ಗದಗ

ಜಲಾನಯನ ನಿರ್ವಹಣೆ ಜಾಗೃತಿ ಜಾಥಾ

Published On :

ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಜಾಗೃತಿ ಜಾಥಾ ಈಚೆಗೆ ಶರಣಬಸವೇಶ್ವರ ಪ್ರೌಢಶಾಲೆಯಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಾಥಾಕ್ಕೆ ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಕಾಶಪ್ಪನವರ ಚಾಲನೆ ನೀಡಿದರು. ಜಿಲ್ಲಾ ಸಂಯೋಜಕ ತಿಪ್ಪೇಸ್ವಾಮಿ ಎಸ್., ಗ್ರಾಪಂ ಮಾಜಿ ಉಪಾಧ್ಯಕ್ಷ ಸೋಮಣ್ಣ ರಾಠೋಡ ಮಾತನಾಡಿದರು. ಕಳಕಪ್ಪ ಕಂಬಳಿ, ಶಂಕ್ರಪ್ಪ ಹಾದಿಮನಿ, ಶಿವಕುಮಾರ ಜಾಧವ, ಯಲ್ಲಪ್ಪ ಶಂಕ್ರಿ, ಯಲ್ಲವ್ವ ಭೂಮದ, ವಿಜಯಕುಮಾರ ಮಳಗಿ, ಯಮನೂರಸಾಬ ಮುಜಾವರ, ಶರಣಪ್ಪ ಜಿಗಳೂರ, ದಾವಲಸಾಬ ಮುಜಾವರ, ಮಹಾಂತಯ್ಯ ಕಲ್ಮಠ ಮುಂತಾದವರು ಉಪಸ್ಥಿತರಿದ್ದರು. ಬಿ.ಎ. ಅಂಗಡಿ ಸ್ವಾಗತಿಸಿದರು. ಶರಣಪ್ಪ ಮೂಗನೂರ ನಿರೂಪಿಸಿದರು. ಶಹಬುದ್ದೀನ್ ನರೇಗಲ್ ವಂದಿಸಿದರು.

ಶಾಂತಿಗಾಗಿ ಸಂಗೀತ ಸವಿಯಿರಿ: ನಂಜುಂಡಯ್ಯ
ಗದಗ: ಇಂದು ಮನುಷ್ಯ ಕೆಲಸದ ಒತ್ತಡಕ್ಕೆ ಸಿಲುಕಿ ಅವನಿಗೆ ಶಾಂತಿ ಮರಿಚಿಕೆಯಾಗಿದ್ದು, ಪ್ರತಿಯೊಬ್ಬರೂ ಶಾಂತಿಗಾಗಿ ಸಂಗೀತ ಸವಿಯಬೇಕೆಂದು ಆದಿ ಚುಂಚನಗಿರಿಯ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸಿ.ಎನ್. ನಂಜುಂಡಯ್ಯ ಸಲಹೆ ಮಾಡಿದರು. ನಗರದ ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಈಚೆಗೆ ಆದಿ ಚುಂಚನಗಿರಿ ಮಠದ ಲಿಂ. ಜ. ಬಾಗಂಗಾಧರನಾಥ ಶ್ರೀಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ಹಾಗೂ ಮಂಜುನಾಥ ಮಾಶಾಳರ ಶ್ರೀಗುರು ಗುಣಗಾನ ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿದರು. ಜ. ನಿರ್ಮಲಾನಾಂದನಾಥ ಶ್ರೀ ಹಾಗೂ ಪ್ರಸನ್ನನಾಥ ಶ್ರೀಗಳು ಇದ್ದರು.

