ಗದಗ

ಬೇಸಿಗೆ ಮುನ್ನವೆ ಕಪ್ಪತ್ತಗುಡ್ಡಕ್ಕೆ ಪದೇ ಪದೆ ಬೆಂಕಿ

Published On :

ಗದಗ: ಉತ್ತರ ಕರ್ನಾಟಕದ ಪಶ್ಚಿಮ ಘಟ್ಟವೆಂದೇ ಕರೆಯಲ್ಪಡುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಬೇಸಿಗೆ ಪ್ರಾರಂಭ ಮುನ್ನವೇ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡು ಅಮೂಲ್ಯ ಸಸ್ಯ ಸಂಪತ್ತು ಬೆಂಕಿಗೆ ತುತ್ತಾಗುತ್ತಿದೆ. ಇದು ಪರಿಸರ ಪ್ರೇಮಿಗಳಿಗೆ, ಆಯುರ್ವೇದಿಕ್ ಔಷಧ ಸಸ್ಯಗಳಿಗೆ ಕಪ್ಪತ್ತಗುಡ್ಡ ಅವಲಂಬಿತರ ಆತಂಕಕ್ಕೆ ಕಾರಣವಾಗಿದೆ.
ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಪ್ಪತ್ತಗುಡ್ಡ 21 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತಾರ ಹೊಂದಿದೆ. ಇಲ್ಲಿ 200ಕ್ಕೂ ಹೆಚ್ಚು ಅಮೂಲ್ಯ ಔಷಧ ಸಸ್ಯಗಳಿವೆ. ಗದಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಜಾನುವಾರುಗಳಿಗೆ ತೊಂದರೆಯಾದಲ್ಲಿ ಹಲವಾರು ಔಷಧಿಗಳಿಗಾಗಿ ರೈತಾಪಿ ವರ್ಗ ಇಂದಿಗೂ ಕಪ್ಪತ್ತಗುಡ್ಡವನ್ನೇ ಆಶ್ರಯಿಸಿದೆ.
ಹಲವಾರು ಔಷಧ ಸಸ್ಯಗಳಿವೆ: ಚಿತ್ರಮೂಲನಕಡ್ಡಿ, ಹೊರಮುಚಗ, ಹನುಮನ ಹಸ್ತ, ಒಳಮುಚಗ, ಬೆಟ್ಟದಾವರೆ, ಅನಂತಮೂಲ, ಅಜವಾನ, ಆಡುಸೋಗೆ, ಅರಲು, ಅಮೃತಬಳ್ಳಿ, ಅಗ್ನಿಮಂತ, ಚಳ್ಳಕಾಯಿ, ಒಂದೆಲಗ, ಬಸನಪಾದ, ಕಾಡುಬಾದಮೆ, ಕಾಡು ಶುಂಠೆ, ತೊಂಡಿಬಳ್ಳಿ, ಕಾಡುನಿಂಬೆ, ಲೆಕ್ಕೆಗಿಡ, ಕರಿಲೆಕ್ಕಿ, ಕೊಳಿಕುಕ್ಕುಟ, ಗಜಗ, ಕೇಶ, ಗುಲಗುಂಜಿ, ತಾರೋಕಾಯಿ, ತಪ್ಪಸ್ಸಿ, ತುಳಸಿ, ದಾಲಚಿನ್ನಿ, ದೇವಕಣಗಲಗ, ದೇವದಾರೆ, ನೆಲಬೇವು, ಪಾರಿಜಾತ, ಚದುರಂಗ, ಭಜೆ, ಮದ್ದುಗುಣಕಿ, ಮದುನಾಸಿನಿ, ಮಾದಾಳಫಲ, ಯಕ್ಕಿ, ರಕ್ತಚಂದನ, ರಾತರಾಣಿ, ಲೊಳೆಸರ, ಶತಾವರಿ, ಶಿರಸಲ, ಶಿವನಿ, ಶಂಕರಪುಷ್ಠಿ, ಹಿಪ್ಪಲಿ, ನೆಲನೆಲ್ಲಿ, ಟೀಕೆ ಸೊಪ್ಪು ಸೇರಿದಂತೆ ಹಿಮಾಲಯ ಹಾಗೂ ಪಶ್ಚಿಮ ಘಟ್ಟಗಳನ್ನು ಹೊರತುಪಡಿಸಿದಲ್ಲಿ ಎಲ್ಲ ಔಷಧ ಸಸ್ಯಗಳು ಸಿಗುವುದು ಕಪ್ಪತ್ತಗುಡ್ಡದಲ್ಲಿ. ಹಾಗಾಗಿ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಬೆಂಕಿಯಿಂದ ಈ ಸಸ್ಯ ಪ್ರಭೇದಗಳ ಉಳಿವಿಗೆ ತೊಂದರೆಯಾಗುತ್ತಿದೆ.
ಬೆಂಕಿ ಯಾಕೆ ಬೀಳುತ್ತಿದೆ?: ಕಪ್ಪತ್ತಗುಡ್ಡಕ್ಕೆ ಪದೇ ಪದೆ ಯಾವ ಕಾರಣಕ್ಕಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎನ್ನುವ ವಿಷಯ ಸಹಜವಾಗಿ ಎಲ್ಲರಲ್ಲಿಯೂ ಕುತೂಹಲ ಮೂಡಿಸುತ್ತದೆ. ಅದೇ ರೀತಿ ಅದನ್ನು ಪರಿಶೀಲಿಸಲು ಹೊರಟಾಗಲೂ ಹಲವಾರು ಕುತೂಹಲಕಾರಿ ಅಂಶಗಳು ಹೊರಬಂದವು. ಮೊದ ಮೊದಲು ಬೇಸಿಗೆಯಲ್ಲಿ ಇದು ನೈಸರ್ಗಿಕವಾಗಿಯೇ ನಡೆಯುತ್ತದೆ ಎನ್ನುವ ಮಾತು ಕೇಳಿ ಬಂತು. ನಂತರ ಕುರಿಗಾರರು ಗುಡ್ಡದ ಭಾಗದಲ್ಲಿ ರಾತ್ರಿ ವೇಳೆ ಅಡುಗೆ ತಯಾರಿಸಿ ಸರಿಯಾಗಿ ಬೆಂಕಿ ನಂದಿಸದೇ ಇರುವುದರಿಂದ ಹೀಗಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.
ಮತ್ತೆ ಕೆಲವರು ಬೇಸಿಗೆಯಲ್ಲಿ ಹುಲ್ಲು ಒಣಗಿರುವುದರಿಂದ ಅದು ಮತ್ತೆ ಮಳೆಗಾಲದಲ್ಲಿ ಸಮರ್ಪಕವಾಗಿ ಚಿಗಿಯಬೇಕಾದಲ್ಲಿ ಅದನ್ನು ಸುಡಬೇಕು ಎನ್ನುವ ಮೂಢನಂಬಿಕೆಯಿಂದ ಹಚ್ಚುವ ಬೆಂಕಿ ಈ ರೀತಿ ಗುಡ್ಡಕ್ಕೆ ವ್ಯಾಪಿಸುತ್ತಿದೆ ಎನ್ನುತ್ತಾರೆ. ಮತ್ತೆ ಇನ್ನುಕೆಲವರು ಇದು ಉದ್ದೇಶ ಪೂರ್ವಕವಾಗಿಯೇ ಮಾಡುವ ಕೆಲಸವಾಗಿದೆ.
 ಮಳೆಗಾಲ ಪ್ರಾರಂಭವಾಗುವವರೆಗೂ     ಆ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕಾಗಿ ಬೆಂಕಿ ಹಚ್ಚುತ್ತಾರೆ ಎನ್ನುವ ಮಾತುಗಳು  ಕೇಳಿ ಬರುತ್ತಿವೆ.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.