9 ತಿಂಗಳಲ್ಲಿ 95 ಭರವಸೆ ಈಡೇರಿಕೆ: ಸಿದ್ದು
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 28
ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ 95 ಭರವಸೆ ಈಡೇರಿಸಿ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಲಬುರ್ಗಾ ಮತ್ತು ಕೊಪ್ಪಳದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಸಾಧನೆಯನ್ನೇ ಬಣ್ಣಿಸಿದರು. ಅಷ್ಟೇ ಅಲ್ಲ, ನಾವೆಂದೂ ಮಾತು ತಪ್ಪಿಲ್ಲ. ಹೀಗಾಗಿ, ಜನರು ನಮಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರವನ್ನೂ ಮಾಡಿದರು.
ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಜನರಿಗೆ ನೀಡಿದ್ದೆವು. ಅದರಂತೆ 95 ಭರವಸೆ ಈಡೇರಿಸಿದ್ದು, ಇನ್ನು ಕೇವಲ 70 ಬಾಕಿ ಇವೆ. ಅವುಗಳನ್ನೂ ಹಂತ ಹಂತವಾಗಿ ಶೀಘ್ರದಲ್ಲಿಯೇ ಈಡೇರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಅಧಿಕಾರಕ್ಕೆ ಬರುವ ಮೊದಲು ಹಾಗೂ ಅಧಿಕಾರಕ್ಕೆ ಬಂದ ಮೇಲೂ ನಾವು ಕೊಟ್ಟ ಮಾತಿನಂತೆಯೇ ನಡೆಯುತ್ತಿದ್ದೇವೆ ಎಂದರು.
ಖರ್ಗೆಗೆ ಅಭಿನಂದನೆ: ರಾಜ್ಯದವರೇ ಆಗಿರುವ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾದ ಮೇಲೆ ರಾಜ್ಯಕ್ಕೆ ರೇಲ್ವೆ ಯೋಜನೆಯಲ್ಲಿ ದೊಡ್ಡ ಪಾಲು ಸಿಕ್ಕಿದೆ. ಹಿಂದೆಂದೂ ಸಿಗದಷ್ಟು ಯೋಜನೆಗಳು ಅವರ ಅಲ್ಪಾವಧಿಯಲ್ಲಿ ಮಂಜೂರಾಗಿವೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೇಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೂ ಅನುಕೂಲವಾಗಿದೆ. ಇನ್ನು ಹೊಸ ರೈಲುಗಳು ಹಾಗೂ ಮಾರ್ಗಗಳನ್ನು ಖರ್ಗೆ ನೀಡಿರುವುದರಿಂದ ರಾಜ್ಯ ಸರ್ಕಾರದ ಪರವಾಗಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರ ಕಾರ್ಯಕ್ಷಮತೆಯನ್ನು ಗುಣಗಾನ ಮಾಡಲೇಬೇಕು ಎಂದು ಹೇಳಿದರು.
ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ತೆರೆಯುವ ಉದ್ದೇಶ ಹೊಂದಿದ್ದು, ಪ್ರಸಕ್ತ ವರ್ಷದಿಂದಲೇ ಆರು ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರಲ್ಲಿ ಕೊಪ್ಪಳವೂ ಒಂದು. ಮುಂದಿನ ವರ್ಷ ಇನ್ನಾರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು. ಬಾಕಿ ಉಳಿಯುವ ಜಿಲ್ಲೆಗಳಲ್ಲೂ ಮೆಡಿಕಲ್ ಕಾಲೇಜು ತೆರೆಯುವ ಮೂಲಕ ಗ್ರಾಮೀಣ ಪ್ರದೇಶದವರೂ ವೈದ್ಯರಾಗುವ ಅವಕಾಶವನ್ನು ಒದಗಿಸಲಾಗುವುದು. ಇದೆಲ್ಲಕ್ಕಿಂತ ಮಿಗಿಲಾಗಿ ಮಾರಕ ಕಾಯಿಲೆಗಳು ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಡುತ್ತಿದ್ದು, ಬಡವರಿಗೂ ಚಿಕಿತ್ಸೆ ಸಿಗುವಂತಾಗಲು ಇಂಥ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಡವರಿಗೂ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆ ಸಿಗುವಂತಾಗಲು ನಾಲ್ಕು ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ತೆರೆಯಲು ಕ್ರಮ ವಹಿಸಲಾಗಿದೆ. ಕೇಂದ್ರದ ನೆರವಿನಿಂದ ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುತ್ತದೆ ಎಂದರು.
ವೇದಿಕೆ ಮೇಲೆ ಸಚಿವ ಶಿವರಾಜ್ ತಂಗಡಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣುಪ್ರಕಾಶ ಪಾಟೀಲ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಶಾಸಕರಾದ ಜಿ.ಎಸ್. ಪಾಟೀಲ, ಬಸವರಾಜ ರಾಯರಡ್ಡಿ, ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

