ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಅಂಬಿಗರ ಚೌಡಯ್ಯನವರ ಜಯಂತಿ
ಗದಗ:  ಜಿಲ್ಲಾಡಳಿತ, ಜಿಪಂ, ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜ. 21ರ ಬೆಳಗ್ಗೆ 11 ಗಂಟೆಗೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುವುದು. ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಅತಿಥಿಗಳಾಗಿ ಸಂಸದರು, ಶಾಸಕರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಗದಗ ಜಿಲ್ಲಾ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷರು ಆಗಮಿಸುವರು. ಧಾರವಾಡದ ಆಕಾಶವಾಣಿ ಕಲಾವಿದ ಡಿ. ಕುಮಾರದಾಸ ಅವರಿಂದ ಅಂಬಿಗರ ಚೌಡಯ್ಯನವರ ವಚನಗಳ ಗಾಯನ ನಡೆಯಲಿದೆ. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರಮರಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬನಶಂಕರಿ ಅಂಗಡಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.
26ರಂದು ಗಣರಾಜ್ಯೋತ್ಸವ
ಗದಗ:  ಜಿಲ್ಲಾಡಳಿತ ಗದಗ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಜ. 26ರ ಬೆಳಗ್ಗೆ 9 ಗಂಟೆಗೆ ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ರಾಷ್ಟ್ರ ಧ್ವಜಾರೋಹಣವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅತಿಥಿಗಳಾಗಿ ಸಂಸದರು, ಶಾಸಕರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು ಆಗಮಿಸುವರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರಮರಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.
24ರಂದು ವಿದ್ಯುತ್ ವ್ಯತ್ಯಯ
ಗದಗ:  ನಗರದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ, ಸಂಭಾಪುರ ರೋಡ್ ಗದಗನಿಂದ ವಿದ್ಯುತ್ ಪೂರೈಕೆ ಹೊಂದಿರುವ ಎಫ್-11 ಪಂಚಾಕ್ಷರಿ ನಗರ ಫೀಡರನ ಮುಖ್ಯ ವಿದ್ಯುತ್ ಮಾರ್ಗ ಹಾಗೂ ಗದಗ ಶಹರದ ಭೂಮರಡ್ಡಿ ವೃತ್ತದಲ್ಲಿನ ರಸ್ತೆಗೆ ಅಡ್ಡವಿರುವ ಕಂಬಗಳನ್ನು ಸ್ಥಳಾಂತರಿಸಲು ಸ್ವಯಂ ನಿರ್ವಹಣಾ ಯೋಜನೆಯ ಅಡಿಯಲ್ಲಿ ಕಾಮಗಾರಿ ಮತ್ತು ತುರ್ತು ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿದ್ದು, ಹಾಗಾಗಿ ಗದಗ ಶಹರದ ಭೂಮರಡ್ಡಿ ವೃತ್ತ, ಸಂಭಾಪುರ ರಸ್ತೆ, ಹಳೆ ಡಿ.ಸಿ. ಆಫೀಸ್, ಎಪಿಎಂಸಿ ಯಾರ್ಡ್, ಸ್ಟೇಡಿಯಂ, ಹಾತಲಗೇರಿ ನಾಕಾ, ಕೆ.ಸಿ. ರಾಣಿ ರಸ್ತೆ, ಪ್ರಸಾದ ಲಾಡ್ಜ್ ಈ ಭಾಗಗಳಲ್ಲಿ ಜ. 24ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾರಣ ಪ್ರಕಟಣೆ ಗಮನಿಸಿ ಹೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಚೌಡಯ್ಯ ಜಯಂತಿ
ಗದಗ:ಬೆಟಗೇರಿಯ ಮಹಾರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಜ. 21ರಂದು ಬೆಳಗ್ಗೆ 10.30 ಗಂಟೆಗೆ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುತ್ತಿದೆ.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಅಧ್ಯಕ್ಷತೆ ವಹಿಸುವರು. ಸಾಹಿತಿ ರಾಮಣ್ಣ ಬ್ಯಾಟಿ ಇವರು ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರಣ ಶಿಕ್ಷಣಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಪ್ರಾಚಾರ್ಯ ವೈ.ಆರ್. ಹಿರೇಗೌಡರ ತಿಳಿಸಿದ್ದಾರೆ.
ಮುದಕಪ್ಪ ಡಂಬಳ ನಿಧನ
ಗದಗ:  ತಾಲೂಕಿನ ಅಸುಂಡಿ ಗ್ರಾಮದ ಮುದಕಪ್ಪ ಯಲ್ಲಪ್ಪ ಡಂಬಳ (66) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ.
ತಂಬಾಕು ಸೇವನೆ ಜೀವಕ್ಕೆ ಕುತ್ತು
ರೋಣ: ತಂಬಾಕು ಸೇವೆನೆಯಿಂದ ಭಯಾನಕ ರೋಗಕ್ಕೆ ತುತ್ತಾಗಿ, ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು, ಯುವಕರು ತಂಬಾಕು ಸೇವನೆಯನ್ನು ಸಂಪೂರ್ಣ ವಿರೋಧಿಸಬೇಕು ಎಂದು ರೋಣ ಪಿಎಸ್ಐ ಡಿ.ಬಿ. ಪಾಟೀಲ ಹೇಳಿದರು. ಸೋಮವಾರ ಪಟ್ಟಣದ ರಾಜೀವ್ಗಾಂಧಿ ಶಿಕ್ಷಣ ಸಂಸ್ಥೆಯ ಗುರುಪಾದೇಶ್ವರ ಐಟಿಐ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜರುಗಿದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂಬಾಕು ಉತ್ಪನ್ನಗಳಿಂದ ವಿದ್ಯಾರ್ಥಿಗಳು, ಯುವಕರು ದೂರವಿರುವಂತೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಕಳೆದ 3 ದಿನಗಳಿಂದ ರೋಣ ಸಿಪಿಐ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಪೊಲೀಸರ ತಂಡ, ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಾರ್, ರೆಸ್ಟೋರೆಂಟ್, ಚಲನಚಿತ್ರ ಮಂದಿರ, ಪಾನ್ ಬೀಡಾ ಅಂಗಡಿ ಮಾಲೀಕರಿಗೆ ಮತ್ತು ಶಾಲಾ, ಕಾಲೇಜ್ ಸೇರಿದಂತೆ ತಾಲೂಕಿನ ವಿವಿಧ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಜನರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್. ಕಿತ್ತಲಿ, ಸಂತೋಷ ಪಸಾರದ, ವೈ.ಎನ್. ಪಾಪನ್ನವರ, ಎಸ್.ಆರ್. ದೊಡ್ಡಮನಿ, ಎಸ್.ಆರ್. ಐವಳ್ಳಿ, ಸಿದ್ದಪ್ಪ. ಪಿ, ಮೌನೇಶ ಬಡಿಗೇರ, ಫಕ್ಕೀರೇಶ ನೆಗನಹಳ್ಳಿ ಮುಂತಾದವರು ಉಪಸ್ಥಿತರಿದ್ದರು. ಮುತ್ತು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.