ರುದ್ರಾಪುರ-ಕಲ್ಲಿಗನೂರು ರಸ್ತೆ ಕಾಮಗಾರಿ ಕಳಪೆ
ಡಿ.ಜಿ. ಮೋಮಿನ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 27
ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ರು. 97.30 ಲಕ್ಷ ವೆಚ್ಚದಲ್ಲಿ ಸಮೀಪದ ರುದ್ರಾಪುರದಿಂದ ಕಲ್ಲಿಗನೂರು ಗಾಮಕ್ಕೆ ತೆರಳುವ 2.47 ರಸ್ತೆಯ ಡಾಂಬರೀಕರಣ ಕಾಮಗಾರಿ ಇಲಾಖೆ ದಾಖಲೆಯಲ್ಲಿ ಪೂರ್ಣಗೊಂಡಿದೆ. ಆದರೆ, ವಾಸ್ತವದಲ್ಲಿ ಎಲ್ಲವೂ ಅಯೋವುಯವಾಗಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದಿನ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಲ್ಲಿ 19-3-2013ರಂದು ರಾಜ್ಯ ಸರ್ಕಾರ ಪ್ರಾಯೋಜಿತ ಗದಗ ಯೋಜನಾ ಘಟಕ ವತಿಯಿಂದ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಗಂಗಾವತಿಯ ಎಸ್. ಪ್ರಸಾದ ಗುತ್ತಿಗೆದಾರ ರಸ್ತೆ ಕಾಮಗಾರಿಯನ್ನು 18-2-2014ರಂದು ಪೂರ್ಣಗೊಳಿಸಲಾಗಿದೆ ಎಂದು ರಸ್ತೆ ಬದಿ ಕಾಮಗಾರಿ ಕುರಿತು ನಾಮಫಲಕ ಹಾಕಿರುವುದು ಗ್ರಾಮಸ್ಥರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಮನಸೋ ಇಚ್ಛೆಯಂತೆ ಕಾಮಗಾರಿ: ರಸ್ತೆ ನಿರ್ಮಿಸಿದ ಬಳಿಕವೂ 5 ವರ್ಷಗಳ ವರೆಗೆ ಗುತ್ತಿಗೆದಾರನೇ ನಿರ್ವಹಣೆ ಮಾಡುವ ಬಗೆಗೆ ಫಲಕದಲ್ಲಿ ತಿಳಿಸಲಾಗಿದೆ. ಆದರೆ, ವಾಸ್ತವದಲ್ಲಿ ಇನ್ನೂ ಕಾಮಗಾರಿ ಮುಗಿದಿಲ್ಲ. ಮೊದಲಿದ್ದ ರಸ್ತೆ ಅಗೆದು ಅಲ್ಲಿ ಮಣ್ಣನ್ನು ಹಾಕಿ ಅದರ ಮೇಲೆ ಜಲ್ಲಿಕಲ್ಲು ಹಾಕಲಾಗಿದೆ. ಅದರ ಮೇಲೆ ರೂಲರ್ ಓಡಾಡುತ್ತಿದೆ. ಇಲಾಖೆ ನಿಗದಿಪಡಿಸಿದಂತೆ ರಸ್ತೆ ಕಾಮಗಾರಿ ನಡೆಯದೇ ಗುತ್ತಿಗೆದಾರ ಮನಸೋ ಇಚ್ಛೆ ಕಾಮಗಾರಿ ನಡೆಸಲಾಗಿದೆ ಎಂದು ಗ್ರಾಮಸ್ಥರು ಆಪಾದಿಸಿದರು.
ಸರ್ಕಾರ ಆಶಯಕ್ಕೆ ತಣ್ಣಿರು: ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೀರಿನಂತೆ ಹಣ ಖರ್ಚು ಮಾಡುತ್ತಿದೆ. ಜತೆಗೆ ಕಳಪೆ ಕಾಮಗಾರಿ ಬಗ್ಗೆ ಜನ ಸಂಶಯ ಪಡುತ್ತಾರೆ. ಇಂತಹ ಸಂದರ್ಭದ ಮಧ್ಯೆ ರೋಣ ಕ್ಷೇತ್ರದಲ್ಲಿ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಲ್ಲಿ ಹೊಸದಾಗಿ ನಿರ್ಮಿಸಿರುವ ಡಾಂಬರೀಕರಣದ ರಸ್ತೆ ಗುಣಮಟ್ಟ ಪರೀಕ್ಷೆ ಇಲಾಖೆ ಅಧಿಕಾರಿಗಳ ತಂಡ ಈಗ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿನ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ವೆಚ್ಚದಿಂದ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ರೋಣ ಕ್ಷೇತ್ರದಲ್ಲಿ ಮುಖ್ಯ ರಸ್ತೆಯಿಂದ ಗ್ರಾಮಗಳಿಗೆ ಸಂಪರ್ಕಿಸುವ ಒಟ್ಟು 7 ರಸ್ತೆ ಸುಧಾರಣೆ ಜತೆ ಡಾಂಬರೀಕರಣ ಕಾಮಗಾರಿ ಈಗ ಪೂರ್ಣವಾಗಿದೆ ಎಂದು ಇಲಾಖೆ ತಿಳಿಸಿದೆ.
ಆದರೆ, ವಾಸ್ತವದಲ್ಲಿ ರಸ್ತೆ ಕಾಮಗಾರಿ ಗುಣಮಟ್ಟ ನೈಜತೆ ಅಷ್ಟೊಂದು ಸರಿಯಾಗಿಲ್ಲ ಎಂಬುದಕ್ಕೆ ಈ ರಸ್ತೆ ಸಾಕ್ಷಿಯಾಗಿದೆ ಎಂದು ಜನ ಲೇವಡಿ ಮಾಡಿದ್ದಾರೆ.
ರಸ್ತೆ ಗುಣಮಟ್ಟ ಪರೀಕ್ಷೆಗೆ ಆಗ್ರಹ
ಸರ್ಕಾರ ನಿಗಪಡಿಸಿದ ಮಾನದಂಡ ಅಳತೆ ಸರಿಯಾಗಿ ರಸ್ತೆ ನಿರ್ಮಾಣ ಆಗಿದೆ. ಇಲ್ಲವೂ ಎಂಬುದನ್ನು ಪರೀಕ್ಷಿಸಲು ಮುಂದಾಗಬೇಕು. ರಸ್ತೆ ಒಳಗಿರುವ ಎಲ್ಲ ವಸ್ತು ಅಳತೆ ಮಾಡಬೇಕು. ನಾನಾ ನಮೂನೆ ಜಲ್ಲಿಕಲ್ಲು, ಮರುಳು ಎಲ್ಲ ವಸ್ತು ಹೊರತೆಗೆದು ಪರೀಕ್ಷಿಸಬೇಕು ಎಂಬುದು ಸರ್ಕಾರದ ನಿಯಮ. ಅದೇ ರೀತಿ ಪರೀಕ್ಷಿಸಬೇಕು. ರಸ್ತೆ ಕಾಮಗಾರಿ ನಡೆಸುವಾಗ ಮೂರು ಬಾರಿ ರಸ್ತೆಯ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತೆ. ಇವುಗಳ ಆಧಾರ ಮೇಲೆ ಗುತ್ತಿಗೆದಾರನಿಗೆ ಹಣ ಸಂದಾಯ ಆಗುವಂತೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

