ಗದಗ

ನೀರಿಗೆ ಜನ ಪರದಾಟ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ. ಜ. 22
ಪುರಸಭೆ ಅಧ್ಯಕ್ಷರ ನಿವಾಸದ ಕೂಗಳತೆ ದೂರದಲ್ಲಿರುವ ಶುದ್ಧ ಕುಡಿಯುವ ನೀರು ಕೇಂದ್ರ ಸ್ಥಗಿತವಾಗಿ ಹಲವು ತಿಂಗಳು ಗತಿಸಿದೆ. ಪುನರಾರಂಭಿಸುವ ಕುರಿತು ಇಲ್ಲಿವರೆಗೂ ಯಾರೂ ಚಕಾರ ಎತ್ತುತ್ತಿಲ್ಲ. ಪರಿಣಾಮ ಶುದ್ಧ ಕುಡಿಯುವ ನೀರಿಗಾಗಿ ಜನರ ಪರದಾಟ ಮುಗಿಲು ಮುಟ್ಟಿದೆ.
ಬಿಜೆಪಿ 2ನೇ ಬಾರಿ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದು ಐದು ತಿಂಗಳು ಕಳೆದಿದೆ. ಆದರೆ, ಅದಕ್ಕೂ ಮೊದಲೇ ಸ್ಥಗಿತಗೊಂಡಿರುವ ಈ ಶುದ್ಧ ಕುಡಿಯುವ ನೀರಿನ ಕೇಂದ್ರ ಜನಸೇವೆಗೆ ದೊರೆಯದೇ ಬೀಗ ಹಾಕಲಾಗಿದೆ.
ನಿಲುಕದ ನಕ್ಷತ್ರ: ಸ್ಥಳೀಯ ಪುರಸಭೆ ಮತ್ತು ಹೈದರಾಬಾದಿನ ಸ್ಮಾರ್ಟ್ ಅಕ್ವಾಲಾಜಿಸ್ ಸಂಸ್ಥೆ ರು. 12 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ (ಆರ್‌ಓ ಪ್ಲ್ಯಾಂಟ್) 10 ಪೈಸೆಗೆ ಒಂದು ಲೀಟರ್ ಶುದ್ಧ ಕುಡಿಯುವ ನೀರು ಪೂರೈಕೆ ಕೇಂದ್ರ ಆಗಾಗ ಸ್ಥಗಿತಗೊಳ್ಳುತ್ತಿದೆ. ಕಡು ಬಡವರಿಗೂ ಶುದ್ಧ ಕುಡಿವ ನೀರು ದೊರೆಯಲಿ ಎನ್ನುವ ಉದ್ದೇಶದಿಂದ ತೆರೆಯಲಾದ ಈ ಶುದ್ಧ ಕುಡಿಯುವ ನೀರು ಸರಬರಾಜು ಕೇಂದ್ರ ಜನರ ಪಾಲಿಗೆ ನಿಲುಕದ ನಕ್ಷತ್ರವಾಗಿದೆ.
ಯೋಜನೆಯ ಮೂಲ ಉದ್ದೇಶ ಇಲ್ಲಿ ಬುಡಮೇಲಾಗಿದೆ. ಈ ಕೇಂದ್ರ ಪ್ರಾರಂಭಿಸಿದಾಗ ಹಗಲು ರಾತ್ರಿ ಎನ್ನದೇ ಕೇವಲ ರು. 2ಗೆ 20 ಲೀಟರ್ ಕ್ಯಾನ್ ಶುದ್ಧ ಕುಡಿವ ನೀರು ವಿತರಿಸಲಾಗುತಿತ್ತು. ಕೇಂದ್ರ ಬಂದ್ ಮಾಡಿದ ಪರಿಣಾಮ ಜನ ಈಗ ಪರದಾಡುವಂತಾಗಿದೆ.
ಪಟ್ಟಣ ಜನತೆಗೆ ಕೊಳವೆ ಬಾವಿಯಿಂದ ಸಂಗ್ರಹಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಸಾಕಷ್ಟು ಫ್ಲೋರೈಡ್ ಅಂಶ ಇರುವುದರಿಂದ ಅನೇಕ ಜನ ಕಿಡ್ನಿಯಲ್ಲಿ ಕಲ್ಲು, ಹಲ್ಲು ಬೇನೆ, ಕಾಲು ಬೇನೆಯಂತಹ ಅನೇಕ ಕಾಯಿಲೆಗೆ ತುತ್ತಾಗಿದ್ದಾರೆ. ಆದರೆ, ಅಸಮರ್ಪಕ ನಿರ್ವಹಣೆಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಕೇಂದ್ರದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ವೈಫಲ್ಯಕ್ಕೆ ಸಾಕ್ಷಿ: ಹತ್ತಾರು ದಶಕದಿಂದ ಜನ ಫ್ಲೋರೈಡ್‌ಯುಕ್ತ ನೀರು ಸೇವಿಸುತ್ತಿರುವುದರಿಂದ ನರ ದೌರ್ಬಲ್ಯ ಮೊಣಕಾಲು ನೋವು, ಪಾರ್ಶ್ವವಾಯು ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. ಫ್ಲೋರೈಡ್‌ಯುಕ್ತ ನೀರನ್ನು ತಡೆಗಟ್ಟಲು ರಾಜ್ಯ ಸರ್ಕಾರ ಶುದ್ಧ ನೀರಿನ ಕೇಂದ್ರ ಯೋಜನೆಯನ್ನು ಗ್ರಾಮಗಳಲ್ಲಿ ಜಾರಿಗೆ ತಂದಿರುವುದು ಜನಕ್ಕೆ ಅನುಕೂಲವಾಗಿದೆ. ಸರ್ಕಾರದ ಯೋಜನೆ ವೈಫಲ್ಯಕ್ಕೆ ಈ ಶುದ್ಧ ಕುಡಿಯುವ ನೀರಿನ ಘಟಕ ಸಾಕ್ಷಿಯಾಗಿದೆ.

ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.