ಟೆನಿಕ್ವಾಯಟ್ ಸ್ಪರ್ಧೆಯಲ್ಲಿ ದ್ವಿತೀಯ
ಗಜೇಂದ್ರಗಡ: ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನಿಕ್ವಾಯಟ್ ಸ್ಪರ್ಧೆಯಲ್ಲಿ ಲಕ್ಕಲಕಟ್ಟಿ ಪ್ರಾಥಮಿಕ ಶಾಲೆಯ ಸೋಮಶೇಖರ್ ಚವ್ಹಾಣ, ಪ್ರವೀಣ ಜಾವೂರ, ಪ್ರಮೋದ ಜಿಗಳೂರ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಸ್.ವಿ. ಸಿದ್ದರೆಡ್ಡಿ ಹೇಳಿದರು.  ಗಣರಾಜ್ಯೋತ್ಸವ ಸಮಾರಂಭದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಎಚ್.ಆರ್. ನಿಡಗುಂದಿ ಅವರನ್ನು ಸನ್ಮಾನಿಸಿದರು. ಚನ್ನಬಸಪ್ಪ ಬೆನಕವಾರಿ, ಪಾರವ್ವ ರಾಠೋಡ, ಶಿಕ್ಷಕ ಎಸ್.ಎಸ್. ಸಜ್ಜನ, ಪಿ.ಸಿ. ಕಮ್ಮಾರ, ಜಿ.ಎಸ್. ವಡ್ಡರ, ಎಸ್.ಎಸ್. ಡೊಳ್ಳಿನ, ಎಸ್.ಕೆ. ಪೂಜಾರ, ಎಚ್.ಡಿ. ಲಂಗೋಟಿ, ಸುನಿಲಕುಮಾರ ಇದ್ದರು.

ಸರ್ದಾರ ಪಟೇಲ್ ಸ್ಫೂರ್ತಿ ಚಿಲುಮೆ
ರೋಣ: ದೇಶ ಕಂಡ ಅಪ್ರತಿಮ, ಅಪ್ಪಟ ಹೋರಾಟಗಾರ, 565 ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರವರ ವ್ಯಕ್ತಿತ್ವ, ಚಿಂತನೆ, ಆದರ್ಶಗಳು ಇಂದಿನ ಯುವ ಪೀಳಿಗೆ ಮತ್ತು ಜನತೆಗೆ ಸ್ಫೂರ್ತಿಯ ಚಿಲುಮೆಯಾಗಿವೆ ಎಂದು ಲೋಹ ಸಂಗ್ರಹಣಾ ಸಹಕಾರ ಸಮಿತಿ ಸದಸ್ಯ ವೀರೇಶ ದೊಡ್ಡಣ್ಣವರ ಹೇಳಿದರು. ಅವರು ಪಟ್ಟಣದ ಸಿದ್ಧಾರೂಢ ಮಠದಲ್ಲಿ ದೇಶಾದ್ಯಂತ ಕೈಗೊಳ್ಳಲಾದ ಸರ್ದಾರ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಲೋಹ ಸಂಗ್ರಹಣಾ ಅಭಿಯಾನ ಅಂಗವಾಗಿ ಈಚೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎನ್. ಬ್ಯಾಳಿ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದಲ್ಲಿ ಪುರಸಭೆ ಸದಸ್ಯ ವಿಜಯೇಂದ್ರ ಗಡಗಿ ಲೋಹ ದಾನ ಮಾಡಿದರು. ಈ ವೇಳೆ ಸುಮಾರು 75ಕ್ಕೂ ಹೆಚ್ಚು ರೈತರ ಸಹಿಗಳನ್ನು ಸಂಗ್ರಹಿಸಲಾಯಿತು.

ಒಂದು ದಿನದ ಟೆನ್ನಿಕ್ವಾಯಟ್ ಕಾರ್ಯಾಗಾರ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಣ ತಾಲೂಕು ಮಟ್ಟದ ದೈಹಿಕ ಶಿಕ್ಷಕರಿಗೆ 1 ದಿನ ಟೆನ್ನಿಕ್ವಾಯಟ್ ಕಾರ್ಯಾಗಾರ ಈಚೆಗೆ ಜರುಗಿತು. ರೋಣ ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಿಹಳ್ಳಿ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಟೆನ್ನಿಕಾಯಟ್ ಸಹಕಾರಿಯಾಗಲಿದೆ ಎಂದರು. ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಪಾರವ್ವ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಸ್.ವಿ. ಸಿದ್ದರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ವಿ. ಕುರುಹಿನಶೆಟ್ಟಿ, ಜಿ.ಎಸ್. ವಡ್ಡರ, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಆರ್. ನಿಡಗುಂದಿ, ಎಸ್.ಕೆ. ಪೂಜಾರ, ಬಿ.ಸಿ. ಮಠದ ಇತರರು ಉಪಸ್ಥಿತರಿದ್ದರು.

