ಗದಗ

ರೈತರು ಸಾವಯವ ಕೃಷಿಗೆ ಹಿಂತಿರುಗಲಿ

Published On :

ಗದಗ: ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಮುಕ್ತವಾದ ಅಪ್ಪಟ ಭಾರತೀಯ ಪರಂಪರಾಗತ ಕೃಷಿಯತ್ತ ರೈತರು ಹಿಂತಿರುಗಬೇಕೆಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಕರೆ ನೀಡಿದರು.
ಅವರು ನಗರದ ಜ. ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಈಚೆಗೆ ಜಾತ್ರಾ ಸಮಿತಿ ಹಾಗೂ ಕೃಷಿ ಉಪಸಮಿತಿ ಆಶ್ರಯದಲ್ಲಿ ಸಿರಿ(ಕಿರು)ಧಾನ್ಯಗಳಿಂದ ಸ್ಥಳದಲ್ಲಿಯೇ ಆಹಾರ ತಯಾರಿಸುವ ಸ್ಪರ್ಧೆ ಹಾಗೂ ಸಾವಯವ ಕೃಷಿ ಕುರಿತು ವಿಶೇಷ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿವರ್ಷ ಸಾವಯವ ಕೃಷಿಗೆ ಸಂಬಂಧಿಸಿದ ದೇಶಿ ಬೀಜಮೇಳ, ಸಂವಾದ, ಕೃಷಿ ಉಪಕರಣಗಳ ಪ್ರದರ್ಶನ ಮುಂತಾದ ಕಾರ್ಯಕ್ರಮಗಳ ಮೂಲಕ ಕೃಷಿಕರನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ನಡೆದಿರುವುದು ಸ್ವಾಗತಾರ್ಹ. ರೈತರು ಭಾರತ ದೇಶದ ಬೆನ್ನೆಲಬು ಎಂಬುದು ಕೇವಲ ಅಲಂಕಾರಕ್ಕಾಗಿ ಹೇಳುವ ಮಾತಲ್ಲ ದೇಶದ ಎಲ್ಲ ಪ್ರಗತಿಯ ಮೂಲವೇ ಕೃಷಿಯಾಗಿದೆ. ವಿಜ್ಞಾನದ ಹೆಸರಲ್ಲಿ ಕೃಷಿಯಲ್ಲಿ ರಸಾಯನಿಕ ಕ್ರಮ ಜಾರಿಗೆ ತಂದಕಾರಣ ಕೃಷಿ ಭೂಮಿ ಬರಡು ಸಮಸ್ಯೆ ಕಾಡುವುದು ನಡೆದಿದೆ. ಇದಕ್ಕಾಗಿ ಈಚೆಗೆ ಸಾವಯವ ಕೃಷಿಯತ್ತ ಹೆಚ್ಚು ಪ್ರಾಧಾನ್ಯ ಸಿಗುತ್ತಿರುವುದು ಅಭಿನಂದನೀಯ ಕಾರ್ಯ ಎಂದರು.
ಸಂವಾದ: ಸಾವಯವ ಕೃಷಿಕರ ತಂಡದಲ್ಲಿ ಡಿ.ಡಿ. ಭರಮಗೌಡರ, ಚನ್ನಪ್ಪ ಬೂದಿಹಾಳ, ಡಾ. ಮಲ್ಲಣ್ಣ ನಾಗರಾಳ, ಮಲ್ಲಣ್ಣ ಹಳ್ಳಿ, ದೇವೆಂದ್ರಪ್ಪ ಗೊಣೆಪ್ಪನವರ, ಕೃಷಿ ವಿವಿ, ಕೃಷಿ ವಿಸ್ತರಣಾ ಘಟಕದ ವಿಜ್ಞಾನಿಗಳ ತಂಡದಲ್ಲಿ ಡಾ. ಎಸ್.ಪಿ. ಹಲಗಲಿಮಠ ಡಾ. ರಾಜಕುಮಾರ, ಡಾ. ಶಾಲಿನಿ ಹುಯಿಲಗೋಳ, ಡಾ. ಗೀತಾ ಚನ್ನಾಳ ಭಾಗವಹಿಸಿ ಸಾವಯವ ಕೃಷಿ ಪದ್ಧತಿಯಲ್ಲಿ ಮಣ್ಣು ಫಲವತ್ತುಗೊಳಿಸುವುದು, ನೀರನ್ನು ಮರುಪೂರಣ ಮಾಡಿ ಕೃಷಿಗೆ ಬಳಸಿಕೊಳ್ಳುವುದು, ಬೀಜಗಳು ಮತ್ತು ಬೀಜೋಪಚಾರ, ಸಸ್ಯಗಳ ಸಂರಕ್ಷಣೆಯಲ್ಲಿ ಜಾನುವಾರು ಮತ್ತು ಸಸ್ಯಜನ್ಯಗಳಿಂದ ಕಷಾಯ ಮಾಡಿಕೊಂಡು ಬೆಳೆ ಸಂರಕ್ಷಣೆ ಜತೆಗೆ ಉತ್ಪನ್ನಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು.
ಬಹುಮಾನ ವಿತರಣೆ: ಸಿರಿ(ಕೀರು)ಧಾನ್ಯಗಳಾದ ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಉದಲ, ಕೊರಲ, ಜೋಳಗಳಿಂದ ಸ್ಥಳದಲ್ಲಿ ಆಹಾರ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. 18 ಮಹಿಳೆಯರು ವಿವಿಧ ಬಗೆ ಬಗೆಯ ತಿನಿಸುಗಳನ್ನು ಮಾಡಿ ತೋರಿಸುವುದರೊಂದಿಗೆ ಅವುಗಳಲ್ಲಿರುವ ಪೋಷಕಾಂಶಗಳು ಪೋಲಾಗದಂತೆ ಅಡುಗೆ ತಯಾರಿಸುವ ವಿಧಾನ ತಿಳಿಸಿದರು. ಮತ್ತು ಆ ಆಹಾರದ ಸತ್ವಗಳ ಬಗ್ಗೆ ವಿಶೇಷ ಚರ್ಚೆ ಕೈಗೊಂಡರು. ಇದೇ ಸಂದರ್ಭದಲ್ಲಿ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಜಾತ್ರಾ ಕೃಷಿ ಉಪಸಮಿತಿ ಅಧ್ಯಕ್ಷ ಜಿ.ಸಿ. ಕೊರವರ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಕಾರ್ಯದರ್ಶಿ ಎಂ.ಸಿ. ಐಲಿ, ಉಪಾಧ್ಯಕ್ಷ ಕೆ.ಎಚ್. ಬೇಲೂರ, ಅಶೋಕ ಲಕ್ಕುಂಡಿ, ದಾನಯ್ಯ ಗಣಾಚಾರಿ, ಶಿವಕುಮಾರ ಪಾಟೀಲ, ಶಿವಯೋಗಿ ತಡಸದ, ಪ್ರಕಾಶ ಉಗಲಾಟದ, ಸಂಗಣ್ಣ ಲಕ್ಕುಂಡಿ ಇದ್ದರು. ಕೃಷಿ ಸಮಿತಿ ಉಪಾಧ್ಯಕ್ಷ ಸದು ಮದರಿಮಠ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶಗೌಡ ಪಾಟೀಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.