಿ ಸಿಎಜಿ ತನಿಖೆ ನಡೆಸುವ ವೇಳೆ 1,262 ಪ್ರಕರಣಗಳ ಕಡತಗಳ ಪರಿಶೀಲನೆ ನಡೆಯಬೇಕಿತ್ತು. ಆದರೆ, ಈ ವರೆಗೆ 574 ಕಡತಗಳನ್ನು ಮಾತ್ರ ತನಿಖೆಗೆ ನೀಡಿದ್ದಾರೆ. ಇನ್ನುಳಿದ ವಿಷಯ ಏನಾಯ್ತು ಎಂದು ಪ್ರಶ್ನಿಸಿದರು. ಮೋದಿ ಅವರ ನೈಜ ಮುಖವಾಡ ಕಳಚಿ ಬಿದ್ದಿದೆ.
ಇದರಿಂದಾಗಿ ಅವರನ್ನು ಬೆಂಬಲಿಸುತ್ತಿದ್ದ ಕಾರ್ಪೊರೇಟ್ ವಲಯಗಳೇ ಹಿಂದೆ ಸರಿಯುವಂತಾಗಿದೆ. ಬಿಜೆಪಿ ಈ ಹಿಂದಿನಂತೆ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತೆ ರಾಮಮಂದಿರ ನಿರ್ಮಾಣದ ವಿವಾದಾತ್ಮಕ ವಿಷಯ ಪ್ರಸ್ತಾಪಿಸಿದೆ. ಅವರಿಂದ ದೇಶದಲ್ಲಿ ನೆಮ್ಮದಿಗಿಂತ ಗೊಂದಲಗಳೇ ಹೆಚ್ಚಾಗಲಿವೆ. ಬಿಜೆಪಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕೆಳ ಮಟ್ಟದ ರಾಜಕಾರಣ ಮಾಡುತ್ತಿದ್ದು, ಚುನಾವಣೆಯ ಒಟ್ಟು ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ಮಾದರಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು.  ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರ ಹಾಜರಿದ್ದರು.

ಬಿಜೆಪಿ ಮೌನವೇಕೆ?
ಮೋದಿ ಅವರ ವೈವಾಹಿಕ ಜೀವನದ ಕುರಿತು ಆ ಪಕ್ಷದ ನಾಯಕರು ಅದೇಕೆ ಮೌನ ವಹಿಸಿದ್ದಾರೆ. ಕೂಡಲೇ ಅವರು ಸ್ಪಷ್ಟನೆ ನೀಡಬೇಕು. ಇನ್ನು ಬಳ್ಳಾರಿಯಲ್ಲಿ ಸಿಕ್ಕಿರುವ ಕೋಟಿ ಕೋಟಿ ಅಕ್ರಮ ಹಣದೊಂದಿಗೆ ಬಿಜೆಪಿ ಕರಪತ್ರಗಳು ಲಭ್ಯವಾಗಿದ್ದು, ಈ ಕುರಿತು ಪಕ್ಷದ ನಾಯಕರು ಮೌನ ಮುರಿಯುತ್ತಿಲ್ಲ. ಈ ರೀತಿ ಅವರಿಂದ ತಪ್ಪುಗಳು ಪದೇ ಪದೇ ನಡೆಯುತ್ತಿದ್ದರೂ ಅದರ ಬಗ್ಗೆ ಆ ಪಕ್ಷದ ನಾಯಕರು ಮಾತನಾಡದೇ ಇರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಹಾವೇರಿ ಸೇರಿದಂತೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.