ಅರ್ಥಪೂರ್ಣ ಕಲಾವಿಕಾಸ ಉತ್ಸವ: ನಿರ್ಧಾರ
ಗದಗ: ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ, ಅಭಿಜಾತ ಕಲಾವಿದ, ಭಾರತರತ್ನ ಪಂ. ಭೀಮಸೇನ ಜೋಶಿಯವರ ಸ್ಮರಣಾರ್ಥ ಫೆ. 7, 8 ಹಾಗೂ 9ರಂದು ನಗರದಲ್ಲಿ ನಡೆಯಲಿರುವ ಕಲಾವಿಕಾಸ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಇಲ್ಲಿನ ವಿದ್ಯಾದಾನ ಸಮಿತಿ ಬಾಲಕಿಯರ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ವಿದ್ಯಾದಾನ ಸಮಿತಿಯ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ  ಅಧ್ಯಕ್ಷತೆ ವಹಿಸಿದ್ದರು. ರಂಗಕಲಾವಿದ ಸುಶಿಲೇಂದ್ರ ಜೋಶಿ, ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ, ಕಲಾವಿಕಾಸ ಪರಿಷತ್ತಿನ ಸಂಚಾಲಕ ಸಿ.ಕೆ.ಎಚ್. ಕಡಣಿಶಾಸ್ತ್ರಿ ಮಾತನಾಡಿದರು.

ಮಸೀದಿ ಕಟ್ಟಡಕ್ಕೆ ರು. 2 ಲಕ್ಷ ದೇಣಿಗೆ
ಗದಗ: ಡಾ. ಹುಯಿಲಗೋಳ ಆಸ್ಪತ್ರೆ ಹತ್ತಿರವಿರುವ ಅಹಲ್ ಇ ಸುನ್ನತ್ ಉಲ್ ಜಮಾತ್ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್‌ಗೆ ಮಸೀದಿಯ ಕಟ್ಟಡ ನಿರ್ಮಾಣಕ್ಕೆಂದು ನಗರದ ರಾಜೀವಗಾಂಧಿ ನಿವಾಸಿ ಸೈಯದ್ ಅಹ್ಮದ್ ಕೊಪ್ಪಳ ಇವರು ತಮ್ಮ ಧರ್ಮಪತ್ನಿ ದಿ. ಜುಬೇದಾಬೇಗಂ ಸ್ಮರಣಾರ್ಥ ಈಚೆಗೆ ರು. 2 ಲಕ್ಷಗಳ ದೇಣಿಗೆ ಚೆಕ್‌ನ್ನು ಮಸೀದಿಯ ಚೇರ್‌ಮನ್ ಹಾಜಿ ಜಿ.ಜಿ. ಬನ್ನೂರ ಅವರಿಗೆ ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ ಮೂಲಕ ಸಮರ್ಪಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್. ಫಿರಜಾದೆ, ಮೀರಾಸಾಬ ಕಲ್ಯಾಣಿ, ಮುರ್ತುಜಸಾಬ ಮುಲ್ಲಾ, ಇರ್ಷಾದ ಖಾಜಿ, ಎಂ.ಎ. ಖಾಜಿ, ಮೋದಿನಸಾಬ ಡಂಬಳ, ಮೌಲಾನಾ ಅಂಜುಮನ್ ಹುಸೇನ ಮುಂತಾದವರು ಉಪಸ್ಥಿತರಿದ್ದರು.

