ಗದಗ

ಜಿಲ್ಲಾ ಸಮ್ಮೇಳನ ಯಶಸ್ಸಿಗೆ ಕೈಜೋಡಿಸಿ

Published On :

ರೋಣ: ರೋಣದಲ್ಲಿ ಬರುವ ಫೆಬ್ರುವರಿಯಲ್ಲಿ ಜರುಗಲಿರುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರೂ ತನು, ಮನ, ಧನ ಹಾಗೂ ಸಲಹೆ, ಸಹಕಾರ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಕರೆ ನೀಡಿದರು.
ಅವರು ಶುಕ್ರವಾರ ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಡೆದ ಶಿಕ್ಷಕರು, ಸರ್ಕಾರಿ ನೌಕರರು, ಕನ್ನಡಪರ ಸಂಘಟನೆಗಳು, ವಿವಿಧ ಇಲಾಖೆ ಮುಖ್ಯಸ್ಥರು, ಕಸಾಪ ಅಜೀವ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಣ ಪಟ್ಟಣದಲ್ಲಿ 2 ದಶಕಗಳ ಬಳಿಕ ನಡೆಯುವ ಈ ಜಿಲ್ಲಾ ಸಮ್ಮೇಳನವನ್ನು ವೈಶಿಷ್ಟ್ಯ ಮತ್ತು ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ವೇದಿಕೆಯೂ ಜಿಲ್ಲೆ ಮತ್ತು ತಾಲೂಕಿನ ಸಾಹಿತಿಗಳಿಗೆ, ಯುವ ಪ್ರತಿಭೆಗಳಿಗೆ, ಕಲಾವಿದರಿಗೆ, ಮಕ್ಕಳ ಪ್ರತಿಭೆ ಅನಾವರಣಕ್ಕೆ, ಜಿಲ್ಲೆ ಮತ್ತು ತಾಲೂಕಿನ ಜ್ವಲಂತ ಸಮಸ್ಯೆಗಳ ಚರ್ಚೆಗೆ ಒಂದು ಅಭೂತಪೂರ್ವ ವೇದಿಕೆಯಾಗಲಿದೆ.
ಸಮ್ಮೇಳನದ ಮೂಲಕ ಕನ್ನಡಾಭಿಮಾನ, ನಾಡು ರಕ್ಷಣೆ ಮತ್ತು ಕನ್ನಡ ಕಂಪನ್ನು ಪ್ರತಿಯೊಬ್ಬರ ಮನೆ ಮನೆಗೂ ಮುಟ್ಟಿಸುವ ಕಾರ್ಯ ಕೈಗೊಳ್ಳಲಾಗುವುದು. ಈ ಎಲ್ಲ ಕಾರ್ಯಗಳು ಜರುಗಲು ಸಾಕಷ್ಟು ಪರಿಶ್ರಮ, ಖರ್ಚು, ವೆಚ್ಚ ತಗುಲುವುದು. 2 ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ರು. 25 ಲಕ್ಷಕ್ಕೂ ಹೆಚ್ಚು ಖರ್ಚು ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಸಮ್ಮೇಳನ ಯಶಸ್ಸಿಗೆ ಮಾನವ ಸಂಪನ್ಮೂಲ ಕ್ರೋಡೀಕರಿಸುವುದು ಅತ್ಯಂತ ಮುಖ್ಯವಾಗಿದೆ. ಅದರ ಜತೆಗೆ ಸಾಹಿತಿಗಳು, ನೌಕರರು, ಸಂಘ, ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಸ್ವ-ಪ್ರೇರಣೆಯಿಂದ ತನು, ಮನ, ಧನ ಸಹಕಾರವನ್ನು ನೀಡುವುದು ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆ ಮತ್ತು ತಾಲೂಕಿನ ಪ್ರತಿಯೊಬ್ಬ ನೌಕರರು ಒಂದು ದಿನದ ವೇತನವನ್ನು ನೀಡಬೇಕು ಎಂದು ವಿನಂತಿಸಿದರು.
ಸಾಹಿತಿಗಳಾದ ವಿ.ಕೆ. ಪಾಟೀಲ, ಎಸ್.ಪಿ. ಹಿರೇಮಠ, ಕಸಾಪ ತಾಲೂಕು ಅಧ್ಯಕ್ಷ ಶಿವರಾಜ ಗುರಿಕಾರ, ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಐ.ಡಿ. ಗಾಣಿಗೇರ, ನೌಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ದೊಡ್ಡಮನಿ, ಬಿಇಒ ಡಿ.ಐ. ಅಸುಂಡಿ, ಎ.ಬಿ. ಹೊನ್ನವಾಡ, ಎಸ್.ಎಸ್. ಪರಡ್ಡಿ, ಪಿ.ಬಿ. ಪಾಟೀಲ ಮಾತನಾಡಿದರು. ಕಸಾಪ ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಶರಣು ಗೋಗೇರಿ, ಮಲ್ಲೇಶ ಪಿ.ಎಚ್., ರಾಜು ಕಮ್ಮಾರ, ಎಸ್.ವೈ. ಯಡಳ್ಳಿ, ಪಿ.ಎಸ್. ವಾಲ್ಮೀಕಿ, ಚಿತ್ರಗಾರ ಸೇರಿದಂತೆ ವಿವಿದ ಇಲಾಖೆ ಮುಖ್ಯಸ್ಥರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕಸಾಪ ಅಜೀವ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಸ್. ಕಳಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ರವಿ ಗವಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.