ಗದಗ

ಕಬ್ಬಿಗೆ ದರ: ರೈತರಿಂದ ಪ್ರತಿಭಟನೆ

Published On :

ಗದಗ: ಸರ್ಕಾರ ನಿಗದಿ ಮಾಡಿದ ಪ್ರತಿ ಟನ್ ಕಬ್ಬಿಗೆ ರು. 2,650 ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಮುಂಡರಗಿ ತಾಲೂಕು ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ, ರಸ್ತೆ ತಡೆ ಜರುಗಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವಿಠ್ಠಲ ಗಣಾಚಾರಿ ಮಾತನಾಡಿ, ರಾಜ್ಯ ಸರ್ಕಾರ ಕಬ್ಬಿಗೆ ಪ್ರತಿಟನ್ಗೆ ರು. 2650 ನಿಗದಿಗೊಳಿಸಿ ಆದೇಶ ಹೊರಡಿಸಿದರೂ ವಿಜಯನಗರ ಸಕ್ಕರೆ ಕಾರ್ಖಾನೆ ಗಂಗಾಪುರ ಪ್ರೈ.ಲಿ. ಮುಂಡರಗಿ, ಕಬ್ಬಿನ ಹಣ ಪೂರ್ತಿ ಪಾವತಿಸದೇ ತಮಗೆ ಇಷ್ಟ ಬಂದಂತೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಆದೇಶವನ್ನು ಧಿಕ್ಕರಿಸಿರುವ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಸಂಪೂರ್ಣ ಹಣ ಕೊಡಿಸುವಂತೆ ಆದೇಶಿಸಬೇಕೆಂದು ಒತ್ತಾಯಿಸಿದರು.  ವಿಜಯ ನಗರ ಸಕ್ಕರೆ ಕಾರ್ಖಾನೆ ರೈತರಲ್ಲಿ ಗೊಂದಲ ಉಂಟುಮಾಡುತ್ತಿರುವುದು ಮತ್ತು ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಮಾಡಲಾಗುತ್ತಿದೆ. ರೈತರಲ್ಲಿ ಒಡುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಬ್ಬು ಸಾಗಾಟ ಮಾಡುವಾಗ ರೈತರಿಂದ ಪ್ರತಿ ಲೋಡ್ಗೆ ರು. 300 ರಿಂದ 500 ವರೆಗೆ ವಸೂಲಿ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಯವರು ರೈತರಿಂದ ಪ್ರತಿ ಟನ್ ಕಬ್ಬಿಗೆ ರು. 700 ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರೈತರಿಗೆ ಒಂದು ಕಡೆ ಗ್ಯಾಂಗ್ಮನ್ ತೊಂದರೆ, ಇನ್ನೊಂದೆಡೆ ಕಾರ್ಖಾನೆಯವರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸರ್ಕಾರವು ನಿಗದಿ ಮಾಡಿದ ಬೆಂಬಲ ಬೆಲೆ ಮತ್ತು ಕಾರ್ಖಾನೆಯವರಿಂದ ಕೊಡಿಸುವ ಹಣವನ್ನು ತಕ್ಷಣವೇ ರೈತರಿಗೆ ಕೊಡಿಸಬೇಕು. ಸರ್ಕಾರ ನಿಗದಿ ಮಾಡಿದ ಹಣ ಕೊಡಿಸದೇ ಹೋದರೆ ಎಲ್ಲ ರೈತರು ಆಮರಣ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ. ಅಹಿತಕರ ಘಟನೆ ನಡೆದರೆ ಇದಕ್ಕೆ ಸಂಪೂರ್ಣ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರೇ ಹೊಣೆ ಹೊರಬೇಕಾಗುತ್ತದೆ. ತಕ್ಷಣ ಸರ್ಕಾರ ಆದೇಶಿಸಿದ ಬೆಲೆ ಕೊಡಿಸಬೇಕು ಎಂದರು. ಪ್ರತಿಭಟನಾ ಮೆರವಣಿಗೆಯು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಮುಳುಗುಂದ ನಾಕಾಕ್ಕೆ ಬಂದು ಅಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಜರುಗಿಸಲಾಯಿತು. ಡಿಸಿ ಕಚೇರಿಯ ಎದುರಿನ ಮುಖ್ಯರಸ್ತೆಯನ್ನು ಬಂದ್ಮಾಡಿ, ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.  ಪ್ರಕಾಶ ಬಣಕಾರ, ರವಿ ನಾಯಕ, ಮಹೇಶ ಸೊಪ್ಪಿನ, ಹನುಮಂತಪ್ಪ ಕುರಿ, ಮಂಜುನಾಥ ಗೊಂಡಬಾಳ, ಶಿವಾನಂದಯ್ಯ ಗುರುಮಠ, ಕಾಶಿನಾಥ ಹೈದರ, ಮಂಜಪ್ಪ ಬಾರಕೇರ, ನಿಂಗಪ್ಪ ಚಿಂಚಲಿ, ಸುರೇಶ ಬಂಗಾರಿ, ಬಸಪ್ಪ ಗುಡಿಸಾಗರ, ಕಪ್ಪತ್ತಪ್ಪ ಆರೇರ, ಮರಿಯಪ್ಪ ಕುರಿ, ಮೈಲಾರಪ್ಪ ನವಲಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.