ಐತಿಹಾಸಿಕ ದೇವಸ್ಥಾನ ಪುನರುಜ್ಜೀವನ ಕಾರ್ಯಾರಂಭ
ಜಿಲ್ಲೆಯ ರೋಣ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸವಡಿ ಗ್ರಾಮದಲ್ಲಿರುವ ಪುರಾತನ ದೇವಸ್ಥಾನಗಳು ಸರಿಯಾದ ನಿರ್ವಹಣೆಯಿಲ್ಲದೇ ದುಸ್ಥಿತಿಗೆ ತಲುಪಿದ್ದು, ಸಾರ್ವಜನಿಕರ ಹೋರಾಟದ ಫಲವಾಗಿ ರಾಜ್ಯ ಪ್ರಾಚ್ಯವಸ್ತು ಇಲಾಖೆ ಅವುಗಳ ಪುನರುಜ್ಜೀನ ಕಾರ್ಯಕ್ಕೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಆದರೆ, ಅವುಗಳ ಪುನರುಜ್ಜೀವನ ಕಾರ್ಯ ನಡೆಸುವ ವೇಳೆ ಅಡ್ಡಿಯಾಗುತ್ತಿರುವ ಮನೆ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿರುವ ಕಟ್ಟಡಗಳ ತೆರವಿಗೆ ಮುಂದಾಗದೇ ಇರುವುದು ಸ್ವತಃ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ.
ರು. 1. 20 ಕೋಟಿ ಕಾಮಗಾರಿ: ಜಕಣಚಾರಿಯವರಿಂದ ನಿರ್ಮಿತವಾಗಿದೆ ಎನ್ನುವ ಉಲ್ಲೇಖ ಹೊಂದಿರುವ ಬ್ರಹ್ಮ ದೇವರು ಹಾಗೂ ನಾರಾಯಣ ದೇವರ ದೇವಸ್ಥಾನಗಳು ಹಲವು ಶತಮಾನಗಳಿಂದ ನಿರ್ವಹಣೆ ಇಲ್ಲದೇ ದುಸ್ಥಿತಿಗೆ ತಲುಪಿದ್ದವು. ಇವುಗಳ ಪುನರುಜ್ಜೀವನ ಮಾಡಿ, ಹಿಂದಿನ ಸೌಂದರ್ಯ ಮರುಕಳಿಸಿ, ಐತಿಹಾಸಿಕ ಪರಂಪರೆಯನ್ನು ಮುಂದಿನ ತಲೆಮಾರಿನ ಮಕ್ಕಳಿಗೆ ಉಳಿಸುವ ನಿಟ್ಟಿನಲ್ಲಿ ರು. 1 ಕೋಟಿ ರು. 20 ಲಕ್ಷ ವೆಚ್ಚದಲ್ಲಿ ಈ ಪುರಾತನ ದೇವಸ್ಥಾನಗಳನ್ನು ಪುನರುಜ್ಜೀವನ (ಬ್ರಹ್ಮದೇವರ ದೇವಸ್ಥಾನ, ನಾರಾಯಣ ದೇವಸ್ಥಾನ) ಮಾಡಲಾಗುತ್ತಿದೆ.
10ನೇ ಶತಮಾನದಲ್ಲಿ ನಿರ್ಮಾಣ: ಜಗತ್ತಿಗೆ ಮೊಟ್ಟ ಮೊದಲ ಕಥೆಗಳನ್ನು ಪಂಚತಂತ್ರ ರಚಿಸಿದ ದುರ್ಗಸಿಂಹ ನೆಲಿಸಿದ್ದು ಇದೇ ಸವಡಿಯಲ್ಲಿ. ಅಂದು ಇದನ್ನು ಸೈಯ್ಯಡಿ ಎಂದು ಕರೆಯಲಾಗುತ್ತಿತ್ತು. 10ನೇ ಶತಮಾನದಲ್ಲಿ ಈ ಎರಡೂ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿತ್ತು. ಇದೇ ದೇವಸ್ಥಾನದಲ್ಲಿಯೇ ಕುಳಿತು ದುರ್ಗಸಿಂಹ ಪಂಚತಂತ್ರ ರಚಿಸಿದ ಎನ್ನುವುದು ಕೂಡಾ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಇಷ್ಟೊಂದು ಪ್ರಾಮುಖ್ಯತೆಯುಳ್ಳ ಪ್ರಾಚೀನ ದೇವಸ್ಥಾನಗಳನ್ನು ಪುನರುಜ್ಜೀವನ ಮಾಡುತ್ತಿರುವ ಶ್ಲಾಘನೀಯ. ಆದರೆ, ದೇವಸ್ಥಾನ ಸುತ್ತಮುತ್ತಲಿರುವ ಎಲ್ಲ ಗಜೀಲು, ಮನೆಗಳನ್ನು ತೆರವುಗೊಳಿಸಬೇಕಿದೆ.
