ಸಸ್ಯಪಾಲನಾ ಕ್ಷೇತ್ರದಲ್ಲಿ ಕೊಳೆಯುತ್ತಿವೆ ಸಸಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 6
ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಆದಾಯ ಹೆಚ್ಚಿಸಲು ಸುವರ್ಣ ಭೂಮಿ ಯೋಜನೆಯಡಿ ಜೈವಿಕ ಇಂಧನ (ಹೊಂಗೆ) ಸಸಿ ನೆಡಲು ಆಸಕ್ತ ರೈತರಿಗೆ ರು. 10 ಸಾವಿರ ಸಹಾಯಧನ ನೀಡುತ್ತಿದ್ದು, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಎನ್‌ಜಿಓದವರ ಬೇಜವಾಬ್ದಾರಿಯಿಂದ ತಾಲೂಕಿನ ಶೆಟ್ಟಿಕೇರಿ ಸಸ್ಯಪಾಲನಾ ಕ್ಷೇತ್ರದಲ್ಲಿ 62 ಸಾವಿರ ಹೊಂಗೆ ಸಸಿಗಳು ಕೊಳೆತು ಬಿದ್ದು ಹಾಳಾಗುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರ ತವರು ಜಿಲ್ಲೆಯಲ್ಲಿಯೇ ಈ ರೀತಿ ಖಾತ್ರಿ ಯೋಜನೆ ವೈಫಲ್ಯದ ಹಾದಿ ಹಿಡಿದಿದೆ.
ಹಸಿರು ಹೊನ್ನು ಯೋಜನೆಯಡಿ 2012-13ನೇ ಸಾಲಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ 75 ಸಾವಿರ ಹೊಂಗೆ (ಹುಲುಗಲ) ಸಸಿಗಳನ್ನು ಬೆಳೆಸಲಾಗಿದ್ದು, ತಾಲೂಕಿನ 24 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ರು. 10 ಸಾವಿರ ಸಹಾಯಧನದ ಜತೆಗೆ ಉಚಿತ ಸಸಿ ಹಾಗೂ ಕೂಲಿ ಹಣವನ್ನು ನೀಡುವ ನಿಯಮವಿದ್ದು, ಯಾವೊಬ್ಬ ರೈತರಿಗೂ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಯೋಜನೆ ಹಳ್ಳ ಹಿಡಿಯುವುದಲ್ಲದೇ ಲಕ್ಷಾಂತರ ಹಣ ಗುಳುಂ ಆಗುತ್ತಿದೆ.
ರೈತರ ಜಮೀನಿನ ಬದು ಹಾಗೂ ಬೇಲಿಗುಂಟ ಜೈವಿಕ ಇಂಧನ (ಹೊಂಗೆ) ಸಸಿ ನೆಡುವುದು ಕಡ್ಡಾಯ ಚಟುವಟಿಕೆಯಾಗಿದ್ದು, ಗ್ರಾಮ ಪಂಚಾಯಿತಿಯ ಕ್ರಿಯಾ ಯೋಜನೆಯಲ್ಲಿಯೂ ಹಾಕಿಕೊಳ್ಳಬೇಕೆಂಬ ಕಟ್ಟಪ್ಪಣೆ ಇದ್ದರೂ ಈ ಕುರಿತು ಗ್ರಾಮ ಸಭೆಯಲ್ಲಿ ರೈತರಿಗೆ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಎನ್‌ಜಿಓದ ಸಿಬ್ಬಂದಿ ಸರಿಯಾದ ಮಾಹಿತಿ ನೀಡಿದೇ ಇರುವುದು ಯೋಜನೆ ವಿಫಲತೆಗೆ ಮುಖ್ಯ ಕಾರಣವಾಗಿದೆ.
