ಗದಗ

ನಿವೇಶನಕ್ಕಾಗಿ ಸ್ಲಂ ನಿವಾಸಿಗಳ ಪ್ರತಿಭಟನೆ

Published On :

ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಹಾಗೂ ಲಕ್ಷ್ಮೇಶ್ವರ ನಗರಗಳಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೇ ಸುಮಾರು 25 ವರ್ಷಗಳಿಂದ ಕಷ್ಟಕರ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ಸ್ಲಂ ನಿವಾಸಿಗಳಿಗೆ ಸರ್ಕಾರ ತುರ್ತಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸುವ ಜತೆಗೆ ನಿವೇಶನ ಕೊಡಲು ಮುಂದಾಗಬೇಕು ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಆಗ್ರಹಿಸಿದರು.
ಮಂಗಳವಾರ ತಾಲೂಕು ಬಿಜೆಪಿ ಸ್ಲಂ ಯುವ ಮೋರ್ಚಾದ ವತಿಯಿಂದ ಪಟ್ಟಣದ ಮಾರುತಿ ದೇವಸ್ಥಾನದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ವಿವಿಧ ಘಟಕಗಳ ಮುಖಂಡರು, ಸ್ಲಂ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ಶೈಕ್ಷಣಿಕ ಸೌಲಭ್ಯ, ಆರ್ಥಿಕ ಭದ್ರತೆಗಳನ್ನು ನೀಡಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು. ತಾಲೂಕಿನಲ್ಲಿಯ ಸ್ಲಂ ನಿವಾಸಿಗಳನ್ನು ಗುರುತಿಸಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 18 ಎಕರೆ ಜಮೀನು ಖರೀದಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾಂಗ್ರೆಸ್ ಸರ್ಕಾರ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸ್ಲಂ ನಿವಾಸಿಗಳ ಏಳ್ಗೆಗಾಗಿ ಬಜೆಟ್ನಲ್ಲಿ ಹಣ ತೆಗೆದಿರಿಸಿರುವುದಾಗಿ ಹೇಳುತ್ತಾ ಬರೀ ಮತ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ನಾಯಕರ ಕಚ್ಚಾಟದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು. ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಲು ಹಿಂದೇಟು ಹಾಕುತ್ತಿರುವ ಸರ್ಕಾರ 8 ತಿಂಗಳು ಕಳೆಯುತ್ತಾ ಬಂದರೂ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ದೂರಿದರು.
ತಾಲೂಕು ಬಿಜೆಪಿ ಸ್ಲಂ ಯುವ ಮೋರ್ಚಾದ ಅಧ್ಯಕ್ಷ ಗುರುಶಾಂತಯ್ಯ ಸಿಂದಳ್ಳಿಮಠ, ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಸ್ಲಂ ನಿವಾಸಿಗಳು ವಸತಿ ಸೌಕರ್ಯಗಳಿಲ್ಲದೇ ಅಲೆಮಾರಿಗಳಂತೆ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗುತ್ತಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಿ ಕೊಡಬೇಕು. ಒಂದು ತಿಂಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿ ಕೊಡದಿದ್ದರೆ ತಾಲೂಕು ಬಂದ್ಗೆ ಕರೆ ನೀಡಿ ತಹಸೀಲ್ದಾರ್ ಕಾರ್ಯಾಲಯಕ್ಕೆ ಬೀಗ ಹಾಕಿ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವ ಬೆದರಿಕೆ ಹಾಕಿದ್ದಾರೆ. ಮನವಿ ಸ್ವೀಕರಿಸಿದ ಶಿರಸ್ತೇದಾರ ಎನ್.ಎ. ನದಾಫ್ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಅರವಿಂದ ಹುಲ್ಲೂರ, ನಗರ ಘಟಕದ ಅಧ್ಯಕ್ಷ ಯಲ್ಲಪ್ಪ ಇಂಗಳಗಿ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಜಾನು ಲಮಾಣಿ, ಪ.ಪಂ. ಸದಸ್ಯ ಗೂಳಪ್ಪ ಕರಿಗಾರ, ಶ್ರೀನಿವಾಸ ಹುಬ್ಬಳ್ಳಿ, ಸುರೇಶ ಅಕ್ಕಿ, ಅಶೋಕ ಹಡಗಲಿ, ಸರೋಜ ಕಟ್ಟಿಮನಿ, ಆನಂದ ಸೊರಟೂರ, ಶಶಿಧರ ಮಣ್ಣೂರ, ಶಕುಂತಲಾ ಬೆಂಗಳೂರ, ಶಶಿಧರ ರಾನಡೆ, ವಿನಾಯಕ ಜಾಧವ, ಬಸವರಾಜ ನರಗುಂದ, ಎನ್.ಎನ್. ಬಾಡಗಿ, ಕಮಲವ್ವ ಶಿರಹಟ್ಟಿ, ವಿ.ಸಿ. ಚಕ್ರಸಾಲಿ, ಎಂ.ಎಸ್. ಪೋತರಾಜ, ಶಿವಪುತ್ರಪ್ಪ ಹತ್ತಿಕೋಟಿ, ಶರಣಯ್ಯ ಮಠಪತಿ ಇತರರು ಮನವಿ ನೀಡುವಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.