ಕಾಮಗಾರಿಗೆ ಅಡ್ಡಿ: ಶಿಥಿಲಾವಸ್ಥೆಗೆ ತಲುಪಿದ್ದ ದೇವಸ್ಥಾನದ ಬೃಹತ್ ಕಲ್ಲುಗಳನ್ನು ತೆಗೆದು ಅವುಗಳನ್ನು ಮತ್ತೆ ನೀಟಾಗಿ ಹೊಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲವೆಡೆ ಕಲ್ಲು ಕಿತ್ತು ಹೋಗಿರುವುದರಿಂದ ಅಲ್ಲಿ ಹೊಸ ಕಲ್ಲುಗಳನ್ನು ಅಳವಡಿಸಲಾಗುತ್ತಿದೆ. ಈ ಎಲ್ಲ ಕೆಲಸಕ್ಕೆ ಬೃಹತ್ ಪ್ರಮಾಣದ ಕ್ರೇನ್ಗಳ ಅವಶ್ಯಕತೆ ಇದೆ. ಅಷ್ಟೊಂದು ದೊಡ್ಡ ಕ್ರೇನ್ಗಳು ಬಂದು ಕೆಲಸ ಮಾಡಲು ದೇವಸ್ಥಾನದ ಸುತ್ತಲು ಇರುವ ಕೆಲ ಮನೆಗಳು ಅಡೆತಡೆಯಾಗುತ್ತಿವೆ. ಅವುಗಳನ್ನು ತೆರವುಗೊಳಿಸಿ, ಆ ಸ್ಥಳದ ಮಾಲೀಕರಿಗೆ ಬೇರೆಡೆ ಸ್ಥಳಾವಕಾಶ ಹಾಗೂ ಸೂಕ್ತ ಪರಿಹಾರ ನೀಡಿದಲ್ಲಿ ಕಾಮಗಾರಿಯನ್ನು ಇನ್ನಷ್ಟು ವೇಗವಾಗಿ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಕೆಲಸ ಗುತ್ತಿಗೆ ಪಡೆದವರ ಅಳಲಾಗಿದೆ.
ಗ್ರಾಪಂ ಗಮನಹರಿಸಲಿ
ಎರಡೂ ದೇವಾಲಯಗಳು ಸವಡಿ ಗ್ರಾಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಶಕ್ತಿ ಹೊಂದಿವೆ. ಅಂಥ ದೇವಸ್ಥಾನಗಳ ಪುನರುಜ್ಜೀವನ ನಡೆಯುತ್ತಿದೆ. ಆದರೆ, ಗ್ರಾಪಂ ಆಡಳಿತ ವರ್ಗ ಹೆಚ್ಚಿನ ಗಮನಹರಿಸಿ ದೇವಸ್ಥಾನ ಸುತ್ತಲಿರುವ (ಪ್ರಾಚ್ಯವಸ್ತು ಇಲಾಖೆ ನಿಯಮಾವಳಿಗಳ ಪ್ರಕಾರ) ತೆರವುಗೊಳಿಸಿ, ಅವರಿಗೂ ಸೂಕ್ತ ಪರಿಹಾರ ನೀಡಬೇಕು. ಇದೇ ಗ್ರಾಮದಲ್ಲಿ ಅವರಿಗೆ ಪುನರ್ವಸತಿಗೆ ಅವಕಾಶ ಕಲ್ಪಿಸಿ, ನಿರ್ಮಾಣ ಕಾರ್ಯ ಪೂರ್ಣಗೊಂಡ ತಕ್ಷಣ ಸುತ್ತಲೂ ಉದ್ಯಾನ ನಿರ್ಮಿಸಿ, ಪ್ರವಾಸಿಗರನ್ನು ಆಕರ್ಷಿಸುವತ್ತ ಗಮನ ನೀಡಬೇಕಿದೆ.
ಶಾಸಕರು ಗಮನ ನೀಡಲಿ
ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ದೇವಸ್ಥಾನಗಳ ಪುನರುಜ್ಜೀವನ ಕಾರ್ಯವೇನೋ ನಡೆಯುತ್ತಿದೆ. ಆದರೆ ಇದಕ್ಕೆ ಇನ್ನಷ್ಟು ಅನುಕೂಲವಾದ ವಾತಾವರಣ ನಿರ್ಮಾಣವಾಗಿ, ದೇವಸ್ಥಾನದ ಸಮೀಪದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಶಾಸಕ ಜಿ.ಎಸ್.ಪಾಟೀಲ ಹೆಚ್ಚಿನ ಕಾಳಜಿ ವಹಿಸಿ, ಸವಡಿ ಗ್ರಾಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸವಾಗಬೇಕಾದಲ್ಲಿ ಪ್ರಾಚೀನ ದೇವಸ್ಥಾನಗಳ ಸುತ್ತಲೂ ಉತ್ತಮವಾದ ಉದ್ಯಾವನ ನಿರ್ಮಿಸುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಅವರು ಪ್ರಯತ್ನಿಸಬೇಕು ಎನ್ನುವುದು ಎಲ್ಲರ ಆಶಯವಾಗಿದೆ.
ನಿಗದಿತ ಅವಧಿಯಲ್ಲಿ ಮುಗಿಯತ್ತಾ?
ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯಕ್ಕೆ ಎರಡೂ ದೇವಸ್ಥಾನಗಳ ಪುನರುಜ್ಜೀವನ ಕಾರ್ಯ ಪೂರ್ಣಗೊಳ್ಳಬೇಕಿದೆ. ಆದರೆ, ಫೆಬ್ರವರಿ ಪ್ರಾರಂಭವಾದರೂ ಕಾಮಗಾರಿ ನಿಗದಿತ ಪ್ರಮಾಣದಷ್ಟು ನಡೆದಿಲ್ಲ. ಈ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯತ್ತಾ ಎನ್ನುವ ಸಂಶಯ ಇತಿಹಾಸ ತಜ್ಞರನ್ನು ಕಾಡುತ್ತಿದೆ. ಈ ಕುರಿತು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಈ ಕುರಿತು ಮೇಲಧಿಕಾರಿಗಳನ್ನು ಕೇಳಿ ಎನ್ನುವ ಹಾರಿಕೆಯ ಉತ್ತರವನ್ನೇ ನೀಡುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

