ತಿಂಗಳಲ್ಲಿ 3 ಲಕ್ಷ ಅಶ್ಲೀಲ ಸೈಟ್ ವೀಕ್ಷಣೆ
ಕನ್ನಡಪ್ರಭ ವಾರ್ತೆ, ಗದಗ, ಜ. 8
ಭೌಗೋಳಿಕವಾಗಿ ಗದಗ ಅತ್ಯಂತ ಸಣ್ಣ ಜಿಲ್ಲೆ. ಗದಗ-ಬೆಟಗೇರಿ ನಗರಸಭೆಯನ್ನು ಹೊರತು ಪಡಿಸಿದಲ್ಲಿ ಜಿಲ್ಲೆಯಲ್ಲಿರುವುದು ಪುರಸಭೆ, ಪಟ್ಟಣ ಪಂಚಾಯ್ತಿಗಳು. ಆದರೆ ವಿಚಿತ್ರವೆಂದರೆ ಒಂದು ತಿಂಗಳಲ್ಲಿ ಜಿಲ್ಲೆಯ ವಿವಿಧ ಇಂಟರ್ನೆಟ್ ಸೆಂಟರ್ಗಳು, ಸ್ವಂತಕ್ಕೆ ಇಂಟರ್ನೆಟ್ ಬಳಸುವವರು ಸೇರಿದಂತೆ ಒಟ್ಟು 3 ಲಕ್ಷಕ್ಕೂ ಅಧಿಕ ಅಶ್ಲೀಲ (ಪೋರ್ನ್) ಸೈಟ್ಗಳ ವೀಕ್ಷಣೆ ಮಾಡಿರುವುದು ಪತ್ತೆಯಾಗಿದೆ.
ಹೇಗೆ ಪತ್ತೆ?: ಈ ಕುರಿತು ಖಾಸಗಿ ಸಂಸ್ಥೆಯೊಂದು ಡಿಸೆಂಬರ್ನಲ್ಲಿ ಬಿಎಸ್ಎನ್ಎಲ್ ಹಾಗೂ ಗೂಗಲ್ ಕಂಪನಿಯ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ನಡೆಸಿದೆ. ಆದರೆ, ಸಮೀಕ್ಷೆ ನಡೆಸುವ ಪೂರ್ವದಲ್ಲಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಇಂಟರ್ನೆಟ್ ಸೆಂಟರ್ ಸೇರಿದಂತೆ ಸಾರ್ವಜನಿಕರಿಗೆ ಅಂತರ್ಜಾಲದ ಸಂಪರ್ಕ ನೀಡಿರುವ ಬಿಎಸ್ಎನ್ಎಲ್ ಸಂಸ್ಥೆಯ ಸಹಾಯದೊಂದಿಗೆ ಈ ಮಾಹಿತಿಯನ್ನು ಕಲೆ ಹಾಕಲಾಗಿದೆ ಎಂದು ತನಿಖೆಯ ತಂಡದಲ್ಲಿದ್ದ ಸದಸ್ಯರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಸೂಚನೆ: ಈ ಸಮೀಕ್ಷೆ ಪೂರ್ಣಗೊಂಡು ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆ ಜನವರಿ 4ರಂದೇ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವಿವಿಧ ಇಂಟರ್ನೆಟ್ ಸೆಂಟರ್ಗಳ ಮಾಲೀಕರಿಗೆ ನೋಟೀಸ್ ನೀಡಿದೆ. ಅಲ್ಲದೆ ಸಭೆಯನ್ನೂ ನಡೆಸಿದೆ. ಈ ಸಭೆಯಲ್ಲಿ ಪೊಲೀಸ್ ಇಲಾಖೆಯ ವಿವಿಧ ಠಾಣೆಗಳ ಅಧಿಕಾರಿಗಳು ಹಾಜರಿದ್ದು, ನೆಟ್ ಸೆಂಟರ್ಗಳ ಮಾಲೀಕರಿಗೆ ಹಲವಾರು ವಿಷಯಗಳ ಬಗ್ಗೆ ತಾಕೀತು ಮಾಡಿದ್ದಾರೆ.
ತನಿಖೆ: ಸಭೆಯಲ್ಲಿ ನೆಟ್ ಸೆಂಟರ್ಗಳ ಮಾಲೀಕರಿಂದ ಸರಿಯಾದ ಸ್ಪಂದನೆ ಸಿಗದಿರುವ ಹಿನ್ನೆಲೆಯಲ್ಲಿ ಜನವರಿ 6ರಂದು ಬಡಾವಣೆ ಠಾಣೆ ಪೊಲೀಸರು ವಿವಿಧ ಇಂಟರ್ನೆಟ್ ಸೆಂಟರ್ಗಳಿಗೆ ಭೇಟಿ ನೀಡಿ, ಅಲ್ಲಿ ಅಶ್ಲೀಲ ಸೈಟ್ ವೀಕ್ಷಿಸುತ್ತಿರುವ ಕುರಿತಂತೆಯೂ ಖಚಿತಪಡಿಸಿಕೊಂಡು, ಮಾಲೀಕರಿಗೆ ಸೂಚನೆಯನ್ನೂ ನೀಡಿದ್ದಾರೆ.