ಗ್ರಾಪಂ ನಿರ್ಲಕ್ಷ್ಯವೇ ಕಾರಣ: ಅಧಿಕಾರಿ
ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಎಸ್.ಎಸ್. ಬಿಚಗತ್ತಿ ಮಾತನಾಡಿ, ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೂ ಸುವರ್ಣ ಭೂಮಿ ಯೋಜನೆಯ ಫಲಾನುಭವಿ ರೈತರಿಗೆ ಕೇವಲ 13 ಸಾವಿರ ಸಸಿಗಳನ್ನು ಮಾತ್ರ ವಿತರಣೆ ಮಾಡಲಾಗಿದೆ. ಈ ಯೋಜನೆಯ ಯಶಸ್ಸಿಗೆ ಗ್ರಾಮ ಪಂಚಾಯಿತಿಯವರ ಸಹಕಾರ ಬಹಳ ಮುಖ್ಯವಾಗಿದ್ದು, ಒಮ್ಮೆಯೂ ಇಲಾಖೆಯತ್ತ ತಿರುಗಿ ನೋಡಿಲ್ಲ. ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಪಿಡಿಒ ಮತ್ತು ಕಾರ್ಯದರ್ಶಿಯವರ ಗಮನಕ್ಕೆ ತಂದರೂ ರೈತರಿಗೆ ಮಾಹಿತಿ ನೀಡದಿರುವುದು ಯೋಜನೆ ವಿಫಲವಾಗಲು ಕಾರಣ ಎನ್ನುತ್ತಾರೆ.
ದಿನಗೂಲಿ ನೌಕರರ ಹೆಸರಲ್ಲಿ ಹಣ ಕೊಳ್ಳೆ: ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಕೈಗೊಳ್ಳಬೇಕಾಗಿರುವ ಅರಣ್ಯೀಕರಣ ಕಾಮಗಾರಿಗಳಲ್ಲಿ ಶೇ. 50 ರಿಂದ 60ರಷ್ಟು ಸಸಿಗಳು ಜೈವಿಕ ಇಂಧನ ಸಸಿಗಳಾಗಿರಬೇಕೆಂಬ ಆದೇಶವಿದ್ದರೂ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ. ಕಳೆದ ಒಂದು ವರ್ಷದಿಂದ ಸಸ್ಯಪಾಲನಾ ಕ್ಷೇತ್ರದಲ್ಲಿ ಸಸಿ ಪಾಲನೆ ಮತ್ತು ಪೋಷಣೆ ಮಾಡುವ ನೆಪ ತೋರಿಸಿ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ದಿನಗೂಲಿ ನೌಕರರ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುತ್ತಿರುವ ಆರೋಪ ಕೇಳಿಬರುತ್ತಿದೆ.
ಸಾರ್ವಜನಿಕರ ಅಸಮಾಧಾನ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತವರು ಜಿಲ್ಲೆಯಲ್ಲಿಯೇ ಉದ್ಯೋಗ ಖಾತ್ರಿ ಯೋಜನೆ ವಿಫಲವಾಗುತ್ತಿದ್ದರೂ ಇತ್ತ ಕಡೆ ಸಚಿವರು ಗಮನ ಹರಿಸಿ ಕ್ರಮಕೈಗೊಳ್ಳದಿರುವುದು ಇಲ್ಲಿನ ಜನರಲ್ಲಿ ಬೇಸರ ತಂದಿದೆ. ಇನ್ನಾದರೂ ಎಚ್ಚೆತ್ತು ಸಂಬಂಧಪಟ್ಟವರು, ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು.
ಅಧಿಕಾರಿಯಿಂದ ನಿರುತ್ತರ: ಸಸಿ ಬೆಳೆಸಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ. ಒಟ್ಟಾರೆ ಬಳಕೆಯಾದ ಅನುದಾನ ಎಷ್ಟು? ಎಂದು ಅರಣ್ಯ ಇಲಾಖೆ ಅಧಿಕಾರಿಯನ್ನು ಕೇಳಿದರೆ ಅವರಲ್ಲಿ ಯಾವುದು ಮಾಹಿತಿಯೇ ದೊರೆಯುತ್ತಿಲ್ಲ. ಎಲ್ಲವೂ ಜಿಲ್ಲಾ ಎನ್.ಜಿ.ಓ. (ಮಂಡಳಿ)ಯವರಿಗೆ ಗೊತ್ತು ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ರೈತರು ಬೆಳೆದ ಜೈವಿಕ ಇಂಧನ ಬೀಜಗಳನ್ನು ಮಂಡಳಿಯ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಬೀಜ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯುವ ಸೌಲಭ್ಯವಿದ್ದರೂ ರೈತರು ವಂಚಿತರಾಗಿದ್ದಾರೆ.
- ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

