ಗದಗ

ಬೆಳವಣಕಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

Published On :

ರೋಣ: ನೀರಿಲ್ಲದೇ ಕಸ, ಕಡ್ಡಿಗಳಿಂದ ತುಂಬಿ, ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಕುಳಿತುಕೊಳ್ಳುವಂತ ದುಸ್ಥಿತಿ - ಇದು ತಾಲೂಕಿನ ಬೆಳವಣಕಿ ಗ್ರಾಮದ ಬಸ್ ನಿಲ್ದಾಣದ ಸ್ಥಿತಿ. ಇಲ್ಲಿನ ಬಸ್ ನಿಲ್ದಾಣ ಕನಿಷ್ಠ ಸೌಲಭ್ಯಗಳಿಲ್ಲದೇ ಅವ್ಯವಸ್ಥೆಯ ಆಗರವಾಗಿದೆ.
ಜಿಪಂ ಅನುದಾನದಲ್ಲಿ 8 ವರ್ಷಗಳ ಹಿಂದೆ ಜಿಪಂ ಅಧ್ಯಕ್ಷೆ ಶಾಂತವ್ವ ಗುಜ್ಜಾಳ ಅಧಿಕಾರ ಅವಧಿಯಲ್ಲಿ ನಿರ್ಮಾಣವಾದ ಬಸ್ ನಿಲ್ದಾಣ ಹೆಸರಿಗೆ ಮಾತ್ರ ಬಸ್ ನಿಲ್ದಾಣ. ಬಸ್‌ಗಳು ನಿಲ್ದಾಣದಲ್ಲಿ ಬಂದು ನಿಂತಿರುವುದಿಲ್ಲ. ಇಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರು. ಇದರಿಂದಾಗಿ ಮಹಿಳಾ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಪ್ರಯಾಣಿಕರಿಗೆ ತಂಗಲು ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಲಾದ ಬಸ್ ನಿಲ್ದಾಣ ದುರ್ಬಳಕೆಯಾಗುತ್ತಿದೆ. ಗ್ರಾಮದ ಕೆಲವರಿಗೆ ನಿತ್ಯ ವಾಸಸ್ಥಾನವೂ ಆಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ನಿರ್ಮಿಸಲಾದ ಕಟ್ಟೆ ಅವರಿಗೇ ಮೀಸಲು. ಅಲ್ಲಿಯೇ ಹಾಸಿಗೆ ಹಾಸಿಕೊಂಡು, ಅರೆನಗ್ನರಾಗಿ ಮಲಗುತ್ತಾರೆ. ಹೀಗಾಗಿ ಮಹಿಳಾ ಪ್ರಯಾಣಿಕರು ಮುಜಗರಪಟ್ಟುಕೊಂಡು ಇತ್ತ ಸುಳಿಯುತ್ತಿಲ್ಲ. ನಿಲ್ದಾಣದ ಕಾಂಪೌಂಡ್ ಸುತ್ತಲೂ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಪ್ರಯಾಣಿಕರಿಗಾಗಿಯೇ ಶೌಚಾಲಯ ನಿರ್ಮಿಸಲಾಗಿದ್ದು, ಅದು ಕಸ, ಕಡ್ಡಿ, ಪ್ಲಾಸ್ಟಿಕ್ ಹಾಳೆಗಳಿಂದ ತುಂಬಿದೆ. ಇಲ್ಲಿ ಕಾಲು ಇಡಲು ಭಯ ಪಡುವಂತಾಗಿದೆ. ಆದ್ದರಿಂದ ಬಸ್ ನಿಲ್ಲುವ ಸ್ಥಳ ಮತ್ತು ಕಾಂಪೌಂಡ್ ಗೋಡೆಗೆ ತಾಗಿಕೊಂಡೇ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ.
ನೂರಾರು ಬಸ್‌ಗಳು: ತಾಲೂಕಿನ ಪ್ರಮುಖ ಗ್ರಾಮವಾದ ಬೆಳವಣಕಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಹೈದರಾಬಾದ್, ಹುಬ್ಬಳ್ಳಿ, ನರಗುಂದ, ನವಲಗುಂದ, ಬೆಳಗಾವಿ, ಗೋಕಾಕ, ಯಲ್ಲಮ್ಮನಗುಡ್ಡ, ಗದಗ, ಹೊಳೆಆಲೂರು, ಕೆರೂರ ಮುಂತಾದ ಕಡೆ ಹೋಗಿ, ಬರಲು ಇಲ್ಲಿಗೆ ನಿತ್ಯ ನೂರಾರು ಸಾರಿಗೆ ಬಸ್‌ಗಳು ಬಂದು ಹೋಗುತ್ತವೆ. ವಿಪರ್ಯಾಸವೆಂದರೆ ಅದ್ಯಾವ ಬಸ್‌ಗಳೂ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುತ್ತಿಲ್ಲ. ನಿಲ್ದಾಣದ ಹೊರಗೆ, ಎಲ್ಲೆಂದರಲ್ಲಿ ಬಸ್‌ಗಳು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ನಿತ್ಯ ಗೊಂದಲ.
