ಗದಗ

ನರೇಗಲ್ಲ ಪಪಂ ಆಡಳಿತ ವಿರುದ್ಧ ಧರಣಿ

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 4
ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಪಂ ಬಿಜೆಪಿ ಸದಸ್ಯರು, ಪಕ್ಷದ ಕಾರ್ಯಕರ್ತರು ಸೋಮವಾರ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.
ಸಂದರ್ಭದಲ್ಲಿ ಮಾತನಾಡಿದ ಪಪಂ ಸದಸ್ಯ ವೀರಪ್ಪ ಸಂಗನಾಳ ಅವರು, ಪಟ್ಟಣದಲ್ಲಿನ ವಿವಿಧ ಕಾಮಗಾರಿ ಮಾಹಿತಿ ಕೇಳಿದಾಗ ಸದಸ್ಯರೆನ್ನದೆ ಲಿಖಿತವಾಗಿ ಪತ್ರ ನೀಡಿ ನೋಡೋಣ ಎಂದು ಪಪಂ ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಅವರು ಹಾರಿಕೆ ಉತ್ತರ ನೀಡುತ್ತಿದ್ದು, ಸಿಬ್ಬಂದಿಯಿಂದ ಮಾಹಿತಿ ಪಡೆಯಲು ಮುಂದಾದಾಗ ನೌಕರಿ ಮಾಡುವ ಇಚ್ಛೆ ಇದೆಯಾ ಎಂದು ಮುಖ್ಯಾಧಿಕಾರಿಗಳು ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಮುಖ್ಯಾಧಿಕಾರಿ ಕಾರ್ಯಾಲಯದ ಒಳಗಡೆ ಬಿಜೆಪಿ ಸದಸ್ಯರು ಹೋದಾಗ ಬಾಳ ತಲೆತಿನ್ನಬೇಡಿ ನೋಡೋಣ.. ಮಾಡೋಣ... ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ನಮಗೆ ಕಾಮಗಾರಿಗಳ ಮಾಹಿತಿ ಪಡೆಯುವ ಹಕ್ಕಿಲ್ಲವೆ, ನಮ್ಮ ವಾರ್ಡ್‌ಗಳ ಅಭಿವೃದ್ಧಿ ವಿಚಾರಿಸುವುದು ತಪ್ಪೇ, ಪಟ್ಟಣದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮಾಹಿತಿ ಪಡೆಯಲು ಲಿಖಿತ ಅರ್ಜಿ ಸಲ್ಲಿಸಿದರೂ ಮಾಹಿತಿ ನೀಡದಿರುವುದು ಖಂಡನೀಯ ಎಂದರು. ಪ್ರಸಕ್ತ ಸಾಲಿನ ವಾಜಪೇಯಿ ವಸತಿ ಯೋಜನೆ ಫಲಾನುಭವಿ ಆಯ್ಕೆಯಲ್ಲಿ ಅಕ್ರಮ ನಡೆದಿದೆ. ಲಕ್ಷಾನುಗಟ್ಟಲೆ ಹಣ ವ್ಯಯಮಾಡಿ ಶೌಚಾಲಯ ನಿರ್ಮಿಸಿದ್ದರೂ ಅದಕ್ಕೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಬಯಲು ಶೌಚ ನಿರ್ಮೂಲನೆಗೆ ಸರ್ಕಾರ ಏನೆಲ್ಲಾ ಯೋಜನೆಯನ್ನು ಹಾಕಿಕೊಂಡರೂ ಅದನ್ನು ಮುಖ್ಯಾಧಿಕಾರಿ ಅನುಷ್ಠಾನಕ್ಕೆ ತರುತ್ತಿಲ್ಲ. ಪ್ರತಿಯೊಂದಕ್ಕೂ ಕಾನೂನನ್ನು ಮುಂದೆ ತರುವ ಮುಖ್ಯಾಧಿಕಾರಿ ಈ ಹಿಂದೆ ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಂಡ 50ಕ್ಕೂ ಹೆಚ್ಚು ಜನರನ್ನು ಸರ್ಕಾರಿ ನಿಯಮ ಅನುಸರಿಸಿದ್ದೀರಾ? ನಿಮಗೆ ಬೇಕಾದಾಗ ನಿಯಮ ಅನುಸರಿಸುವುದು, ಬೇಡವಾದಾಗ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ಬದಲಾವಣೆ ಮಾಡುವುದು ಯಾವ ನ್ಯಾಯ ಎಂದು ನಗರ ಘಟಕದ ಬಿಜೆಪಿ ಅಧ್ಯಕ್ಷ ಉಮೇಶ ಸಂಗನಾಳಮಠ ಪ್ರಶ್ನಿಸಿದರು.
ಅವ್ಯವಹಾರ: ಪಂಚಾಯಿತಿ ವಿವಿಧ ಯೋಜನೆಗಳ ಕಾಮಗಾರಿಗಳ ಕ್ರಿಯಾ ಯೋಜನೆಯಂತೆ ಇಲ್ಲಿಯ ವರೆಗೆ ಯಾವುದೆ ಟೆಂಡರ್ ಕರೆದಿಲ್ಲ. 2012-13ನೇ ಸಾಲಿನ ಮುಖ್ಯಮಂತ್ರಿಗಳ ನಿಧಿಯಿಂದ ನಗರಾಭಿವೃದ್ಧಿಗೆ ಬಿಡುಗಡೆಯಾದ ರು. 4 ಕೋಟಿ ಕಾಮಗಾರಿ ಪ್ರಾರಂಭಿಸಿಲ್ಲ. ಅಲ್ಲದೇ ಬರಗಾಲ ಕಾಮಗಾರಿಗೆ ಬಿಡುಗಡೆಯಾದ ರು. 15 ಲಕ್ಷ ಅನುದಾನದಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಧರಣಿ ನಿರತರು ಆರೋಪಿಸಿದರು. ಗ್ರಂಥಾಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಸ್ಥಗಿತಗೊಂಡಿರುವ ಜಿಗಳೂರು ಮತ್ತು ಹೊಸಳ್ಳಿ ನಡುವೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಾಗೂ ಹಿರೇಕೆರೆ ಹೂಳು ಎತ್ತುವ ಕಾಮಗಾರಿ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರೂ ಪ್ರಯೋಜನವಾಗಲಿಲ್ಲ. ಧರಣಿ 2ನೇ ದಿನಕ್ಕೆ ಮುಂದೂಡಿತು.  ಪಪಂ ಸದಸ್ಯ ಶಶಿಧರ ಸಂಕನಗೌಡ್ರ, ಯಲ್ಲಪ್ಪ, ಷಣ್ಮುಖ ಮಡಿವಾಳರ, ಒಳಕೋಟಿ, ಮಂಜವ್ವ ಚಳ್ಳಮರದ, ಶಿವನಗೌಡ ಸೋಮನಗೌಡ್ರ, ಪಪಂ ಮಾಜಿ ಅಧ್ಯಕ್ಷ ಶರಣಪ್ಪ ಕಲಾಲಬಂಡಿ, ನಾಗೇಂದ್ರ ನಿರಂಜನ ಧರಣಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.