ಗದಗ

ಸಂಕ್ರಾಂತಿ ಸಂಭ್ರಮ

Published On :

 ಕನ್ನಡಪ್ರಭ ವಾರ್ತೆ, ಗದಗ, ಜ. 14
ಸಂಕ್ರಾತಿ ಆಚರಣೆಯ ವಿಷಯದಲ್ಲಿ ಜಿಲ್ಲೆಯ ಜನತೆ ಜ. 14 ಅಥವಾ ಜ. 15ರಂದು ಎನ್ನುವ ಗೊಂದಲದ ಮಧ್ಯೆಯೇ ಆಚರಿಸಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗಳವಾರವೇ ಆಚರಣೆ ಮಾಡಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಬುಧವಾರ ಸಂಕ್ರಾತಿ ಆಚರಣೆ ಮಾಡುತ್ತಿದ್ದಾರೆ.
ಸಂಕ್ರಾತಿ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮುಂಡರಗಿ ತಾಲೂಕಿನ ಸಿಂಗಲಾಟೂರ ವೀರಭದ್ರೇಶ್ವರ ದೇವಸ್ಥಾನ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರು ಪವಿತ್ರ ಸ್ನಾನ ಮಾಡಿದರು. ಜಿಲ್ಲೆಯ ಇನ್ನೊಂದು ಭಾಗದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿಯೂ ಜನತೆ ಸಂಕ್ರಮಣದ ಅಂಗವಾಗಿ ಪುಣ್ಯಸ್ನಾನ ಮಾಡುವ ಮೂಲಕ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ, ತಮ್ಮ ಇಷ್ಟಾರ್ಥಗಳಿಗಾಗಿ ಪೂಜೆ ಸಲ್ಲಿಸಿದರು.
ಗಜೇಂದ್ರಗಡ ವರದಿ: ದಕ್ಷಿಣ ಕಾಶಿ ಪ್ರಸಿದ್ಧಿ ಐತಿಹಾಸಿಕ ಕಾಲಕಾಲೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣ ಪ್ರಯುಕ್ತ ಮಂಗಳವಾರ ನಾಡಿನ ವಿವಿಧ ಭಾಗಗಳ ಭಕ್ತರು ಆಗಮಿಸಿ, ಕಾಲಕಾಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಉತ್ತರಾಯಣ ಸಂಕ್ರಾಂತಿಯ ಹೊಂಗಿರಣಗಳು ಪಸರಿಸುತ್ತಿದ್ದಂತೆ ಸುತ್ತಲಿನ ಗ್ರಾಮಗಳ ರೈತ ಕುಟುಂಬದ ಮಹಿಳೆಯರು, ಮಕ್ಕಳು ಹಿರಿಯರು ಎತ್ತಿನ ಬಂಡಿಯಲ್ಲಿ, ಹಾಗೂ ಪರ ಊರುಗಳ ಜನ ವಾಹನದಲ್ಲಿ ಆಗಮಿಸಿ ಪುಣ್ಯ ಸ್ನಾನದಲ್ಲಿ ತೊಡಗಿದ್ದರು. ಪ್ರಕೃತಿ ನಿರ್ಮಿತ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಸ್ವಯಂಭು ಲಿಂಗಸ್ವರೂಪಿ ದೇವರಿಗೆ ಭಕ್ತ ಸಮೂಹ ಭಕ್ತಿ ಭಾವದ ಮೂಲಕ ಟೆಂಗಿನಕಾಯಿ, ಹೂ, ಹಣ್ಣು ಸಮರ್ಪಿಸಿ, ಸರ್ವರ ಬದುಕು ಸದಾ ಹಸನಾಗಿರಲೆಂದು ಕಾಲಕಾಲೇಶ್ವರನಲ್ಲಿ ಸಾಮೂಹಿಕವಾಗಿ ಶ್ರದ್ಧಾ, ಭಕ್ತಿಯಿಂದ ಪ್ರಾರ್ಥಿಸಿದರು. ಉತ್ತರಾಯಣ ಆಗಮನದಿಂದ ಮುದುಡಿಕೊಂಡಿರುವ ಮರ ಬಳ್ಳಿಗಳು ಬೆಚ್ಚಗಿನ ವಾತಾವರಣ ಪಡೆದು ಚಿಗುರಿ, ಚೈತನ್ಯ ತುಂಬಿ ಹಸಿರುಡುಗೆ ಉಟ್ಟ ಹಾಗೆ ಮಾನವ ಕುಲಕ್ಕೆ ಸುಖ, ಶಾಂತಿ, ಸಮೃದ್ಧಿ ಜತೆಗೆ ಉತ್ತಮ ಮಳೆ, ಬೆಳೆಗಳೊಂದಿಗೆ ಸರ್ವರಿಗೂ ಸನ್ಮಂಗಳ ತರಲಿ ಎಂದು ನಮಿಸಿದರು.
ಬೆಳಕು ನೀಡಲಿ: ಸಂಕ್ರಾಂತಿ ಎಂದರೆ ಉಜ್ವಲವಾದ ಬೆಳಕು. ಸಂಕ್ರಮಣವು ಪ್ರಗತಿಯ, ಪರಿವರ್ತನೆಯ ದಿವ್ಯ ಸಂಕೇತವಾಗಿದೆ. ದೇಶದಲ್ಲಿ ಶಾಂತಿ, ಐಕ್ಯ, ಸಾಮರಸ್ಯ ಉಂಟಾಗುವುದರ ಜತೆಗೆ ದಿವ್ಯ ಜ್ಞಾನ, ಪರಿವರ್ತನೆ ಕ್ರಿಯಾಶೀಲತೆ ಎಲ್ಲರ ಬಾಳಲ್ಲಿ ಒಡಮೂಡಲಿ ಎಂದು ದೇವಸ್ಥಾನದ ಅರ್ಚಕ ವೇ.ಮೂ. ಕಲ್ಲಂಭಟ್ಟ ಪೂಜಾರ ಮತ್ತು ಮಲ್ಲಯ್ಯನವರು ಹಿರೇಮಠ ಆಶಿಸಿದರು.
ಸಂಜೆ ಪುಣ್ಯಕಾಲ ಶುಭದಿನ ಬಂದಿರುವ ಸವಿನೆನಪಿಗಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಮಹಿಳೆಯರು, ಮಕ್ಕಳು, ಹಿರಿಯರು ಪರಸ್ಪರ ಎಳ್ಳು ಬೆಲ್ಲ ವಿತರಿಸಿ, ಎಳ್ಳು ಬೆಲ್ಲ ತಿಂದು ಒಳ್ಳೆಯವರಾಗಿರೋಣ, ಸಿಹಿಯಾಗಿರೋಣ ಎಂದು ಸಂಕ್ರಾತಿ ಹಬ್ಬ ಸಂಭ್ರಮದಿಂದ ಆಚರಿಸಿದರು.

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.