ಅಂದೇ ಸಂಜೆ ಬಡಾವಣೆ ಠಾಣೆಯಲ್ಲಿ ಈ ಕುರಿತು ಮತ್ತೊಂದು ಸಭೆ ನಡೆಸಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಭೀರ ಚರ್ಚೆ ನಡೆಸಿದ್ದಾರೆ.
ಪಾಲನೆಯಾಗದ ಕಾನೂನು
ಸೈಬರ್ ಅಪರಾಧ ಕಾಯ್ದೆ ಅನ್ವಯ, ಇಂಟರ್ನೆಟ್ ಸೆಂಟರ್ಗಳು ವ್ಯಕ್ತಿಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೆ ಇಂಟರ್ನೆಟ್ ಬಳಕೆ ಮಾಡಲು ಅವಕಾಶ ಕಲ್ಪಿಸಬಾರದು. ಅದರಲ್ಲಿಯೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬಂದಲ್ಲಿ ಹೆಚ್ಚಿನ ಗಮನ ನೀಡಬೇಕು. ಮುಖ್ಯವಾಗಿ ನೆಟ್ ಸೆಂಟರ್ಗಳಲ್ಲಿ ಕುಳಿತ ಕೆಲಸ ಮಾಡಲು ಪ್ರೈವೇಸಿ ಹೆಸರಿನಲ್ಲಿ ಸಣ್ಣ ಸಣ್ಣ ಕಂಪಾರ್ಟ್ಮೆಂಟ್ ಮಾಡಲಾಗಿದೆ. ಇದರಿಂದಾಗಿಯೇ ಒಳಗಿರುವವರು ಯಾವ ಸೈಟ್ ಓಪನ್ ಮಾಡಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಹೀಗಾಗಿ, ಪಾರದರ್ಶಕವಾಗಿರುವ ಗ್ಲಾಸ್ಗಳನ್ನು ಅಳವಡಿಸುವುದು ಹಾಗೂ ನೆಟ್ಸೆಂಟರ್ಗಳಲ್ಲಿ ಯಾರೇ ಯಾವುದೇ ಸೈಟ್ ಓಪನ್ ಮಾಡಿದರೂ ಅದು ಮಾಲೀಕರಿಗೆ ಗೊತ್ತಾಗುವ ರೀತಿಯಲ್ಲಿ ಇರಬೇಕು ಎನ್ನುವ ಕಾನೂನು ಜಿಲ್ಲೆಯಲ್ಲಿ ಸಮರ್ಪಕವಾಗಿ ಪಾಲನೆಯಾಗಿಲ್ಲ ಎನ್ನುವುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ.
ಅವಳಿ ನಗರದಲ್ಲೇ ಹೆಚ್ಚು
ಗದಗ-ಬೆಟಗೇರಿಯ ಜನಸಂಖ್ಯೆಯೇ ಒಂದೂಕಾಲು ಲಕ್ಷವಿದೆ. ವಿಚಿತ್ರವೆಂದರೆ ಅವಳಿ ನಗರದಲ್ಲಿಯೇ ಕಳೆದ ತಿಂಗಳಲ್ಲಿ 2 ಲಕ್ಷಕ್ಕೂ ಅಧಿಕ ಅಶ್ಲೀಲ ಸೈಟ್ಗಳನ್ನು ವೀಕ್ಷಿಸಲಾಗಿದೆ. ಇದರಿಂದ ಸ್ಪಷ್ಟವಾಗುತ್ತದೆ ನಮ್ಮ ಯುವ ಸಮುದಾಯ, ಆಧುನಿಕ ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳುತ್ತಿದೆ ಎನ್ನುವುದು. ಈ ಬಗ್ಗೆ ಪೊಲೀಸ್ ಇಲಾಖೆ ಒಂದು ವಾರದಿಂದ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಪಾಲಕರೂ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಈ ಸಮಸ್ಯೆಗೆ ಕಡಿಮೆಯಾಗಲು ಸಾಧ್ಯ.
ಅನಗತ್ಯ ತೊಂದರೆ
ನಾವು ನೆಟ್ ಸೆಂಟರ್ ಹೊಂದಿದ್ದೇವೆ. ಎಲ್ಲ ಅಗತ್ಯ ದಾಖಲೆಗಳನ್ನು ತೆಗೆದುಕೊಂಡೇ ಗ್ರಾಹಕರಿಗೆ ಅನುಮತಿ ನೀಡುತ್ತೇವೆ. ಆದರೆ ಅವರಿಗೆ ಸೆಕ್ಸ್ ಸೈಟ್ಗಳನ್ನು ಓಪನ್ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರ ಜಿಲ್ಲಾಡಳಿತ ಈ ಕುರಿತು ಬಿಎಸ್ಎನ್ಎಲ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಲ್ಲಿಂದಲೇ ಈ ವೈಬ್ಸೈಟ್ಗಳನ್ನು ಸ್ಥಗಿತಗೊಳಿಸಿದಲ್ಲಿ ಈ ಸಮಸ್ಯೆ ತಾನಾಗಿಯೇ ಇತ್ಯರ್ಥವಾಗುತ್ತದೆ. ಅನಗತ್ಯವಾಗಿ ನಮಗೆ ತೊಂದರೆ ಮಾಡುತ್ತಿದ್ದಾರೆ.
- ನೆಟ್ ಸೆಂಟರ್ಗಳ ಮಾಲೀಕರು.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

