'ಮೌನರಾಗ'ದಲ್ಲಿ ನವಜೀವನದ ಸವಿಗಾನ
- ಶಿವಕುಮಾರ ಕುಷ್ಟಗಿ
ಗದಗ: ಅಲ್ಲಿ ಮದುವೆ ಮನೆಯ ಎಲ್ಲ ಸಡಗರವೂ ಇತ್ತು. ಸಂಬಂಧಿಗಳು ಸಂಭ್ರಮ ಜೋರಾಗಿತ್ತು. ನವ ಜೀವನಕ್ಕೆ ಕಾಲಿಡುತ್ತಿದ್ದೇವೆ ಎನ್ನುವ ಹುರುಪು ನವ ದಂಪತಿಗಳಲ್ಲೂ ಇತ್ತು. ಆದರೆ ಹಸೆಮಣೆ ಏರಿದ ಆ ಎರಡು ಜೋಡಿಗಳ ಪ್ರತಿಕ್ರಿಯೆ ಮಾತ್ರ ಸನ್ನೆಯಲ್ಲೇ! ಏಕೆಂದರೆ ಅವರಿಗೆ ಮಾತು ಬಾರದು, ಕಿವಿ ಕೇಳದು.
ಇಂತಹ ಅಪೂರ್ವ ಮದುವೆಗೆ ಸಾಕ್ಷಿಯಾಗಿದ್ದು ಗದಗ ನಗರೇಶ್ವರ ದೇವಸ್ಥಾನದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪ.
ಗದಗ ನಗರದ ಕರಿದೇವರ ಗುಡಿ ಬಳಿಯ ನಿವಾಸಿ ದಿ. ಈರಪ್ಪ ಕರುಮುಡಿ ಅವರಿಗೆ 7 ಮಕ್ಕಳು. ಅವರಲ್ಲಿ 4 ಪುತ್ರರು, ಮೂವರು ಪುತ್ರಿಯರು. ಇವರ ಪೈಕಿ 3ನೇ ಪುತ್ರ ಅಡಿವೆಪ್ಪ ಹಾಗೂ 7ನೆಯವಳಾದ ವಿಜಯಲಕ್ಷ್ಮಿ ಇಬ್ಬರಿಗೂ ಮಾತು ಬಾರದು, ಕಿವಿ ಕೇಳದು. ಅಡಿವೆಪ್ಪನಿಗೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ರಾಜೇಶ್ವರಿ ಸಜ್ಜನರ ಬಾಳಸಂಗಾತಿಯಾಗಿದ್ದಾಳೆ. ವಿಜಯಲಕ್ಷ್ಮಿಯನ್ನು ಹುಬ್ಬಳ್ಳಿಯ ಗುರುರಾಜ ಭೂಸದ ವರಿಸಿದ್ದಾರೆ. ಈ ಇಬ್ಬರಿಗೂ ಮಾತು ಬಾರದು, ಕಿವಿ ಕೇಳಿಸದು.
ಕೊರತೆ ಕಾಡಲಿಲ್ಲ: ಮಾತು ಬಾರದಿದ್ದರೆ ಏನಂತೆ? ಕಿವಿ ಕೇಳದಿದ್ದರೆ ಏನು ಚಿಂತೆ? ಮದುವೆ ಸಂಭ್ರಮಕ್ಕೆ ಯಾವ ಕೊರತೆಯೂ ಇರಲಿಲ್ಲ. ಬಂಧುಗಳು, ಸ್ನೇಹಿತರು ಹಾಜರಿದ್ದು, ಹರಸಿ, ಸಿಹಿ ಭೋಜನ ಸವಿದು, ಎರಡೂ ಜೋಡಿಗಳು ಹೊಸ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿದರು. ಇಷ್ಟಕ್ಕೇ ಈ ಮದುವೆಯ ವಿಶೇಷತೆ ಮುಗಿಯಲಿಲ್ಲ. ಪರಿಸರ ಪ್ರೀತಿಯನ್ನೂ ಮೆರೆದು, ಮಾದರಿಯಾಯಿತು. ಮದುವೆಗೆ ಆಗಮಿಸಿದ ಸಂಬಂಧಿಗಳಿಗೆ ಸೀರೆ, ಕುಪ್ಪಸ, ಬಂಗಾರ ಕೊಡುವುದು ಸಾಮಾನ್ಯ. ಆದರೆ, ಈ ದಂಪತಿಗಳನ್ನು ಹರಸಲು ಬಂದವರಿಗೆ ಸಸಿಗಳನ್ನೇ ಉಡುಗೊರೆ ನೀಡಿ, ಈ ಕುಟುಂಬ ಪರಿಸರ ಪ್ರೀತಿಯನ್ನೂ ತೋರಿದೆ.
ಇಂತಹ ಅಪರೂಪದ ಮದುವೆಯಲ್ಲಿ ಪಾಲ್ಗೊಂಡಿದ್ದು, ಸಸಿಯನ್ನು ಉಡುಗೊರೆಯಾಗಿ ಪಡೆದಿದ್ದು ಹಲವರಿಗೆ ಖುಷಿ ಕೊಟ್ಟಿತು. ಮಹಿಳೆಯರ ಗುಂಪಿನಲ್ಲಿ ಇದೇ ಚರ್ಚೆ ಜೋರಾಗಿತ್ತು.
ಮೂಗರು ಸಾಕ್ಷಿಯಾದರು
ಮದುವೆ ಮನೆಯಲ್ಲಿ ಸಾಮಾನ್ಯರಂತೆ ವಧು-ವರರ ಗೆಳೆಯರೂ 45ಕ್ಕೂ ಹೆಚ್ಚು ಗೆಳೆಯರು ಸಾಕ್ಷಿಯಾದರು. ಅವರೆಲ್ಲರಿಗೂ ಮಾತು ಬಾರದು. ಆದರೂ, ಮನದುಂಬಿ ತಮ್ಮದೇ ಶೈಲಿಯಲ್ಲಿ ಹರಸಿದ್ದನ್ನು ಕಂಡವರ ಕಣ್ಣುಗಳು ಮಂಜಾದವು.
ಸಡಗರಕ್ಕೆ ಕೊರತೆಯಿಲ್ಲ
ಇದು ಬಡವರ ಮದುವೆ. ಓಣಿಯ ಹಿರಿಯರು, ಯುವಕರು ಕೂಡಿ ಮದುವೆ ಮಾಡಿದ್ದೇವೆ. ಇಂಥ ಮದುವೆಗೆ ಸಾಕ್ಷಿಯಾಗಿದ್ದೇ ದೊಡ್ಡ ಖುಷಿ.
-ಕಾಶಪ್ಪ ಬೇಟಗೇರಿ, ಮದುವೆಯಲ್ಲಿ ಪಾಲ್ಗೊಂಡ ಹಿರಿಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