ಅಡ್ಡೆಯಾದ ಬಸ್ ನಿಲ್ದಾಣ: ಪುಂಡ, ಪೋಕರಿಗಳ, ಪಡ್ಡೆ ಹುಡುಗರ ಹರಟೆಯ ಅಡ್ಡೆಯಾಗಿ ಮಾರ್ಪಟ್ಟ ಬಸ್ ನಿಲ್ದಾಣ ಸಭ್ಯ ಪ್ರಯಾಣಿಕರಿಗೆ ಮುಜುಗರದ ತಾಣ. ಹಲವರು ಇಲ್ಲಿ ಬಂದು ನಿಲ್ಲಲೂ ಭಯಪಡುತ್ತಾರೆ. ಅಲ್ಲದೆ ಇಲ್ಲಿ ಹಂದಿ, ನಾಯಿಗಳು ಓಡಾಡುತ್ತಿವೆ. ಸಾರಿಗೆ ಬಸ್ ನಿಲ್ಲುವ ಆವರಣದಲ್ಲಿ ಖಾಸಗಿ ವಾಹನಗಳ ದರ್ಬಾರೇ ಹೆಚ್ಚಾಗಿದೆ. ಬಸ್ ನಿಲ್ದಾಣ ತುಂಬ ಖಾಸಗಿ ವಾಹನಗಳೇ ನಿಂತಿರುತ್ತವೆ. ಈ ಕುರಿತು ಗಮನ ಹರಿಸಬೇಕಾದ ಸ್ಥಳೀಯ ಗ್ರಾಪಂ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಹೋರಾಟ ಮಾಡುತ್ತೇವೆ...
ಪ್ರಯಾಣಿಕರಿಗೆ ಅನೂಕೂಲವಾಗುವ ರೀತಿಯಲ್ಲಿ ಬಸ್ ನಿಲ್ದಾಣದ ಅವ್ಯವಸ್ಥೆ ಕೂಡಲೇ ಸರಿಪಡಿಸಿ, ಅಭಿವೃದ್ಧಿಪಡಿಸುವಲ್ಲಿ ಸ್ಥಳೀಯ ಗ್ರಾಪಂ ಅಧಿಕಾರಿ ಮತ್ತು ಆಡಳಿತ ಮುಂದಾಗಬೇಕು. ಕುಂಟು ನೆಪ ಹೇಳಿ ವಿಳಂಬ ಮಾಡಿದಲ್ಲಿ ಗ್ರಾಪಂಗೆ ಬೀಗ ಹಾಕಿ ಹೋರಾಟ ನಡೆಸಲಾಗುವುದು.
-ಮಲ್ಲಣ್ಣ ಅಂಗಡಿ, ಉಮೇಶ ಮೇಣಸಗಿ, ಶರಣಪ್ಪ ವಡ್ಡಟ್ಟಿ, ಸದ್ದಾಂ ಹುಸೇನ, ಗ್ರಾಮಸ್ಥರು
ವ್ಯವಸ್ಥೆ ಕಲ್ಪಿಸಿ...
ಅನೇಕ ವರ್ಷಗಳಿಂದ ಬೆಳವಣಕಿ ಬಸ್ ನಿಲ್ದಾಣ ಮೂಲ ಸೌಕರ್ಯಗಳಿಂದ ನರಳುತ್ತಿದ್ದು, ಸೌಲಭ್ಯ ಕಲ್ಪಿಸುವಲ್ಲಿ ಸ್ಥಳೀಯ ಗ್ರಾಪಂ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಕೂಡಲೇ ಗ್ರಾಪಂ ಅಧಿಕಾರಿಗಳು ಎಚ್ಚೆತ್ತು, ಬಸ್ ನಿಲ್ದಾಣದ ಆವರಣವನ್ನು ಡಾಂಬರೀಕರಣಗೊಳಿಸಿ, ಪ್ರಯಾಣಿಕರಿಗೆ ನೀರು, ವಿದ್ಯುತ್, ಶೌಚಾಲಯ ಮತ್ತು ಮಹಿಳಾ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು.
-ಶಿವು ಹಾಲಬಾವಿ, ವಕೀಲರು
ಸಾರಿಗೆ ಇಲಾಖೆ ವಶಕ್ಕೆ...
ಬಸ್ ನಿಲ್ದಾಣವನ್ನು ಸಾರಿಗೆ ಇಲಾಖೆ ವಶಕ್ಕೆ ನೀಡಲು ಗ್ರಾಮಸ್ಥರು ಒಪ್ಪುತ್ತಿಲ್ಲ. ಗ್ರಾಪಂದಿಂದ ಅಭಿವೃದ್ಧಿಗೆ ಲಕ್ಷಾಂತರ ರು. ಅವಶ್ಯವಿದೆ. ಶಾಸಕರು ಮತ್ತು ಜಿಪಂ, ತಾಪಂ ಹೆಚ್ಚಿನ ಅನುದಾನ ಕಲ್ಪಿಸಿದಲ್ಲಿ ಅಭಿವೃದ್ಧಿಪಡಿಸಲು ಅನೂಕೂಲವಾಗುತ್ತದೆ.
-ಮಾಗುಂಡಪ್ಪ ಅಂಗಡಿ, ಗ್ರಾಪಂ ಸದಸ್ಯ
ಸೌಲಭ್ಯ ಕಲ್ಪಿಸಲು ಸಲಹೆ
ಸದ್ಯ ಚುನಾವಣೆ ನೀತಿ ಸಂಹಿತೆಯಿದ್ದು, ಬಳಿಕ ನಡೆಯುವ ತಾಪಂ ಸಭೆಯಲ್ಲಿ ಬಸ್ ನಿಲ್ದಾಣದ ಅಭಿವೃದ್ಧಿ ಕುರಿತು ಪ್ರಸ್ತಾಪಿಸಲಾಗುವುದು. ಸದ್ಯ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಗ್ರಾಪಂಗೆ ಸಲಹೆ ನೀಡಲಾಗುವುದು.
-ರುದ್ರವ್ವ ತಾಳಿ,
ಬೆಳವಣಕಿ ತಾಪಂ ಸದಸ್ಯೆ


-ಪಿ.ಎಸ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.