ಗದಗ

ಖರೀದಿ ಕೇಂದ್ರ ತೆರೆಯಿರಿ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 8
ಶಿರಹಟ್ಟಿ ತಾಲೂಕು ಕೇಂದ್ರವಾದರೂ ರೈತರ ಹಿತದೃಷ್ಟಿಯಿಂದ ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಹಾಗೂ ಹತ್ತಿ ಖರೀದಿಸಲು ಸರ್ಕಾರ ಖರೀದಿ ಕೇಂದ್ರ ತೆರೆಯದೇ ಇರುವ ಕ್ರಮ ಖಂಡಿಸಿ ಬುಧವಾರ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಜಿ. ಶಾಂತಸ್ವಾಮಿ ಮಠ, ಚಂದ್ರಕಾಂತ ಉಳ್ಳಾಗಡ್ಡಿ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆಗಳು ಸಂಪೂರ್ಣ ಕೈ ಕೊಟ್ಟಿದ್ದು, ಶೇಂಗಾ, ಸೂರ್ಯಕಾಂತಿ ಖರೀದಿಗಾಗಿ ಆದೇಶಿಸಬೇಕು ಎಂದು ಆಗ್ರಹಿಸಿದರು. ರೈತರು ಬೆಳೆದ ಎಲ್ಲ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈಗಾಗಲೇ ಅನೇಕ ರೈತರು ಬೇರೆ ಖರೀದಿ ಕೇಂದ್ರಕ್ಕೆ ಗೋವಿನಜೋಳ ನೀಡಿದ್ದು, ಎರಡು ತಿಂಗಳು ಗತಿಸಿದರೂ ಹಣ ಪಾವತಿಸಿಲ್ಲ. ಇದರಿಂದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಎರಡು ದಿನಗಳೊಳಗಾಗಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು.
ಬ್ಯಾಂಕ್‌ನವರು 2012-13ನೇ ಸಾಲಿನ ಬೆಳೆ ವಿಮೆ ಹಣವನ್ನು ರೈತರಿಗೆ ನೀಡದೆ ಅವರ ಸಾಲ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದು, ಈ ಕ್ರಮ ಬಿಟ್ಟು ಸಂಕಷ್ಟದಲ್ಲಿರುವ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದರು. ರೈತರು ನಾಲ್ಕೈದು ವರ್ಷಗಳಿಂದಲೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಮಳೆಯಾಗದೆ ಹಿಂಗಾರು ಬೆಳೆಯಾದ ಬಿಳಿಜೋಳ ಕೈಗೆ ಬಾರದಂತಾಗಿದೆ. ಕೂಡಲೇ ಸರ್ಕಾರ ಶಿರಹಟ್ಟಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದರು.
ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಅವರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಾಗಿದೆ. ಸರ್ಕಾರದ ಈ ಪ್ರವೃತ್ತಿ ಮುಂದುವರಿದಿದ್ದೆ ಆದಲ್ಲಿ ರೈತ ಸಮುದಾಯ ಸಂಘಟಿತರಾಗಿ ತಮ್ಮ ಸಮಸ್ಯೆಗಳ ಹಾಗೂ ಬೇಡಿಕೆಗಳ ಈಡೇರಿಕೆಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ ಆರ್.ಬಿ. ನಿಂಗನಗೌಡ್ರ ಮನವಿ ಸ್ವೀಕರಿಸಿ ಮಾತನಾಡಿ, ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ಬಿ. ಸಂಕನಗೌಡ್ರ, ಜಿಲ್ಲಾ ರೈತ ಮೋರ್ಚಾದ ಮಹಿಳಾ ಉಪಾಧ್ಯಕ್ಷೆ ಪದ್ಮಾವತಿ ಗೋರ್ಲೆ, ಮಹಾದೇವಗೌಡ ಪಾಟೀಲ, ಬಿ.ಎಚ್. ಹ್ಯಾಟಿ, ರಾಮಣ್ಣ ಇಲ್ಲೂರ, ಬಸವರಾಜ ನಾವಿ, ಸಿದ್ದಪ್ಪ ಕರಿಗಾರ, ಬಸವರಾಜ ಪೂಜಾರ, ರಾಮಣ್ಣ ಕೊಂಚಿಗೇರಿ, ಫಕ್ಕೀರೇಶ ಕರಿಗಾರ, ಈರಣ್ಣ ಕಲ್ಯಾಣಿ, ಶ್ರೀಶೈಲ ಮಣ್ಣೂರ, ಫಕ್ಕೀರೇಶ ಡಂಬಳ ಮತ್ತಿತರರು ಮನವಿ ನೀಡುವಾಗ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.