ಶಾಲಾ ಕೊಠಡಿ ಕಾಮಗಾರಿ ಕಳಪೆ
ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮದ ವೀರಪ್ಪ ಚನ್ನಪ್ಪ ಅಂಗಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ (ಆರ್ಎಂಎಸ್ಎ) 28.50 ಲಕ್ಷಗಳಲ್ಲಿ 4 ಶಾಲಾ ಕೋಣೆಗಳನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಭಾನುವಾರ ಕಾಮಗಾರಿ ನಡೆದ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಜಾನು ಲಮಾಣಿ, ಹಾಲಪ್ಪ ದುಗಾಣಿ, ಮಹಾಂತೇಶ ಶಿರಬಡಗಿ ಮಾತನಾಡಿ, ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಯಾರ ಗಮನಕ್ಕೂ ತರದೇ ಮನಸೋ ಇಚ್ಛೆ ಕಾಮಗಾರಿ ಮಾಡುತ್ತಿದ್ದು, ಪ್ರತಿಯೊಂದು ಹಂತದಲ್ಲಿಯೂ ಕಾಮಗಾರಿ ಕಳಪೆಯಾಗಿದೆ ಎಂದು ದೂರಿದರು.
ಪರಿಶೀಲನೆ ಮಾಡದ ಮೇಲಧಿಕಾರಿಗಳು: ಯೋಜನೆಯಂತೆ ಉತ್ತಮ ಗುಣಮಟ್ಟದ ಸಿಮೆಂಟ್ ಹಾಗೂ ಮರಳು ಬಳಕೆ ಮಾಡಿ ಕಾಮಗಾರಿ ನಡೆಸುವ ಬದಲು ಯರಿಮಣ್ಣಿ ಬೆರೆತ ಮರಳು ಬಳಸಿ ಕಳಪೆ ಗುಣಮಟ್ಟದ ಸಿಮೆಂಟ್ ಹಾಕಿ ಕಾಮಗಾರಿ ಮಾಡಲಾಗುತ್ತಿದೆ. ಸಂಬಂದಪಟ್ಟ ಇಲಾಖೆಯ ಮೇಲಧಿಕಾರಿಗಳು ಒಮ್ಮೆಯೂ ಕಾಮಗಾರಿ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿಲ್ಲ. ಅಧಿಕಾರಿಗಳು ಬರುವವರೆಗೂ ಕಾಮಗಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದೇ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಡಿಮೆ ವೆಚ್ಚದಲ್ಲಿ ಶಾಲಾ ಸುಧಾರಣಾ ಸಮಿತಿಯವರು ಗುಣಮಟ್ಟದ ಸಿಮೆಂಟ್ ಬಳಸಿ ಹೆಚ್ಚು ಬಾಳಿಕೆ ಬರುವ ರೀತಿಯಲ್ಲಿ ಶಾಲಾ ಕೋಣೆ ನಿರ್ಮಿಸಿದ್ದಾರೆ. ಇದೇ ಗುಣಮಟ್ಟದ ಮಾದರಿಯಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಮಗಾರಿ ನಡೆಸುವಂತೆ ಶರಣಪ್ಪ ಹರಿಜನ, ಶರಣಪ್ಪ ಹೂಗಾರ, ಕಾಶಪ್ಪಶೆಟ್ಟರ್ ಕೋರಿ, ಮಂಜುನಾಥ ಕೊಂಚಿಗೇರಿ ಮತ್ತಿತರರು ಒತ್ತಾಯಿಸಿದ್ದಾರೆ.
ಕಾಮಗಾರಿಗೆ ಕಳಪೆ ಗುಣಮಟ್ಟದ ಬ್ಲಾಕ್ (ಇಟ್ಟಂಗಿ) ಬಳಸುತ್ತಿದ್ದು, ಗೋಡೆಗಳು ಬಿರುಕು ಬಿಡಲಾರಂಭಿಸಿವೆ. ಇದೆ ವ್ಯವಸ್ಥೆ ಮುಂದುವರಿದರೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಜಾನು ಲಮಾಣಿ ಎಚ್ಚರಿಕೆ ನೀಡಿದ್ದಾರೆ.
ಹಣ ದುರ್ಬಳಕೆ: ತಾಲೂಕಿನ ಕಡಕೋಳ ಗ್ರಾಮದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿ ಶೌಚಾಲಯ ಕಟ್ಟಿಸಿಕೊಳ್ಳದೇ ಇರುವ ಫಲಾನುಭವಿಗಳಿಗೆ ರು. 4.700 ಮೊತ್ತದ 150ಕ್ಕೂ ಹೆಚ್ಚು ಚೆಕ್ ನೀಡಿದ್ದು, ಇಡೀ ಗ್ರಾಮ ಸುತ್ತಿದರೂ 10 ಶೌಚಾಲಯಗಳು ಸಿಗುವುದಿಲ್ಲ. ಅನುದಾನ ಸಂಪೂರ್ಣ ದುರ್ಬಳಕೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಮಗ್ರ ಪರಿಶೀಲನೆ ಮಾಡಬೇಕು ಎಂದು ರಂಗಪ್ಪ ದೇವಣ್ಣವರ, ಮಹಾಂತೇಶ ಹರ್ಲಾಪುರ, ಮಹೇಶ ಸೊನ್ನದ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

