ಗದಗ

ಶಿಂಗಟಾಲೂರು ಏತ ನೀರಾವರಿ ಯೋಜನೆ ತ್ವರಿತಗತಿಗೆ ಆಗ್ರಹ

Published On :

ಗದಗ: ಜಿಲ್ಲೆಯ ಶಿಂಗಟಾಲೂರು ಏತ ನೀರಾವರಿ ಯೋಜನೆ 2006ರ ಹೊತ್ತಿಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, 15 ವರ್ಷವಾದರೂ ಯೋಜನೆ ಪೂರ್ಣಗೊಂಡಿಲ್ಲ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಈಚೆಗೆ ಆಗಮಿಸಿದ್ದ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಮಾತನಾಡಿ, 2ನೇ ಹಂತದ ತುಂಗಭದ್ರಾ ಕುಡಿಯುವ ನೀರು ಪೂರೈಕೆ, ಗದಗ ನಗರದ ಪುರಾತನ ಕಾಲದ ಭೀಷ್ಮ ಕೆರೆಯಲ್ಲಿ ಮಾನವತಾವಾದಿ ಬಸವೇಶ್ವರ ಮೂರ್ತಿ ಸ್ಥಾಪನೆಯಾಗಿದೆ. ಆದರೆ, ಕೆರೆಗೆ ನೀರು ಬರಲು ಯಾವುದೇ ಮಾರ್ಗ ಇಲ್ಲದೇ ಇರುವುದರಿಂದ ಅವಳಿ ನಗರದ ಕೊಳವೆ ಬಾವಿಯಲ್ಲಿಯೂ ನೀರು ಬರುತ್ತಿಲ್ಲ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಗೆ ಇದ್ದಾಗ ಕೆರೆಗೆ ನೀರು ಬಿಡುವಂತಹ ವ್ಯವಸ್ಥೆ ಮಾಡಿ ಭೀಷ್ಮಕೆರೆಯ ಸುತ್ತ ಸುಂದರವಾದ ಉದ್ಯಾನ ಮತ್ತು ಆಸನಗಳ ವ್ಯವಸ್ಥೆ ಮಾಡಿ ನಗರದ ಸೌಂದರ್ಯ ಹೆಚ್ಚಿಸುವುದು, ಅವಳಿ ನಗರ ಹಾಗೂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಅಪೂರ್ಣವಾದ ರಸ್ತೆ ಕಾಮಗಾರಿಗಳನ್ನು ತೀವ್ರವಾಗಿ ಪೂರ್ಣಗೊಳಿಸುವುದು. ಅವಳಿ ನಗರ ಸೇರಿದಂತೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಮೂತ್ರಾಲಯ ಹಾಗೂ ಸುಲಭ ಶೌಚಾಲಯ ನಿರ್ಮಾಣ ಮಾಡುವುದು, ಗದಗ ಜಿಲ್ಲೆಯ ಅಕ್ಕಪಕ್ಕದಲ್ಲಿರುವ ನದಿಯಿಂದ ಜಿಲ್ಲೆಯಲ್ಲಿ ಇರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು, ಕೃಷಿ ಆಧಾರಿತ ದೊಡ್ಡ ಕೈಗಾರಿಕೆಗಳ ಆಗಮನಕ್ಕೆ ಪೂರಕ ಸೌಲಭ್ಯ ಒದಗಿಸುವುದು, ಮುಂಡರಗಿ ನಗರದಲ್ಲಿ ಪುರಸಭೆ ಪಕ್ಕದಲ್ಲಿ ಇರುವ ಉದ್ಯಾನ ಅಭಿವೃದ್ಧಿಗೆ ಮುಂದಾಗಿ ಊರಿನ ಸೌಂದರ್ಯ ಹೆಚ್ಚಿಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಮೂಲ ಸೌಲಭ್ಯಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಂಸ್ಥೆಯ ಸಹ ಗೌರವ ಕಾರ್ಯದರ್ಶಿ ಅರವಿಂದ ಪಟೇಲ ಹಾಗೂ ಸದಸ್ಯ ಸಂಜಯ ರೊದ್ದಮ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.