ಎಎಸ್‌ಐ ಉದ್ದಂಡಪ್ಪಗೆ ಸನ್ಮಾನ
ಗದಗ: ಗಣರಾಜ್ಯೋತ್ಸವ ಅಂಗವಾಗಿ ಗುಲ್ಬರ್ಗದ ಎಎಸ್‌ಐ ಉದ್ದಂಡಪ್ಪ ಅವರಿಗೆ ಗದಗನ ಸ್ನೇಹಲೋಕ ಸಂಘದ ಪದಾಧಿಕಾರಿಗಳಿಂದ ಗುಲ್ಬರ್ಗದ ಉದ್ದಂಡಪ್ಪನವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಭೂಗತ ಪಾತಕಿಯೊಡನೆ ಗುಲ್ಬರ್ಗದಲ್ಲಿ ನಡೆದ ಹೋರಾಟದಲ್ಲಿ 2 ಗುಂಡುಗಳು ಎಎಸ್‌ಐ ಉದ್ದಂಡಪ್ಪ ಅವರ ಹೊಟ್ಟೆಯೊಳಗೆ ತೂರಿ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಸಂಘದ ಅಧ್ಯಕ್ಷ ಬಾಪು ಆರಟ್ಟಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಉದ್ದಂಡಪ್ಪನವರು ಮಾತನಾಡಿ, ಸಾರ್ವಜನಿಕರ ನಮ್ಮ ಇಲಾಖೆ ಆತ್ಮಸ್ಥೈರ್ಯ ಸಾಹಸದ ಮನೋಭಾವನೆ ಈ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯದ ಶ್ರದ್ಧಾ ಮನೋಭಾವನೆ ಇಮ್ಮಡಿಗೊಳಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಸಂದರ್ಭ ಬಸಯ್ಯ ನಂದಿಕೋಲಮಠ, ಸ್ನೇಹಲೋಕ ಸಂಘದ ಅಧ್ಯಕ್ಷ ಬಾಪು ಆರಟ್ಟಿ, ರವಿ ಚಿನಿವಾಲರ, ಶಿವಕುಮಾರ ಚವಡಿ ಮುಂತಾದವರು ಉಪಸ್ಥಿತರಿದ್ದರು.

ಸೂಡಿಯಲ್ಲಿ ನಾಳೆ ಗಣೇಶ ಜಯಂತಿ
ಗಜೇಂದ್ರಗಡ:  ಸಮೀಪದ ಸೂಡಿ ಗ್ರಾಮದಲ್ಲಿ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ ಆಳ್ವಿಕೆ ಕಾಲದಲ್ಲಿ ಹುಡೇದ ಗಡ್ಡಿ ಬಳಿ ನಿರ್ಮಾಣವಾದ ಐತಿಹಾಸಿಕ ಮಹಾಗಣಪತಿ ದೇಗುಲದಲ್ಲಿ ಫೆ. 3ರಂದು ಗಣೇಶ ಜಯಂತಿ ಆಚರಿಸಲಾಗುವುದು. ಜಯಂತಿ ಪ್ರಯುಕ್ತ ಫೆ. 2ರಂದು ಸಂಜೆ 6ಕ್ಕೆ ಸಾಹಿತಿ ಶಂಭು ಬಳಿಗಾರ ಅವರಿಂದ ಜೀವನ ಚೈತನ್ಯ ಹಾಸ್ಯ ಕಾರ್ಯಕ್ರಮ ಹಾಗೂ ಗ್ರಾಮದ ವೀರಭದ್ರೇಶ್ವರ ಗೆಳೆಯರ ಬಳಗ ವತಿಯಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ. ಫೆ. 3ರಂದು ಅಗಡಿ ಆನಂದವನದ ಶಂಕರ್‌ಭಟ್ ಜೋಶಿ (ಕಮಡೊಳ್ಳಿ)ಯವರ ಸಾನ್ನಿಧ್ಯದಲ್ಲಿ ಗಣಪತಿ ಅಥರ್ವಶಿಷ್ಯರಿಂದ ಮಂತ್ರ ಪಠಣ, ಅಭಿಷೇಕ, ಸಹಸ್ರ ಮೋದಕ, ಹವನ, ಮತ್ತು ಗಣಪತಿ ವ್ರತ ನಡೆಯಲಿದೆ.

