ಜಿಲ್ಲಾ ಸಮ್ಮೇಳನಕ್ಕೆ 1 ಲಕ್ಷ ರೊಟ್ಟಿ ಸಂಗ್ರಹ
ರೋಣ: ಫೆಬ್ರವರಿ ಮೊದಲ ವಾರದಲ್ಲಿ ರೋಣದಲ್ಲಿ ಜರುಗಲಿರುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನವು 2 ದಿನಗಳ ಕಾಲ ಜರುಗಲಿದ್ದು, ಸಮ್ಮೇಳನಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆಗಾಗಿ 1 ಲಕ್ಷ ರೊಟ್ಟಿ ಸಂಗ್ರಹಿಸುವ ಸಂಕಲ್ಪ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಸ್ತೀ ಶಕ್ತಿ ಸಂಘ, ಸ್ವ-ಸಹಾಯ ಗುಂಪುಗಳ ಸದಸ್ಯರು ಸಹಾಯ ಮುಖ್ಯವಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಅಂದಾನಪ್ಪ ಸಭಾಭವನದಲ್ಲಿ ಗದಗ ಜಿಲ್ಲಾ 6ನೇ ಸಾಹಿತ್ಯ ಸಮ್ಮೇಳನ ಸಿದ್ಧತೆ ಕುರಿತು ತಾಲೂಕಿನ ವಿವಿಧ ಯುವಕ ಮಂಡಳ, ವಿವಿಧ ಸಂಘ ಸಂಸ್ಥೆಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ, ಸ್ವ-ಸಹಾಯ ಗುಂಪುಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮ್ಮೇಳನಕ್ಕೆ ಈಗಾಗಲೇ ಸ್ತ್ರೀ ಶಕ್ತಿ ಸಂಘ ಮತ್ತು ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರು 25 ಸಾವಿರ ಜೋಳದ ರೊಟ್ಟಿ, 50 ಕೆಜಿ ಶೆಂಗಾ ಚಟ್ನಿ, 20 ಕೆಜಿ ಪುಟಾಣಿ ಚಟ್ನಿ, 10 ಸಾವಿರ ಕರ್ಚಿಕಾಯಿ ಕಡಬು ಮತ್ತು 5 ಸಾವಿರ ಶೆಂಗಾ ಹೊಳಿಗೆಯನ್ನು ತಯಾರಿಸಿ ಕೊಡುವುದಾಗಿ ತಿಳಿಸಿದ್ದಾರೆ ಹಾಗೂ ನರೇಗಲ್ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಕಳಕನ್ನವರ ಮತ್ತು ಅವರ ಸಂಗಡಿಗರು ಸೇರಿಕೊಂಡು 15 ಸಾವಿರ ಜೋಳದ ರೊಟ್ಟಿ ತಯಾರಿಸಿ ಕೊಡುವುದಾಗಿ ಒಪ್ಪಿಗೆ ನೀಡಿದ್ದಾರೆ. ಇದೇ ರೀತಿಯಾಗಿ ತಾಲೂಕಿನಲ್ಲಿರುವ ಪ್ರತಿಯೊಂದು ಸ್ತ್ರೀ ಶಕ್ತಿ ಸಂಘ, ಸ್ವ-ಸಹಾಯ ಸಂಘ ವಿವಿಧ ಮಹಿಳಾ ಸಂಘದ ಸದಸ್ಯರು ಸ್ವಪ್ರೇರಣೆಯಿಂದ ರೊಟ್ಟಿ, ಚಪಾತಿ, ಹಾಲು, ಮೊಸರು, ಚಟ್ನಿ ತಯಾರಿಸಿ ಕೊಡುವಲ್ಲಿ ಮುಂದಾಗಬೇಕು ಎಂದರು.
ವಸ್ತು ಪ್ರದರ್ಶನಕ್ಕೆ ಅವಕಾಶ : ಗುಡಿ ಕೈಗಾರಿಕೆಗಳಿಗೆ ಉಳಿವು ಮತ್ತು ಬೆಳೆಯಲು ಸಮ್ಮೇಳನದಲ್ಲಿ ಸ್ತ್ರೀ ಶಕ್ತಿ, ಸ್ವ-ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಡಿಕೈಗಾರಿಕೆಗಳ ಉತ್ತೇಜನಕ್ಕೆ ಸಮ್ಮೇಳನ ವೇದಿಕೆಯಾಗಲಿದೆ. ಒಟ್ಟಾರೆಯಾಗಿ ಸಮ್ಮೇಳನವು ಕನ್ನಡ ನಾಡಿನ ಹಿರಿಮೆ, ಗರಿಮೆಯನ್ನು, ಗತ ವೈಭವ, ನಾಡಿನ ವಿಚಾರಧಾರೆ ತಿಳಿಸುವ, ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುವುದು. ಉದ್ಯೋಗ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ವಿವಿಧ ಗೋಷ್ಠಿಗಳು ಜರುಗಲಿವೆ. ಎಲ್ಲವೂ ಯಶಸ್ವಿಯಾಗಿ ಜರುಗಲು ಸಂಘ, ಸಂಸ್ಥೆ, ಸಂಘಟನೆಗಳು, ಗ್ರಾಪಂ, ಪುರಸಭೆ, ಪಪಂ, ತಾಪಂ, ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ಪಾತ್ರ ಹಾಗೂ ಎಲ್ಲರ ಸಹಕಾರ, ಪ್ರೋತ್ಸಾಹ, ಸಲಹೆ ಅತ್ಯಗತ್ಯವಾಗಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಶರಣು ಗೊಗೇರಿ, ಸಿಡಿಪಿಒ ಬಿ.ಎಸ್. ಮೋಕಾಶಿ, ಸಿ.ಕೆ. ಕೇಸರಿ, ತಾಲೂಕು ನೌಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ದೊಡ್ಡಮನಿ, ಪರಶುರಾಮ ಅಳಗವಾಗಿ, ಶರಣಗೌಡ ಪಾಟೀಲ, ರಾಜು ಕಮ್ಮಾರ, ಕೆ.ಎಸ್. ಕಳಕೊಣ್ಣನವರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

