ಬ್ಯಾರೇಜ್ ನಿರ್ಮಿಸಿದರೂ ಲಾಭ ಶೂನ್ಯ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 21
ತಾಲೂಕಿನ ಚವಡಾಳ ಗ್ರಾಮದ ಹತ್ತಿರ ಸಣ್ಣ ನೀರಾವರಿ ಇಲಾಖೆಯವರು 2012-13ನೇ ಸಾಲಿನಲ್ಲಿ ಅಚ್ಚುಕಟ್ಟು ಪ್ರದೇಶದ 115 ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸಲು ರು. 2 ಕೋಟಿಗೂ ಹೆಚ್ಚು ಅನುದಾನದಲ್ಲಿ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಕಾಮಗಾರಿ ನಡೆಸಿದ್ದು, ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದಲ್ಲದೇ ರೈತರಿಗೆ ಯೋಜನೆ ಲಾಭವೂ ದೊರೆತಿಲ್ಲ.
ಯೋಜನೆಯಂತೆ ಕಾಮಗಾರಿ ಕೈಗೊಳ್ಳದೇ, ಬ್ಯಾರೇಜ್ (ಬಾಂದಾರ) ಕಾಮಗಾರಿಯನ್ನು ತರಾತುರಿಯಲ್ಲಿ ಮಾಡಿದ್ದರಿಂದ ರೈತರಿಗೆ ಇದರ ಪ್ರಯೋಜನವಾಗಿಲ್ಲ. ಬ್ಯಾರೇಜ್ಗೆ ಕ್ರಸ್ಟಗೇಟ್ ಅಳವಡಿಸದೇ ಇರುವುದರಿಂದ ಹಳ್ಳದಲ್ಲಿ ಹನಿ ನೀರು ಸಂಗ್ರಹವಾಗದೇ ಹರಿದು ಹೋಗಿದೆ. ರೈತರ ನೀರಾವರಿ ಬೆಳೆ ಸಂಪೂರ್ಣ ಒಣಗಿ ಹೋಗುತ್ತಿದ್ದು, ಚಿಂತೆಗೀಡಾಗಿದ್ದಾರೆ.
ನೀರಿನ ಸೆಳೆತಕ್ಕೆ ಹಳ್ಳದ ದಂಡೆಯ ಮಣ್ಣು ಕೊರೆದು ಪಕ್ಕದ ರೈತರ ಜಮೀನಿಗೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಹೆಚ್ಚುವರಿಯಾಗಿ ಲಕ್ಷಾಂತರ ಖರ್ಚುಮಾಡಿ ಕಲ್ಲಿನ ಪಿಚ್ಚಿಂಗ್ ಮಾಡಿದ್ದು, ಸಿಮೆಂಟ್ ಬಳಕೆ ಮಾಡದೇ ಬರೀ ಕಲ್ಲು ಹೊದೆಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭಾರಿ ಹಣದ ಅವ್ಯವಹಾರ ನಡೆಸಿದ್ದು, ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೋಟಿ-ಕೋಟಿ ಹಣ ಹಳ್ಳದ ನೀರಿನಲ್ಲಿ ಹರಿದು ಹೋಗಿದೆ.
ರೈತರ ಹೇಳಿಕೆ: ನೀರಾವರಿ ಸೌಲಭ್ಯ ಪಡೆದು ಆರ್ಥಿಕವಾಗಿ ಸುಧಾರಣೆ ಹೊಂದುವುದಿರಲಿ ಹಳ್ಳಕ್ಕೆ ಹೊಂದಿಕೊಂಡಿರುವ ರೈತರು ಬ್ಯಾರೇಜ್ ಕಟ್ಟಲು ತಮ್ಮ ಜಮೀನು ಕಳೆದುಕೊಂಡಿದ್ದು, ಇಲ್ಲಿಯ ವರೆಗೂ ಪರಿಹಾರ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳಿಗೆ, ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಳ್ಳದಲ್ಲಿ ನೀರಿಲ್ಲದೆ ಸದ್ಯ ಎಲ್ಲ ಬೆಳೆಗಳು ಒಣಗುತ್ತಿದ್ದು, ರೈತರು ಮತ್ತೆ ಸಾಲದ ಬಲೆಯಲ್ಲಿ ಸಿಲುಕುವಂತಾಗಿದೆ ಎಂದು ಟಿ.ಬಿ. ಮುಂಡವಾಡ, ನೇಮಣ್ಣ ತಳವಾರ, ಬೂದಪ್ಪ ಬಾರಕೇರ, ಸೋಮಶೇಖರಯ್ಯ ಹಿರೇಮಠ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನು ಕಲ್ಲು ಪಿಚ್ಚಿಂಗ್ ಸಿಮೆಂಟ್ ಹಾಕುವುದು ಯೋಜನೆಯ ವ್ಯಾಪ್ತಿಯಲ್ಲಿ ಇಲ್ಲ. ಇನ್ನು ಕ್ರಸ್ಟ್ಗೇಟ್ ಅಳವಡಿಕೆಯ ಕಾರ್ಯ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ.
ಉಮಾಪತಿ ಶೆಟ್ಟರ್
ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ, ಗದಗ
-ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

