ವಿದ್ಯಾರ್ಥಿಗಳ ಹಕ್ಕು ಕಿತ್ತುಕೊಳ್ಳುವ ಆದೇಶ ಕೈಬಿಡಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 19
ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕು ಕಿತ್ತುಕೊಳ್ಳುತ್ತಿರುವ ಸರ್ಕಾರ ಆದೇಶವನ್ನು ಕೈಬಿಡಲು ಒತ್ತಾಯಿಸಿ ಭಾರತ್ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕಿದ್ದ ರಾಜ್ಯ ಸರ್ಕಾರ ಪೂರ್ಣಶುಲ್ಕ ಕಟ್ಟುವಂತೆ ಸುತ್ತೋಲೆ ಹೊರಡಿಸಿದೆ. ಶುಲ್ಕಪಾವತಿ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ಮಾನದಂಡ ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಸರ್ಕಾರದ ಈ ಅಪಾಯಕಾರಿ ನಿಲುವನ್ನು ಎಸ್ಎಫ್ಐ ಗದಗ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾಶುಲ್ಕ, ಕ್ರೀಡಾಶುಲ್ಕ, ಗ್ರಂಥಾಲಯ ಶುಲ್ಕಗಳು ವಿನಾಯ್ತಿಗೆ ಅರ್ಹವಾಗಿರುವ ಶುಲ್ಕಗಳು. ಈ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳು ನೀಡುವ ಶುಲ್ಕಗಳಿಗೆ ವಿನಾಯ್ತಿ ನೀಡಲು ಸರ್ಕಾರ ಅಳವಡಿಸಿರುವ ನಿಯಮ ಸಂವಿಧಾನ ಬಾಹೀರವಾಗಿದೆ. ಇದು ಹಿಂದುಳಿದ, ದಲಿತ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿದ್ಯಾರ್ಥಿಯು ಕಾಲೇಜು ಪ್ರವೇಶ ಸಂದರ್ಭದಲ್ಲಿಯೇ ಎಲ್ಲ ಶುಲ್ಕಗಳನ್ನು ನೀಡಬೇಕು. ನಂತರ ವಿನಾಯ್ತಿ ಪಡೆಯುವುದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಹಾಕಲು ತಿಳಿಸಲಾಗಿದೆ. ಈ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಯು ವಾರ್ಷಿಕ ಪರೀಕ್ಷೆಯಲ್ಲಿ ಪ್ರವರ್ಗ-1 ಶೇ. 40, ಪ್ರವರ್ಗ 2ಎ, 3ಎ, 3ಬಿ-ಶೇ. 50ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಶುಲ್ಕ ವಿನಾಯತಿ ಕೋರಿ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಅಂಕಗಳ ಆಧಾರದ ಮೇಲೆ ಜಾರಿ ಮಾಡಿದರೆ ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಬಡ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುವಾಗ ಅಂಕದ ಮಾನದಂಡ ಸರಿಯಾದ ಕ್ರಮವಲ್ಲ. ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕಾಲೇಜುಗಳ ಅಭಿವೃದ್ಧಿ ಅಥವಾ ಸರ್ಕಾರದ ನಿಲುವನ್ನು ಪ್ರಶ್ನಿಸಿದರೆ, ಮುಷ್ಕರ ನಡೆಸಿದರೆ ಅಂತಹ ವಿದ್ಯಾರ್ಥಿಗಳ ಅರ್ಜಿಯನ್ನು ತಿರಸ್ಕರಿಸಲು ಹಾಗೂ ಮಂಜೂರಾಗಿದ್ದರೆ ರದ್ದುಪಡಿಸಿ ಎಂದು ಹೇಳಿರುವುದು ಸಂವಿಧಾನಕ್ಕೆಸಗಿದ ಅವಮಾನವಾಗಿದೆ. ಅನ್ಯಾಯ ಪ್ರಶ್ನಿಸುವುದು, ಹಕ್ಕುಗಳನ್ನು ಕೇಳುವುದು ಭಾರತದ ಪ್ರತಿ ನಾಗರಿಕನ ಹಕ್ಕಾಗಿದೆ. ಹಕ್ಕುಚ್ಯುತಿಯಾದಾಗ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಾಲೇಜು, ಹಾಸ್ಟೆಲ್ಗಳಲ್ಲಿ ಸಂಘಟನೆ ಕಟ್ಟಿಕೊಳ್ಳುವುದು, ನಮ್ಮ ಹಕ್ಕುಗಳನ್ನು ಕೇಳುವುದು ನಮ್ಮ ಸಂವಿಧಾನ ನಮಗೆ ನೀಡಿರುವ ಸೌಲಭ್ಯ, ಅವುಗಳನ್ನು ಗೌರವಿಸಿ ಎತ್ತಿ ಹಿಡಿಯಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಅದರ ಬದಲಾಗಿ ಎಸ್ಮಾ ಕಾಯ್ದೆ ಜಾರಿ ಮಾಡುವ ಮೂಲಕ ವಿದ್ಯಾರ್ಥಿಗಳ ಹಾಗೂ ನೌಕರರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿರುವುದು ಅರಾಜಕತೆ ಸೃಷ್ಟಿಗೆ ಕಾರಣವಾಗಲಿದೆ. ಕೂಡಲೇ ರಾಜ್ಯ ಸರ್ಕಾರ ಇಂತಹ ಅಪಾಯಕಾರಿ ಯೋಜನೆಗಳನ್ನು ಕೈಬಿಡಲು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡಲು ಮುಂದಾಗಬೇಕು. ವಿದ್ಯಾರ್ಥಿಗಳ ಎಲ್ಲ ಹಂತದ ಶುಲ್ಕಗಳಿಗೆ ವಿನಾಯ್ತಿ ನೀಡಿ ಮೂಲ ಸೌಲಭ್ಯ ನೀಡುವಂತೆ ಮನವಿಯಲ್ಲಿ ಎಸ್ಎಫ್ಐ ಒತ್ತಾಯಿಸಿದೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವು ಚವ್ಹಾಣ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಬೋಸ್ಲೆ, ಜಿಲ್ಲಾ ಸಹಕಾರ್ಯದರ್ಶಿ ಶಿವಕುಮಾರ ಪೂಜಾರ, ಶರಣಯ್ಯ ಸುಗೀರಯ್ಯನಮಠ, ಸಂತೋಷ ಮಾಳೊತ್ತರ, ಸುರೇಶ ರಾಠೋಡ, ಮಂಜುನಾಥ ರಾಠೋಡ, ಯಲ್ಲಪ್ಪ ರಾಠೋಡ, ಯಮನೂರ ಚಲವಾದಿ, ರವಿ, ಶಿವಾಜಿ ಗದಗ ಮುಂತಾದವರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

