ಮುಖ್ಯರಸ್ತೆಯಲ್ಲೇ ಹೊಂಡ!
ಬ್ಯಾಡಗಿ: ಸ್ಥಳೀಯ ಪುರಸಭೆ ನಿರ್ಲಕ್ಷ್ಯದಿಂದಾಗಿ ಬಸ್ ನಿಲ್ದಾಣದ ಬಳಿ ರಸ್ತೆ ಮಧ್ಯೆ ಬಿದ್ದಿರುವ ದೊಡ್ಡ ಗುಂಡಿಯೊಂದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತಿದೆ. ಹೊಂಡದ ನೀರೆಲ್ಲ ಪಕ್ಕದ ಅಂಗಡಿಗಳಿಗೆ, ಬೈಕ್ ಸವಾರರಿಗೆ, ಪಾದಚಾರಿಗಳಿಗೆ ಸಿಡಿಯುತ್ತಿದೆ.
ಸ್ಥಳೀಯ ಪುರಸಭೆ ನಗರೋತ್ಥಾನ ಯೋಜನೆಯಲ್ಲಿ ಬಸ್ ನಿಲ್ದಾಣದ ಬಳಿಯಿರುವ ನೆಹರು ವೃತ್ತದ ಸುತ್ತ ಮುತ್ತಲ ಪ್ರದೇಶದಲ್ಲಿ ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿ ಪ್ರಾರಂಭಿಸಿದೆ. ಆದರೆ, ಅದು ಪೂರ್ಣಗೊಳ್ಳದೆ ಜನರಿಗೆ ತಲೆನೋವು ಹೆಚ್ಚಿದೆ.
ಎಚ್ಚರ ತಪ್ಪಿದರೆ ಅಪಾಯ: ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶವಿದ್ದು, ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸುವ ಬೃಹತ್ ಲಾರಿಗಳು, ಬಸ್, ಆಟೋ, ಕಾರು, ಬೈಕ್ ಇತ್ಯಾದಿಗಳು ಗುಂಡಿ ತಪ್ಪಿಸಲು ಪರದಾಡುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಣ್ಣ ವಾಹನಗಳು ಹಾಗೂ ರಿಕ್ಷಾ ಚಾಲಕರಿಗೆ ಅಪಾಯ ತಪ್ಪಿದ್ದಲ್ಲ. ರಾತ್ರಿ ವೇಳೆಯಲ್ಲಿ ಇಲ್ಲಿ ಸಂಚಾರ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಸಂಘರ್ಷಕ್ಕೆ ನಾಂದಿ: ಗುಂಡಿಯಲ್ಲಿ ಶೇಖರಣೆಯಾಗಿರುವ ನೀರು ದೊಡ್ಡ ವಾಹನಗಳು ಸಂಚರಿಸಿದಾಗೆಲ್ಲ ಸಿಡಿದು ಪಕ್ಕದ ಅಂಗಡಿಗಳ ಮಾಲೀಕರಿಗೆ ಚಿಂತೆಯಾಗಿದೆ. ನೀರು ಸಿಡಿಯುವುದರಿಂದ ಗಿರಾಕಿಗಳೂ ಈ ಅಂಗಡಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಬಿಕೋ ಎನ್ನುತ್ತಿವೆ. ವ್ಯಾಪಾರ ನಷ್ಟವಾಗುತ್ತಿದೆ ಎನ್ನುತ್ತಾರೆ, ಬಾಬು ಯಾದವಾಡ.
ಪುರಸಭೆ ಆಡಳಿತ ಮಂಡಳಿ ರಚನೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ವಾರ್ಡ್ ಸದಸ್ಯರೂ ನಿಸ್ಸಹಾಯಕರಾಗಿದ್ದಾರೆ. ಕೂಡಲೇ ಸರಿಪಡಿಸದಿದ್ದಲ್ಲಿ ರಿಕ್ಷಾ ಚಾಲಕರ ಸಹಕಾರದಲ್ಲಿ ರಸ್ತೆ ತಡೆ ನಡೆಸುವುದಾಗಿ ಜಿನ್ನಾ ಹಲಗೇರಿ ಎಚ್ಚರಿಸಿದ್ದಾರೆ.
ಮರಳು ಎಫೆಕ್ಟ್: ಈ ಕುರಿತು ಮಾತನಾಡಿದ ಪುರಸಭೆಯ ಕಿರಿಯ ಅಭಿಯಂತ ನಿರ್ಮಲ ನಾಯ್ಕ್, ಈ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಮರಳಿನ ಸಮಸ್ಯೆಯಿಂದಾಗಿ ಕಾಮಗಾರಿ ಸ್ಥಗಿತಗೊಳಿಸಿದೆ. ತಾತ್ಕಾಲಿಕವಾಗಿ ಮುರ್ರಂ ಹಾಕಿ ಗುಂಡಿ ಮುಚ್ಚುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