ತೋಂಟದಾರ್ಯ ಮಠಕ್ಕೆ ಡಾ. ಜಾಮದಾರ ಭೇಟಿ
ಗದಗ:  ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಹಾಗೂ ಕಂದಾಯ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಶುಕ್ರವಾರ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ತೋಂಟದ ಶ್ರೀಗಳವರೊಂದಿಗೆ ಶ್ರೀಮಠದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ವಸ್ತು ಸಂಗ್ರಹಾಲಯದ ಕಟ್ಟಡ, ಮುಂಡರಗಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ತೋಂಟದಾರ್ಯ ಆಸ್ಪತ್ರೆಯ ಕಟ್ಟಡವನ್ನು ಪರಿಶೀಲಿಸಿದರು. ನಂತರ ಭೀಷ್ಮಕೆರೆಯಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಶ್ರೀಗಳವರೊಂದಿಗೆ ವೀಕ್ಷಿಸಿದರು. ಜಿಲ್ಲಾಧಿಕಾರಿ ನ್.ಎಸ್. ಪ್ರಸನ್ನಕುಮಾರ, ನಿವೃತ್ತ ಮುಖ್ಯ ಎಂಜಿನಿಯರ್ ಗದ್ವಾಲ್ ಇತರರು ಇದ್ದರು.

ಪುರಂದರದಾಸರ ಶೋಭಾಯಾತ್ರೆ
ಗಜೇಂದ್ರಗಡ: ಸ್ಥಳೀಯ ಗುರುಜಗನ್ನಾಥ ದಾಸರ ಭಜನಾ ಮಂಡಳಿಯಿಂದ ದಾಸಶ್ರೇಷ್ಠ ಪುರಂದರದಾಸರ ಆರಾಧನಾ ಮಹೋತ್ಸವ ಅಂಗವಾಗಿ ಗುರುವಾರ ಪುಷ್ಪಾಲಂಕೃತ ಪೂಜ್ಯರ ಭಾವಚಿತ್ರದ ಶೋಭಾಯಾತ್ರೆಯನ್ನು ಭಕ್ತರು ನಡೆಸಿದರು. ಪಟ್ಟಣದ ರಾಮದೇವರ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಕನಕದಾಸ ಮತ್ತು ಜಗದಂಬಾದೇವಿ ಭಜನಾ ಮಂಡಳಿ ಭಕ್ತರು ಪಾಲ್ಗೊಂಡಿದ್ದರು. ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಮಹೋತ್ಸವ ಮೆರವಣಿಗೆ ಸಂಚರಿಸಿತು. ಗಾಯಿತ್ರಿ ಮಂಡಳದ ರಾಜೇಶ್ವರಿ ಬಾಯಿ ರಾಯಬಾಗಿ, ಭೀಷ್ಮಾಸಾ ಬಾಕಳೆ, ಕಾಂತು ಧಲಭಂಜನ, ಲಖನ್ ರಾಯಬಾಗಿ, ರಾಜು ಹೊರಪೇಟಿ, ಈರಣ್ಣ ಉರವಕೊಂಡಾ, ಮಹದೇವ ವೆರ್ಣೇಕರ್, ನಾಗಪ್ಪ ಕವಡಿಮಟ್ಟಿ, ದತ್ತುಸಾ ಬಾಕಳೆ, ಗಣೇಶ ಫಲಮಾರಿ ಇತರರು ಇದ್ದರು.

