ಜೈವಿಕ ಅಭಿಯಾನಕ್ಕೆ ತೆರೆ
ಕನ್ನಡಪ್ರಭ ವಾರ್ತೆ, ಗದಗ, ಜ. 20
ಇಂಧನ ಬಳಕೆಯಿಂದ ಪರಿಸರ ಮೇಲಾಗುತ್ತಿರುವ ಹಾನಿ ಹಾಗೂ ಜೈವಿಕ ಇಂಧನ ಬಳಕೆಯಿಂದ ಪರಿಸರ ರಕ್ಷಣೆ ಹಾಗೂ ಸಾವಯವ ಕೃಷಿಗೆ ಆದ್ಯತೆ, ರೈತರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಹಾಲಕೆರೆಯ ಅಭಿನವ ಅನ್ನದಾನ ಶ್ರೀಗಳ ನೇತೃತ್ವದಲ್ಲಿ ನಡೆದ ಹಾಲಕೆರೆಯಿಂದ ಉಳವಿವರೆಗಿನ ಜೈವಿಕ ಅಭಿಯಾನ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಇದು ಸಂಘಟಕರಲ್ಲಿ ಸಾರ್ಥಕತೆ ಭಾವನೆ ಮೂಡಿಸಿದೆ.
ಜ. 6ರಿಂದ ಪ್ರಾರಂಭವಾಗಿ ಜ. 20ರಂದು ರಾತ್ರಿ ಹಾಲಕೆರೆಯಲ್ಲಿ ಮುಕ್ತಾಯವಾಗಿದೆ. ರೈತರಲ್ಲಿ ಸಾವಯವ ಕೃಷಿ ಉತ್ತೇಜನ, ಜೈವಿಕ ಇಂಧನ ಬಳಕೆ ಹೆಚ್ಚಳ, ಗೋ ಸಂರಕ್ಷಣೆ, ಇಂಧನ ಉಳಿತಾಯ ಸೇರಿದಂತೆ ಪ್ರಚಲಿತವಾಗಿ ಅತ್ಯಂತ ಅವಶ್ಯವಿರುವ ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಪ್ರಾರಂಭಿಸಿರುವ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಗದಗ ಜಿಲ್ಲೆಯ ಹಾಲಕೆರೆಯಿಂದ ಉಳವಿಯವರೆಗೆ ನಡೆದ ಈ ಬೃಹತ್ ಅಭಿಯಾನ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿಶೇಷ ಗೋಷ್ಠಿಗಳು. ಪ್ರತಿ ನಿತ್ಯವೂ ರೈತರಿಗೆ ಹೊಸ ಚಿಂತನೆ ಮತ್ತು ಸಾವಯವ ಕೃಷಿ, ಜೈವಿಕ ಇಂಧನ ಬಳಕೆ ಕುರಿತು ಜಾಗೃತಿ ಮೂಡಿಸಲಾಗಿದೆ.
20 ಸಾವಿರಕ್ಕೂ ಹೆಚ್ಚಿನ ರೈತರಿಗೆ ಅನುಕೂಲ: ಸತತ 14 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ದಾರಿಯುದ್ದಕ್ಕೂ ಇರುವ ಗ್ರಾಮಗಳ 20 ಸಾವಿರಕ್ಕೂ ಹೆಚ್ಚಿನ ರೈತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಜೈವಿಕ ಇಂಧನ ಹಾಗೂ ಸಾವಯವ ಕೃಷಿ ಮತ್ತು ಗೋ ಸಂರಕ್ಷಣೆ ವಿಷಯದಲ್ಲಂತೂ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿನವ ಅನ್ನದಾನ ಶ್ರೀಗಳು ಅಭಿಯಾನಕ್ಕೆ ರೈತನ ಮಿತ್ರರಾದ ಎತ್ತು ಹಾಗೂ ಚಕ್ಕಡಿಯನ್ನೇ ಬಳಕೆ ಮಾಡಿಕೊಂಡಿದ್ದು ಸಹಜವಾಗಿ ರೈತರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ.
ಐತಿಹಾಸಿಕ ಮೈಲುಗಲ್ಲು: ಇಂದು ಕೃಷಿಯಿಂದ ಕೆಲವು ರೈತರು ವಿಮುಖರಾಗುತ್ತಿದ್ದು, ಚಕ್ಕಡಿ ಬಳಕೆಯನ್ನೇ ನಿಲ್ಲಿಸಿದ್ದಾರೆ. ಈಗಲೇ ರೈತರ ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಪ್ರಭಾವ ಜೋರಾಗಿದ್ದು ಎಲ್ಲರೂ ಪಾರಂಪರಿಕ ಕೃಷಿಯನ್ನೇ ಮರೆಯುತ್ತಿದ್ದಾರೆ. ರೈತರಲ್ಲಿ ಜಾಗೃತಿ ಮೂಡಿಸಿ ಅವರನ್ನು ಮತ್ತೆ ಪಾರಂಪರಿಕ ಕೃಷಿಯತ್ತ ಕರೆ ತರುವುದೇ ಈ ಅಭಿಯಾನದ ಹಿಂದಿರುವ ಉದ್ದೇಶ. ರಾಜ್ಯದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಅಭಿಯಾನ ನಡೆದಿಲ್ಲ. ಜಾಗೃತಿ ಜಾಥಾದಲ್ಲಿ 250ಕ್ಕೂ ಹೆಚ್ಚು ಚಕ್ಕಡಿಗಳೊಂದಿಗೆ ಎತ್ತುಗಳು, ಹೆಚ್ಚು ರೈತರು ಭಾಗವಹಿಸಿದ್ದು ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ ಎಂದು ಬಣ್ಣಿಸಲಾಗುತ್ತಿದೆ.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

