ರಾಶಿಗೂ ಬೆಲೆ ಏರಿಕೆ ಬಿಸಿ
ಗದಗ: ಪದೇ ಪದೆ ಆಗಿರುವ ಡೀಸೆಲ್ ಬೆಲೆ ಏರಿಕೆಯ ಬಿಸಿ ರೈತ ಸಮುದಾಯಕ್ಕೂ ತಟ್ಟುತ್ತಿದ್ದು, ಮಳೆ ಕೊರತೆ, ವಿದ್ಯುತ್ ಅಭಾವ, ಕೃಷಿ ಕೂಲಿ ಕಾರ್ಮಿಕರ ಕೊರತೆ ಹೀಗೆ ಹತ್ತಾರು ಸಮಸ್ಯೆಗಳ ಮಧ್ಯೆಯೂ ಬೆಳೆದಿರುವ ಬೆಳೆಯನ್ನು ಜಿಲ್ಲೆಯ ರೈತರೀಗ ರಾಶಿ ಮಾಡುತ್ತಿದ್ದು, ರೈತರ ರಾಶಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಅದರಲ್ಲಿಯೂ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಈ ಹಿಂದೆ ಕಟಾವಿಗೆ ಬಂದಿರುವ ಬೆಳೆಗಳನ್ನು ರಾಶಿ ಮಾಡಬೇಕಾದಲ್ಲಿ ರೈತರು ತಮ್ಮದೇ ಎತ್ತುಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕಣಗಳನ್ನು ಸಿದ್ಧಪಡಿಸಿ ಅಲ್ಲಿಯೇ ರಾಶಿ ಮಾಡುತ್ತಿದ್ದರು. ಆದರೆ, ಕಾಲ ಬದಲಾದಂತೆ ರಾಶಿ ಮಾಡಲು ಇಂದು ಹಲವಾರು ವಿವಿಧ ನಮೂನೆಯ ಯಂತ್ರಗಳು ಬಂದ ನಂತರ ಪ್ರತಿ ರೈತರು ರಾಶಿ ಮಾಡಲು ಈ ಯಂತ್ರಗಳನ್ನೇ ಅವಲಂಬಿಸಿದ್ದಾರೆ.
ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಪ್ರತಿ ಚೀಲಕ್ಕೆ ಬಾಡಿಗೆ ಶೇ. 30ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಪ್ರತಿ ಚೀಲಕ್ಕೆ ಸೂರ್ಯಕಾಂತಿ ರು. 50, ಕಡಲೆ ರು. 80 ರಿಂದ 100, ಗೋದಿ ಒಣಬೇಸಾಯ ರು. 120ರಿಂದ 150, ಜೋಳ ರು. 50 ಆಧಾರದಲ್ಲಿ ಲಭ್ಯವಾಗುತ್ತಿದ್ದು, ರಾಶಿ ಮಷಿನ್ಗಳ ಬಾಡಿಗೆ ಹೆಚ್ಚಳ ರೈತರಿಗೆ ತೊಂದರೆಯಾಗಿದೆ.