ರೋಣ: ಬಿಇಡಿ ಕಾಲೇಜ್ ಶೇ. 98ರಷ್ಟು ಫಲಿತಾಂಶ
ರೋಣ: ಸ್ಥಳೀಯ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ರಾಜೀವಗಾಂಧಿ ಬಿಇಡಿ ಕಾಲೇಜಿನ 2012-13ನೇ ಸಾಲಿನ ಪರೀಕ್ಷಾ ಫಲಿತಾಂಶ ಶೇ. 98 ಆಗಿದೆ. ಒಟ್ಟು 100 ವಿದ್ಯಾರ್ಥಿಗಳಲ್ಲಿ 98 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 98 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 46 ವಿದ್ಯಾರ್ಥಿಗಳು ಪ್ರಥಮ, 4 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಮೀನಾಬಿ ಮುಲ್ಲಾ ಶೇ. 85ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸವಿತಾ ತಳವಾರ ಶೇ. 84ರಷ್ಟು ಅಂಕ ಪಡೆದು ದ್ವಿತೀಯ, ಮಹಾಂತೇಶ ಭೋವಿ ಶೇ. 82ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಶಿಕ್ಷಣ ಮಹಾವಿದ್ಯಾಲಯ (ಬಿಇಡಿ)ಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ, ಚೇರ್‌ಮನ್ ಮಿಥುನ್ ಪಾಟೀಲ, ಆಡಳಿತಾಧಿಕಾರಿ ಬಿ.ಎಫ್. ಚೇಗರಡ್ಡಿ, ಪ್ರಾ. ವೈ.ಎನ್. ಪಾಪನ್ನವರ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಶರಣ ಚಿಂತನಗೋಷ್ಠಿ ಪ್ರಾರಂಭೋತ್ಸವ
ಗದಗ: ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಶನಿವಾರ ಚನ್ನವೀರ ಶರಣರ ಜಾತ್ರಾಮಹೋತ್ಸವ ಹಾಗೂ 19ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶರಣ ಚಿಂತನಗೋಷ್ಠಿ ಪ್ರಾರಂಭೋತ್ಸವ ಜರುಗಿತು. ಲಿಂಗನಾಯಕನಹಳ್ಳಿಯ ಚನ್ನವೀರ ಶ್ರೀಗಳು ಉದ್ಘಾಟಿಸಿ ಶರಣಚಿಂತನ ಗೋಷ್ಠಿ ಗೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ ಅಡ್ನೂರಿನ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶಿವಶಾಂತವೀರ ಶರಣರು ನೇತೃತ್ವ ವಹಿಸಿದ್ದರು. ಕೊಪ್ಪಳ ಗವಿಮಠದ ಸಿದ್ದಲಿಂಗದೇವರು, ಎಂ. ಕಲ್ಲಿನಾಥಶಾಸ್ತ್ರಿ ಅಡ್ನೂರ, ಶಿವಲಿಂಗ ಶಾಸ್ತ್ರಿಗಳು ಸಿದ್ದಾಪುರ  ಇತರರು ಉಪಸ್ಥಿತರಿದ್ದರು.

ಸುಗಮ ಸಂಗೀತ ಕಾರ್ಯಕ್ರಮ
ಹೊಳೆಆಲೂರು: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಹೊಳೆಆಲೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹೊಳೆಆಲೂರಿನ ಆಲೂರು ವೆಂಕಟರಾಯರ ಸಭಾಭವನದಲ್ಲಿ ರಾಜೀವಗಾಂಧಿ ಸೇವಾ ಕಟ್ಟಡದ ಭೂಮಿಪೂಜೆ ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಾಣಿಶ್ರೀ ಯಾಳಗಿ ಅವರ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಯಚ್ಚರಸ್ವಾಮಿಗಳು, ಯಾವಗಲ್, ವಸ್ತ್ರದ ಪಾಲ್ಗೊಂಡಿದ್ದರು.

ಶಿಕ್ಷಕರ ಸಂಘಟನೆ: ಸನ್ಮಾನ ಕಾರ್ಯಕ್ರಮ
ಗದಗ: ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕಟ್ಟುವಲ್ಲಿ ಶ್ರಮಿಸಿದ ಸಂಸ್ಥಾಪಕ ಸದಸ್ಯರಿಗೆ ಗೌರವ ಸನ್ಮಾನ ಹಾಗೂ ವಿಧಾಯಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ವಿಪ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಮಾಧ್ಯಮಿಕ ಶಾಲೆ ನೌಕರರ ಸಂಘ 1976ರಿಂದ ಇಲ್ಲಿವರೆಗೆ ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಕ, ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಿದೆ. ಸಂಘ ಕಟ್ಟಿದ ಹಿರಿಯ ಜೀವಿಗಳಿಗೆ ಫೆಬ್ರವರಿ ಕೊನೆಯ ವಾರದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ವಿಧಾಯಕ ಕಾರ್ಯಕ್ರಮ ಆಯೋಜಿಸಿ ಗೌರವಿಸಲಾಗುವುದು. 1976ರಿಂದ ಸಂಘದೊಂದಿಗೆ ನಿರಂತರ ಸಂಪರ್ಕವಿರುವ ಶಿವಮೊಗ್ಗ, ರಾಯಚೂರು, ಬಳ್ಳಾರಿ ಹಳೇ ಧಾರವಾಡ ಜಿಲ್ಲಾ ಭಾಗದ ಶಿಕ್ಷಕ ಬಂಧುಗಳು ಇತರರು ತಮ್ಮ ಮಾಹಿತಿ ಹಾಗೂ ತಮ್ಮ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಡವೇಶ್ವರ ಸದನ ವೇಮನ ಬೀದಿ ಹುಬ್ಬಳ್ಳಿಗೆ ಕಳುಹಿಸಿಕೊಡಲು ಹೊರಟ್ಟಿ ವಿನಂತಿಸಿದ್ದಾರೆ.

ಶಿವಶಾಂತವೀರ ಶರಣರ ಸದ್ಭಾವ ಯಾತ್ರೆ
ಗದಗ: ಜಿಲ್ಲೆಯ ರೋಣ ತಾಲೂಕಿನ ಡ.ಸ. ಹಡಗಲಿಯಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರ ಜಾತ್ರಾಮಹೋತ್ಸವ ಹಾಗೂ 19ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶನಿವಾರ ಶಿವಶಾಂತವೀರ ಶರಣರಿಂದ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆಯ ಸದ್ಭಾವ ಯಾತ್ರೆ ಜರುಗಿತು. ಶ್ರೀಗಳು ಗ್ರಾಮದಲ್ಲಿ ಹೊಂಬಳ ಶಂಕರಲಿಂಗ ಭಜನಾ ಸಂಘದೊಂದಿಗೆ ಭಜನೆ ಮಾಡುತ್ತಾ ಸಂಚರಿಸಿ ಜಗಜಾಗೃತಿ ಮೂಡಿಸಿದರು. ಕೊಪ್ಪಳ ಗವಿಮಠದ ಸಿದ್ದಲಿಂಗದೇವರು ಆಶೀರ್ವಚನ ನೀಡಿದರು. ಎಂ. ಕಲ್ಲಿನಾಥಶಾಸ್ತ್ರಿ ಅಡ್ನೂರು, ಶಿವಲಿಂಗಶಾಸ್ತ್ರಿ ಸಿದ್ದಾಪುರ, ಇದೇ ಸಂದರ್ಭದಲ್ಲಿ ಅನೇಕರು ಪೂಜ್ಯರ ಜೋಳಿಗೆಗೆ ದುಶ್ಚಟಗಳ ಸಾಮಗ್ರಿಗಳನ್ನು ಭಿಕ್ಷೆಯಾಗಿ ನೀಡಿ ಸದ್ಗುಣಗಳ ದೀಕ್ಷೆಯ ಪ್ರತಿಜ್ಞೆಗೈದರು.

ಮುಳ್ಳಾಳರ ವಿವಾಹ ಮಹೋತ್ಸವ
ಗದಗ: ಬೆಟಗೇರಿಯ ಗೌರಿಗುಡಿ ವೀರಶೈವ ಸಮಾಜದ ಅಧ್ಯಕ್ಷ ವೀರಣ್ಣ ಮುಳ್ಳಾಳರ ವಿವಾಹದ 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಶನಿವಾರ ತಮ್ಮ ನಿವಾಸದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅವರ ಸೇಹ್ನಿತರ ಹಾಗೂ ಅಭಿಮಾನಿ ಬಳಗದವರಿಂದ ಸನ್ಮಾನಿಸಿ ಗೌರವಿಸಲಾಯಿತು. ಎಂ.ಆರ್. ರಾಜೋಳಿ, ಗಣೇಶಸಿಂಗ್ ಬ್ಯಾಳಿ, ಶಿವಾಜಿಸಿಂಗ್ ಗಂಗಾವತಿ, ಭೋಜಪ್ಪ ಹೆಗಡೆ, ಮುರಿಗೆಪ್ಪ ಆಲೂರ, ಕೆ.ವಿ. ಕೊಂದಗೋಳ, ಪುತ್ರಪ್ಪ ಬೆಂತೂರ, ಶಿವಣ್ಣ ನಾಗರಾಳ, ಮುತ್ತಣ್ಣ ಮುಳ್ಳಾಳ, ಯೋಗೀಶ ಕುಂದಗೋಳ, ಕಳಕಪ್ಪ ನಾಗರಾಳ, ಬಸಣ್ಣ ಮಾರನಬಸರಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.