ಗದಗ

ಅಲ್ಪಸಂಖ್ಯಾತರು ಸರ್ಕಾರಿ ಸೌಲಭ್ಯ ವಂಚಿತ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 25
ಸರ್ಕಾರದ ಗೆಜೆಟ್ ಪ್ರಕಾರ ಅಲ್ಪಸಂಖ್ಯಾತರ ಹೆಸರಿನಲ್ಲಿ ಬಹುಸಂಖ್ಯಾತರೇ ಹೆಚ್ಚು ಸರ್ಕಾರಿ ಸೌಲಭ್ಯ ಪಡೆದಿದ್ದಾರೆ. ವಾಸ್ತವದಲ್ಲಿ ಅಲ್ಪಸಂಖ್ಯಾತ ಜನಾಂಗ ಸಂಪೂರ್ಣ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ಇದನ್ನು ಗಮನಿಸಬೇಕು ಎಂದು ಹರಿಹರ ಪೀಠದ ಜ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಯಳವತ್ತಿ ಗ್ರಾಮದ ಕೋಟೆ ಆವರಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಳ 190ನೇ ವಿಜಯೋತ್ಸವ, ಪಂಚಮಸಾಲಿ ಸಂಘದ 34ನೇ ವಾರ್ಷಿಕೋತ್ಸವ, ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಉದ್ಘಾಟನೆ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 80 ಲಕ್ಷ ಪಂಚಮಸಾಲಿ ಜನಾಂಗದವರಿದ್ದು, ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.
894 ಜಾತಿಗಳಲ್ಲಿ ಪಂಚಮಸಾಲಿ ಹೆಸರೇ ಇರಲಿಲ್ಲ, ಈಗ ಅದು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸದೆ ಹೋದರೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಈ ಜನಾಂಗಕ್ಕೆ ನೀಡದೆ ಇದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜಕಾರಣಿಗಳನ್ನು ಓಲೈಸುವ ಮಠ ನಮ್ಮದಲ್ಲ. 2008 ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಶಿಕ್ಷಣ ನೀಡುತ್ತಿದೆ. ಸರ್ಕಾರದ ಬಿಡಿಗಾಸು ಸಹಾಯ ಪಡೆಯದೇ ಹರಿಹರದಲ್ಲಿ ಮಠವನ್ನು ಅಭಿವೃದ್ಧಿ ಮಾಡುತ್ತಿದ್ದು, ಮಠಕ್ಕೆ ಆರ್ಥಿಕ ಸಹಾಯ ಮಾಡುವುದಕ್ಕೂ ಮೊದಲೂ ನಿಮ್ಮ ಗ್ರಾಮದ ಅನಾಥ ಮಕ್ಕಳನ್ನು ಮಠಕ್ಕೆ ದತ್ತು ನೀಡಿ ಎಂದು ಕರೆ ನೀಡಿದರು.
ರೈತರಿಗೆ ಕಿವಿಮಾತು: ಶಿರಹಟ್ಟಿ ತಾಲೂಕಿಗೆ ಬಂಡವಾಳ ಶಾಹಿಗಳು ಲಗ್ಗೆಯಿಡುತ್ತಿದ್ದಾರೆ. ರೈತರಿಗೆ ಆಮಿಷವೊಡ್ಡಿ ಜಮೀನು ಕಬಳಿಕೆಗೆ ಮುಂದಾಗುತ್ತಿದ್ದಾರೆ. ಪಂಚಮಸಾಲಿ ಜನಾಂಗ ಕೃಷಿಯನ್ನೇ ತಮ್ಮ ಮೂಲ ಕಸುಬನ್ನಾಗಿ ನಂಬಿ ಜೀವನ ನಡೆಸುತ್ತಿದೆ. ತುರ್ತು ಹಣದಾಸೆಗಾಗಿ ತಮ್ಮ ಬಂಗಾರದಂತಹ ಜಮೀನು ಕಳೆದುಕೊಳ್ಳದೇ ಇರುವಂತೆ ಜಾಗ್ರತರಾಗಬೇಕು. ರಾಜಕೀಯ ಮರೆತು ಸಮಾಜದ ಅಭಿವೃದ್ಧಿ ವಿಷಯದಲ್ಲಿ ಒಗ್ಗಟ್ಟಾಗಬೇಕು ಎಂದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದಿಂಡೂರ ಮಾತನಾಡಿ, ಪಂಚಮಸಾಲಿ ಜನಾಂಗದ ಮೇಲೆ ದಬ್ಬಾಳಿಕೆ, ಶೋಷಣೆ ನಡೆಯುತ್ತಿದ್ದು, ಜನ ಜಾಗೃತರಾಗಬೇಕು ಎಂದರು.
ಎಸ್.ಕೆ. ಪೊಲೀಸ್‌ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಎಫ್.ವಿ. ಮರಿಗೌಡ್ರ, ತಾಲೂಕು ಘಟಕದ ಅಧ್ಯಕ್ಷ ಡಾ. ಎಸ್.ಬಿ. ಜವಾಯಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ಸೋಮಣ್ಣ ಮುಳಗುಂದ, ಎಸ್.ಪಿ. ಪಾಟೀಲ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರು, ಸದಸ್ಯ ಶಿವನಗೌಡ್ರ ಕಂಠಿಗೌಡ್ರ, ಚನ್ನಪ್ಪ ಜಗಲಿ, ಅಶೋಕ ಪಲ್ಲೇದ, ರಾಮಣ್ಣ ಕಾಮೋಜಿ, ಡಿ.ಡಿ. ಭರಮಗೌಡ್ರ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಡಾಣಗಲ್ಲ, ಬಸವರಾಜ ವಡವಿ, ವೀರಣ್ಣ ಹತ್ತಿಕಾಳ, ಬಸವರಾಜ ಹೊಸೂರ, ಶಿವರಾಜಗೌಡ ಪಾಟೀಲ, ಶಿವಾನಂದ ದೇಸಾಯಿ, ಸಿದ್ದನಗೌಡ ಬಳ್ಳೊಳ್ಳಿ, ನಾಗಪ್ಪ ಶಿರಬಡಗಿ, ಶಂಕರ ಬಾಳಿಕಾಯಿ ಉಪಸ್ಥಿತರಿದ್ದರು. ವೀರನಗೌಡ ಪಾಟೀಲ ಸ್ವಾಗತಿಸಿದರು. ಬಾಪುಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.