ಹೆಚ್ಚಿನ ಆರ್ಥಿಕ ಹೊರೆ: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರೂ ಹಿಂಗಾರಿನಲ್ಲಿ ಮಳೆ ಪ್ರಮಾಣದಲ್ಲಿ ಸಾಕಷ್ಟು ಕೊರತೆಯಾದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ಜೋಳ, ಗೋದಿ, ಸೂರ್ಯಕಾಂತಿ ಸಮರ್ಪಕವಾದ ರೀತಿಯಲ್ಲಿ ಇಳುವರಿ ಬಂದಿಲ್ಲ. ಈಗ ಬಂದಿರುವ ಜೋಳ, ಗೋದಿ, ಕಡಲೆ ರಾಶಿ ಮಾಡಿಕೊಳ್ಳಬೇಕಾದಲ್ಲಿ ಅನಿವಾರ್ಯವಾಗಿ ಹೆಚ್ಚಿನ ಹಣವನ್ನು ನೀಡಿಯೇ ರೈತರು ರಾಶಿ ಮಷಿನ್ಗಳನ್ನು ಬಾಡಿಗೆ ರೂಪದಲ್ಲಿ ಪಡೆಯಬೇಕಾಗಿದ್ದು, ಇದು ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ಸಣ್ಣ, ಮಧ್ಯಮ ರೈತರಿಗೆ ತೊಂದರೆ: ಈ ಬೆಲೆ ಏರಿಕೆಯ ಬಿಸಿ ನೇರವಾಗಿ ಸಣ್ಣ ಮತ್ತು ಮಧ್ಯಮ ರೈತರಿಗೆ ತಟ್ಟಿದ್ದು, ದೊಡ್ಡ ರೈತರು (ದೊಡ್ಡ ಹಿಡುವಳಿದಾರರು) ತಮ್ಮ ಸ್ವಂತ ರಾಶಿ ಮಷಿನ್ಗಳನ್ನೇ ಹೊಂದಿರುತ್ತಾರೆ. ಅವರಿಗೆ ಈ ಬೆಲೆ ಏರಿಕೆಯಿಂದ ಯಾವುದೇ ಪರಿಣಾಮವಾಗಲ್ಲ. ಇನ್ನು ಸಣ್ಣ ಮತ್ತು ಮಧ್ಯಮ ರೈತರು ಬಂದಿರುವ ಅಲ್ಪ ಬೆಳೆಯನ್ನು ರಾಶಿ ಮಾಡಿಕೊಳ್ಳಬೇಕಾದಲ್ಲಿ ಮಷಿನ್ಗಳನ್ನು ಬಾಡಿಗೆ ರೂಪದಲ್ಲಿ ಪಡದೇ ನಿರ್ವಹಿಸಿಕೊಳ್ಳಬೇಕು. ಹಾಗಾಗಿ ರಾಶಿ ಮಷಿನ್ಗಳ ಬಾಡಿಗೆಯಲ್ಲಿನ ಹೆಚ್ಚಳದ ಬಿಸಿ ನೇರವಾಗಿ ಸಣ್ಣ ಮತ್ತು ಮಧ್ಯಮ ರೈತರಿಗೆ ತಟ್ಟುತ್ತಿದೆ.
ಹೊಟ್ಟು ಮೇವಿಗಾದರೂ ರಾಶಿ ಮಾಡಲೇಬೇಕು: ಈ ಬಾರಿ ಉತ್ತಮ ಮಳೆ ಇಲ್ಲದೇ ಬೆಳೆಯಲ್ಲಿ ಸಮರ್ಪಕವಾಗಿ ಕಾಳುಗಳಾಗಿಲ್ಲ. ಆದರೂ ಜಾನುವಾರುಗಳಿಗೆ ಬೇಕಾಗುವ ಹೊಟ್ಟು(ಗೋದಿ) ಹಾಗೂ ಜೋಳವನ್ನು ರಾಶಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ನಮಗೆ ಗೋದಿ ಹಾಗೂ ಕಡಲೆ ಹೊಟ್ಟು ಎಲ್ಲಿಯೂ ಮಾರಾಟಕ್ಕೆ ಸಿಗಲ್ಲ. ಸಿಕ್ಕರೂ ಉತ್ತಮ ಗುಣಮಟ್ಟ ಇರಲ್ಲ. ಹಾಗಾಗಿ ನಾವು ಎಷ್ಟೇ ತೊಂದರೆಯಾದರೂ ಹೆಚ್ಚಿನ ಹಣವನ್ನಾದರೂ ನೀಡಿ ರಾಶಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುವುದು ಹಲವಾರು ರೈತರ ಅಭಿಪ್ರಾಯವಾಗಿದೆ.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

