ಕ್ರೆಡಿಟ್ ಕಾರ್ಡ್ ಲಾಭ ಪಡೆಯಿರಿ
ಗಜೇಂದ್ರಗಡ: ನೇಕಾರಿಕೆ ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಕ್ರೆಡಿಟ್ ಕಾರ್ಡ್ ಯೋಜನೆ ಲಾಭ ಪಡೆದು ಅಭಿವೃದ್ಧಿ ಹೊಂದಿ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ ಕೋಲಕಾರ ಹೇಳಿದರು.
ಸ್ಥಳೀಯ ಜಗದಂಬಾ ಸಮುದಾಯ ಭವನದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಪಂ ಗದಗ ಸಂಯುಕ್ತವಾಗಿ ಬುಧವಾರ ಆಯೋಜಿಸಿದ್ದ ಕೈಮಗ್ಗ ನೇಕಾರರ ಕ್ರೆಡಿಟ್ ಕಾರ್ಡ್ ಯೋಜನೆಯ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೈಮಗ್ಗ ನೇಕಾರರಿಗೆ ಪೂರಕ ಭದ್ರತೆ ಪಡೆಯದೆ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಒದಗಿಸುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಕೈಮಗ್ಗ ನೇಕಾರರು, ಕೈಮಗ್ಗ ಸಹಕಾರಿ ಸಂಘ ಸಂಸ್ಥೆಗಳ ಕೈಮಗ್ಗ ಸ್ವಸಹಾಯ ನೇಕಾರರಿಗೆ ಭಾವಚಿತ್ರ ಸಹಿತ ಕ್ರೆಡಿಟ್ ಕಾರ್ಡ್ ಒದಗಿಸಲಾಗಿದೆ ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನಬಾರ್ಡ್ ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕೆ. ಶ್ರವಣಕುಮಾರ ಮಾತನಾಡಿ, ಆಧುನಿಕ ತಂತ್ರಜ್ಞಾನದ ಭರಾಟೆಗೆ ಸಿಲುಕಿ ನಶಿಸುತ್ತಿರುವ ಕೈಮಗ್ಗ ಉದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು, ಅದರ ಮೂಲಕ ಉದ್ಯೋಗ ನಿರತ ಕೈಮಗ್ಗ ನೇಕಾರರು ರಾಷ್ಟ್ರೀಕೃತ ಹಾಗೂ ಪ್ರಾದೇಶಿಕ ಬ್ಯಾಂಕುಗಳಿಂದ ಸಾಲ ಪಡೆದುಕೊಂಡು ಉದ್ಯೋಗ ಅಭಿವೃದ್ಧಿ ಪಡಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದ ನೇಕಾರರು ಸರ್ಕಾರದ ಯೋಜನೆ ಕೇವಲ ಉಳ್ಳವರಿಗೆ ಮಾತ್ರ ತಲುಪುತ್ತಿವೆ. ನಮ್ಮಂತಹ ಬಡ ನೇಕಾರರಿಗೆ ಸಿಗುವುದಿಲ್ಲ. ಜತೆಗೆ ಬ್ಯಾಂಕಿನವರು ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಾರೆ ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು. ರಾಜ್ಯ ನೇಕಾರರ ಸೇವಾ ಕೇಂದ್ರದ ಉಪನಿರ್ದೇಶಕ ಜವಾಹರಲಾಲ್, ಎನ್ಎಚ್ಡಿಸಿ ಎಂ.ಆರ್.ಶ್ರೀನಿವಾಸ ರಾಘವನ್, ಜಿಲ್ಲಾ ಕೈಮಗ್ಗ ನಿಗಮದ ಯೋಜನಾ ಆಡಳಿತಾಧಿಕಾರಿ ರಾಮಚಂದ್ರಪ್ಪ ತಡಕನಹಳ್ಳಿ, ಶಿವರಾಜ ಕುಲಕರ್ಣಿ, ಎನ್.ಟಿ ನೆಗಳೂರ, ಸ್ಥಳೀಯ ಬ್ಯಾಂಕ್ಗಳ ಅಧಿಕಾರಿಗಳು ಹಾಗೂ ನೇಕಾರರ ಮುಖಂಡರಾದ ಬಾಬು ರಾಯಬಾಗಿ, ಎ.ಎಚ್. ವನ್ನಾಲ, ಹನುಮಂತ ಕೆಂಚಿ, ಕೊಟ್ರೇಶ ಚಿಲಕಾ, ಎಂ.ಎನ್. ಕುಲಕರ್ಣಿ, ಎಂ.ಕೆ ಶಾಬಾದಿ, ಎಸ್.ಐ ಕುಂಬಾರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

