ರೋಣಕ್ಕೆ ರು. 2.51 ಕೋಟಿ
ಕನ್ನಡಪ್ರಭ ವಾರ್ತೆ, ರೋಣ, ಫೆ. 1
ಹಾವೇರಿ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರತಿಯೊಂದು ವಿಧಾನಸಭೆ ಕ್ಷೇತ್ರಕ್ಕೂ ಸಂಸದೀಯ ನಿಧಿಯನ್ನು ಸಮರ್ಪಕವಾಗಿ ಹಂಚಿದ್ದು, ಅದರಲ್ಲಿ ರೋಣ ಮತಕ್ಷೇತ್ರಕ್ಕೆ ರು. 2.51 ಕೋಟಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಖರ್ಚು ಮಾಡಲಾಗಿದೆ ಎಂದು ಹಾವೇರಿ ಲೋಕಸಭೆ ಸದಸ್ಯ ಶಿವಕುಮಾರ್ ಉದಾಸಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ನ್ಯಾಯವಾದಿಗಳ ಸಂಘದ ಸಭಾಭವನ ನಿರ್ಮಾಣ ಕಾಮಗಾರಿಗೆ ಇಟ್ಟಿಗೆ ನೆಡುವದರ ಮೂಲಕ ಚಾಲನೆ ನೀಡಿ, ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನಗಿದ್ದ ಸಂಸದೀಯ ನಿಧಿಯಲ್ಲಿನ ಒಟ್ಟು 20.8 ಕೋಟಿ ಈಗಾಗಲೇ ಖರ್ಚು ಮಾಡಲಾಗಿದೆ. ಇದರಲ್ಲಿ ಬಹುತೇಕ ಅನುದಾನವನ್ನು ಸಭಾಭವನ ನಿರ್ಮಿಸಲು ಬಿಡುಗಡೆ ಮಾಡಲಾಗಿದೆ. ಅತಿ ಹೆಚ್ಚು ಅನುದಾನವನ್ನು ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಖರ್ಚು ಮಾಡಲಾಗಿದೆ. ಪಟ್ಟಣದಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಸುಮಾರು ರು. 15 ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಿಸಿಕೊಡುವಂತೆ ಬೇಡಿಕೆಯಿಟ್ಟಿದ್ದರು. ಅದರಲ್ಲಿ ರು. 5 ಲಕ್ಷ ಬಿಡುಗಡೆ ಮಾಡಲಾಗಿದೆ. ಆದರೆ ಈಗಾಗಲೇ ನನ್ನ ಸಂಸದೀಯ ನಿಧಿಯಲ್ಲಿ ಇದ್ದ ಹಣವನ್ನೆಲ್ಲವನ್ನು ಖರ್ಚು ಮಾಡಲಾಗಿದೆ.
ನ್ಯಾಯವಾದಿಗಳ ಸಂಘದ ಸಭಾಭವನಕ್ಕೆ ಇನ್ನು ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದಲ್ಲಿ, ಮತ್ತೊಮ್ಮೆ ತಮ್ಮ ಸೇವೆ ಮಾಡುವಲ್ಲಿ ಮತ್ತೆ ತಾವುಗಳು ಆಶೀರ್ವದಿಸಿದಲ್ಲಿ ಖಂಡಿತಾ ಈಡೇರಿಸುತ್ತೇನೆ ಎಂದು ಭರವಸೆ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಂ. ಡಂಬಳ ಮಾತನಾಡಿ, ನ್ಯಾಯವಾದಿಗಳ ಸಂಘದ ಕಾರ್ಯ ಚಟುವಟಿಕೆಗಳು, ಚಿಂತನ-ಮಂಥನಗಳು ಜರುಗಬೇಕಾದಲ್ಲಿ ಒಂದು ಸಭಾಭವನದ ಅಗತ್ಯತೆ ಬಹು ವರ್ಷಗಳಿಂದಿತ್ತು. ಅದನ್ನರಿತ ಸಂಸದ ಶಿವಕುಮಾರ್ ಉದಾಸಿ ಸಭಾಭವನ ನಿರ್ಮಾಣಕ್ಕೆ ರು. 5 ಲಕ್ಷ ಗಳನ್ನು ತಮ್ಮ ನಿಧಿಯಿಂದ ಬಿಡುಗಡೆ ಮಾಡಿದ್ದು ಅಭಿನಂದನಾರ್ಹ ಸಂಗತಿಯಾಗಿದೆ. ಮುಂಬರುವ ದಿನದಲ್ಲಿ ಸಂಘಕ್ಕೆ ತಮ್ಮ ಸೇವೆ ಅಗತ್ಯವಿದೆ ಎಂದರು. ಹಿರಿಯ ನ್ಯಾಯವಾದಿ ವ್ಹಿ.ಎ. ದಿಂಡೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸಚಿವ ಕಳಕಪ್ಪ ಬಂಡಿ, ವಿ.ಆರ್. ಗುಡಿಸಾಗರ, ಎಂ.ವಿ. ಯಾಳಗಿ, ಕೆ.ಜಿ. ಉಡುಪಿ, ಎಂ.ಎನ್. ಬಾಣದ, ಎಂ.ಬಿ. ಸಜ್ಜನ, ಗುರುರಾಜ ಕುಲಕರ್ಣಿ, ಶಿವಾನಂದ ಜಿಡ್ಡಿಬಾಗಿಲ, ಬಸವಂತಪ್ಪ ತಳವಾರ, ಎಂ.ಎನ್.ಪಾಟೀಲ, ಎಸ್.ಎಂ. ಪಾಟೀಲ, ಎಂ.ಎಸ್. ಹೂಗಾರ, ಎಫ್.ಎಚ್. ಕಾಡದೇವರಮಠ, ಕಟ್ಟಿಮನಿ, ವಿ.ಡಿ.ಪಾವಾಸ್ಕರ, ಶಿವು ಹಾಲಬಾವಿ, ವೈ.ಡಿ. ನದಾಫ ಉಪಸ್ಥಿತರಿದ್ದರು. ಎಸ್.ಎನ್. ತಿಮ್ಮನಗೌಡ್ರ ಸ್ವಾಗತಿಸಿದರು. ಎಸ್.ಆರ್. ಹಾದಿಮನಿ ನಿರೂಪಿಸಿದರು. ಎಸ್.ಆರ್. ಮುಗಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

