ಗದಗ

ಜನರ ಸಮಸ್ಯೆ ಶೀಘ್ರ ಪರಿಹರಿಸಿ

Published On :

ಗದಗ: ಜನಸಾಮಾನ್ಯರ ಸಮಸ್ಯೆಗಳಿಗೆ ತಾವು ಸೂಚಿಸಿದ ಪರಿಹಾರ ಕ್ರಮಗಳನ್ನು ಅಧಿಕಾರಿಗಳು ಕಾಲಮಿತಿಯೊಳಗೆ ಜಾರಿಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಟ್ಟುನಿಟ್ಟಿನ ಆದೇಶ ನೀಡಿದರು.
ಅವರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಗದಗ-ಬೆಟಗೇರಿ ನಗರಸಭೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗುವ ಅರ್ಜಿಯ ವಿವರಗಳನ್ನು ಸ್ವೀಕರಿಸಿದ ದಾಖಲಾತಿಯನ್ನು ಫಲಾನುಭವಿಗೆ ನೀಡಲಾಗುತ್ತಿದ್ದು, ಅವರ ಸಮಸ್ಯೆಗಳಿಗೆ 15 ದಿನದೊಳಗೆ ಪರಿಹಾರ ನೀಡಲಾಗುವುದು. ಸರ್ಕಾರದ ಮಟ್ಟದಲ್ಲಿನ ಸಮಸ್ಯೆಗಳಿಗೆ ಹೆಚ್ಚುವರಿ 15 ದಿನದ ಅವಧಿ ನೀಡಲಾಗುವುದು. ಅಲ್ಲದೇ ನಿಗದಿತ ವೆಬ್ಸೈಟ್ನಲ್ಲಿ ಸ್ವೀಕೃತ ಸಮಸ್ಯೆ ಅದಕ್ಕೆ ಸಂಬಂಧಿತವಾಗಿ ಜರುಗುವ ಪರಿಹಾರ ಪ್ರಕ್ರಿಯೆಗಳನ್ನು ಕೂಡ ದಾಖಲಿಸಲಾಗುವುದು. ಇದನ್ನು ಯಾರಾದರೂ ಎಲ್ಲಿಂದಾದರೂ ಕೂಡ ನಿರಾಯಾಸವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡಿರುವ ಶಾಸಕರ ಅಭಿಪ್ರಾಯ, ಅಧಿಕಾರಿಗಳ ಸಲಹೆ ಮೂಲಕ ಕೈಗೊಂಡ ಪರಿಹಾರ ನಿರ್ಣಯವನ್ನು ತಪ್ಪದೇ ಜಾರಿಗೊಳಿಸಬೇಕು. ತಪ್ಪದೇ ಕಾಲಮಿತಿ ಮೀರಿದ ನಂತರ ಪ್ರತಿ ದಿನದ ವಿಳಂಬಕ್ಕೆ ಕಾರಣವನ್ನು ಸಂಬಂಧಿತ ಅಧಿಕಾರಿಗಳು ನೀಡಬೇಕಾಗುತ್ತದೆ ಹಾಗೂ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವ ಪಾಟೀಲ ಎಚ್ಚರಿಕೆ ನೀಡಿದರು. ಪಾರದರ್ಶಕ, ಪ್ರಾಮಾಣಿಕ, ಶೋಷಣೆ ಮುಕ್ತ, ರಚನಾತ್ಮಕ ಹಾಗೂ ವೈಷಮ್ಯ ರಹಿತ ವ್ಯವಸ್ಥೆಯನ್ನು ರೂಪಿಸುವ ರಾಜ್ಯ ಸರ್ಕಾರದ ಆಶಯದ ನಿಟ್ಟಿನಲ್ಲಿ ಜನರ ಸಮಸ್ಯೆ ಆಲಿಕೆ ಹಾಗೂ ಅದರ ನಿವಾರಣೆಯ ಪರಿಣಾಮಕಾರಿ ಕ್ರಮದತ್ತ ಇದು ಮೊದಲ ಹೆಜ್ಜೆಯಾಗಿದೆ. ಬಹು ದೊಡ್ಡ ನಿರೀಕ್ಷೆಯೊಂದಿಗೆ ಜನರ ಸಮಸ್ಯೆ ಪರಿಹಾರಕ್ಕೆ ಪ್ರಾರಂಭಿಸಿರುವ ಜನಸ್ಪಂದನೆಯ ಯಶಸ್ಸಿಗೆ ಜಿಲ್ಲೆಯ ಸಂಬಂಧಿತ ಇಲಾಖೆಗಳು ಶ್ರಮಿಸುವ ಮೂಲಕ ಇಡೀ ರಾಜ್ಯದಲ್ಲಿ ಗದಗ ಜಿಲ್ಲೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಲು ಸಚಿವರು ಸೂಚಿಸಿದರು. ಕಚೇರಿಗೆ ಬರುವ ಸಾರ್ವಜನಿಕರ ಅದರಲ್ಲೂ ಬಡವರನ್ನು ಬರೀ ಅಲೆದಾಡಿಸುವ, ಅಗೌರವ ತೋರಿಸುವ ವ್ಯವಸ್ಥೆಯಿಂದಾಗಿ ಜನಸ್ಪಂದನೆಯಂತಹ ಕಾರ್ಯಕ್ರಮ ಜಾರಿಗೊಳಿಸಬೇಕಾಗಿ ಬಂದಿದ್ದು, ಅಧಿಕಾರಿಗಳು ತಮ್ಮ ಕಾರ್ಯವೈಖರಿ ಬದಲಿಸಿ ಜನಸ್ನೇಹಿ ಆಡಳಿತ ನೀಡಲು ಅವರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇದಕ್ಕೆ ರಾಜಕೀಯ ಹಾಗೂ ಆಡಳಿತಶಾಹಿ ಇಚ್ಚಾಶಕ್ತಿ ಬಹುಮುಖ್ಯವಾಗಿದೆ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಜನರ ಸಮಸ್ಯೆಗಳ ಪರಿಹಾರವೇ ಆಡಳಿತದ ಮುಖ್ಯ ಆದ್ಯತೆಯಾಗಬೇಕು. ತಾಲೂಕು, ಹೋಬಳಿಮಟ್ಟದಲ್ಲಿ ಸಮಸ್ಯೆ ಆಲಿಕೆ ಹಾಗೂ ಪರಿಹಾರ ಕಾರ್ಯ ಚುರುಕಾಗಬೇಕು.  ಈಗಾಗಲೇ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಪ್ರಾರಂಭಗೊಂಡಿದ್ದು ಬಹಳಷ್ಟು ಅನುಕೂಲವಾಗಿದೆ ಎಂದರು. ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರ ಸಮಸ್ಯೆ, ಆಲಿಕೆ ಹಾಗೂ ಪರಿಹಾರ ಅವ್ಯವಸ್ಥಿತವಾಗಿತ್ತು. ಜನರ ಸಮಸ್ಯೆ ಕುಂದುಕೊರತೆ ದೂರುಗಳನ್ನು ಆಲಿಸಿ ಅವಶ್ಯಕ ಪರಿಹಾರ ಒದಗಿಸುವುದಕ್ಕೆ ನಾವೆಲ್ಲ ಇದ್ದೇವೆ.  ಜನರ ಹಾಗೂ ಆಡಳಿತ ಯಂತ್ರದ ನಡುವೆ ಯಾವುದೇ ಗೋಡೆ ಇರಬಾರದು. ಸಮಸ್ಯೆ ಪರಿಹಾರದ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಿ ಅಂತಿಮವಾಗಿ ಜನರ ಸಮಸ್ಯೆಗೆ ಪರಿಹಾರ ಒದಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಜಿಪಂ ಅಧ್ಯಕ್ಷೆ ಕಮಲಮ್ಮ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಎಸ್ಪಿ ಡಾ. ಶರಣಪ್ಪ, ಸಿಇಒ ವೀರಣ್ಣ ತುರಮರಿ ಸೇರಿದಂತೆ ಜಿಪಂ, ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು. ತದನಂತರ ಜರುಗಿದ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ.ಪಾಟೀಲ ಸಮುದಾಯ ಭವನ ಕಟ್ಟಡ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಚರ್ಚ್ ಜೀರ್ಣೋದ್ಧಾರ, ನಿವೃತ್ತಿ ವೇತನ, ಸಾಮಾಜಿಕ ಭದ್ರತಾ ಪಿಂಚಣಿ, ಆಸ್ತಿ ಬದಲಾವಣೆ, ವಿಕಲಚೇತನರಿಗೆ ಸೌಲಭ್ಯ ಒದಗಿಸುವಿಕೆ, ಪಡಿತರ ಚೀಟಿ, ವೈದ್ಯಕೀಯ ವೆಚ್ಚ, ರಸ್ತೆ, ಒಳಚರಂಡಿ ಅಭಿವೃದ್ಧಿ ಹೀಗೆ ಹತ್ತು ಹಲವಾರು ವೈಯಕ್ತಿಕ ಹಾಗೂ ಸಮುದಾಯಿಕ ಸಮಸ್ಯೆ, ಬೇಡಿಕೆ, ಮೂಲಭೂತ ಸೌಕರ್ಯ ಒದಗಿಸುವ ಕುರಿತಂತೆ ಹಲವರಿಂದ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.