ಮಳೆ, ಬೆಳೆ ಭಾಳ ಚೆನ್ನಾಗೈತೇನ್ರೀ...
ಕನ್ನಡಪ್ರಭ ವಾರ್ತೆ, ಮುಂಡರಗಿ, ಜ. 23
ಸತತ ಬರಗಾಲದ ಬವಣೆಯಿಂದ ಬಳಲುತ್ತಿರುವ ಮುಂಡರಗಿ ತಾಲೂಕನ್ನು ಸರ್ಕಾರ ಈ ವರ್ಷ ಬರಗಾಲ ಪೀಡಿತ ತಾಲೂಕೆಂದು ಘೋಷಿಸಿಲ್ಲ. ಇಲ್ಲಿ ಅಷ್ಟೊಂದು ಮಳೆ, ಬೆಳೆ ಚೆನ್ನಾಗೈತೇನ್ರೀ..ಸಾಹೇಬ್ರ ಎಂದು ತಾಲೂಕು ಪಂಚಾಯಿತಿ ಸದಸ್ಯ ಪಾಲಾಕ್ಷಗೌಡ ಪಾಟೀಲ ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಅವರು ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಮರ್ಥ ಸೌಧದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತಿದ್ದ 20,608 ಹೆಕ್ಟೇರ್ ಬೆಳೆಯಲ್ಲಿ 20137 ಹೆಕ್ಟೇರ್ ಬೆಳೆ ಶೇ. 85 ರಷ್ಟು ತೇವಾಂಶದ ಕೊರತೆಯಿಂದ ನಷ್ಟವಾಗಿದೆ. ಅದರತಂತೆ ಹಿಂಗಾರಿಯಲ್ಲಿ ಬಿತ್ತಿದ್ದ 32,872 ಹೆಕ್ಟೇರ್ ಬೆಳೆ ಶೇ. 90ರಷ್ಟು ತೇವಾಂಶದ ಕೊರತೆಯಿಂದ ಹಾಳಾಗಿದೆ ಎಂದು ಸಮಜಾಯಿಸುತ್ತಿದ್ದಂತೆಯೇ ತಾಪಂ ಸದಸ್ಯರೆಲ್ಲರೂ ಮತ್ತೇಕೆ ಸರ್ಕಾರ ಈ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿಲ್ಲ. ಕೂಡಲೇ ಅದನ್ನು ಸರಿಪಡಿಸುವಂತೆ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಡ ತರಬೇಕೆಂದರು.
ರೈತ ಸಂಪರ್ಕ ಕೇಂದ್ರಗಳು ರೈತರ ಜೀವನಾಡಿ ಇದ್ದಂತೆ. ಕಳೆದ 20 ದಿನಗಳಿಂದ ತಾಲೂಕಿನ ಮುಂಡರಗಿ ಹೋಬಳಿ ಮತ್ತು ಡಂಬಳ ಹೋಬಳಿ ರೈತ ಸಂಪರ್ಕ ಕೇಂದ್ರಗಳು ಯಾವಾಗಲೂ ಬೀಗ ಜಡಿದುಕೊಂಡಿರುತ್ತವೆ. ರೈತರು ದಿನಾಲೂ ಬಂದು ಮುಚ್ಚಿದ ಕೇಂದ್ರಗಳನ್ನು ಕಂಡು ನಿರಾಸೆಯಿಂದ ಮರಳಿ ಹೋಗುತ್ತಿದ್ದಾರೆ. ಈ ಕುರಿತು ಪತ್ರಿಕೆಗಳಲ್ಲಿ ವರದಿ ಮಾಡಿದರೂ ಸಹ ಅಧಿಕಾರಿಗಳು ಜಾಣಕುರುಡು ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಅಲ್ಲಿ ಕನಿಷ್ಠ ಪಕ್ಷ ರೈತರಿಗೆ ಕಾಣುವ ಹಾಗೆ ರೈತ ಸಂಪರ್ಕ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಬೋರ್ಡ್ನ್ನು ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಡಂಬಳ ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಪ್ರಹ್ಲಾದರಾವ್ ಮಾತನಾಡಿ, ಸಿಬ್ಬಂದಿಯ ಕೊರತೆಯಿಂದ ರೈತ ಸಂಪರ್ಕ ಕೇಂದ್ರಗಳನ್ನು ಮುಚ್ಚಲಾಗಿದೆ. ಆದರೂ ಡಂಬಳ ಹೋಬಳಿಗೆ ಒಬ್ಬರನ್ನು ನಿಯೋಜಿಸಲಾಗಿದೆ. ಮುಂಡರಗಿ ರೈತ ಸಂಪರ್ಕ ಕೇಂದ್ರಕ್ಕೂ ಓರ್ವನನ್ನು ನಿಯೋಜಿಸಲಾಗಿದೆ. ಆದರೆ, ಸಹಕಾರಿ ಸಂಘಗಳ ಚುನಾವಣೆ ಬಂದಿದ್ದರಿಂದ ಈ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದರು.
ಜಲಾನಯನ ವಿಭಾಗ ಅಧಿಕಾರಿಗಳು ವಿವರಣೆ ನೀಡುತ್ತಿದ್ದಾಗ ಮಳೆಕೊಯ್ಲು, ಕೆರೆಗಳ ಪುನಶ್ಚೇತನ, ಒಡ್ಡುಗಳ ನಿರ್ಮಾಣ ಮುಂತಾದವುಗಳ ಕುರಿತು ಮಾಹಿತಿ ಹೇಳುತ್ತಿದ್ದಾಗ, ಡೋಣಿ ತಾಪಂ ಸದಸ್ಯ ಸಿದ್ಧನಗೌಡ ಪಾಟೀಲ ಈ ಎಲ್ಲ ಕೆಲಸಗಳನ್ನು ಎಲ್ಲಿ ಮಾಡೀರಿ...ಆಯಾ ತಾಪಂ ಸದಸ್ಯರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ನೀವು ಮಾಡಿದ ಕಾಮಗಾರಿಗಳನ್ನು ತಾಪಂ ಸದಸ್ಯರನ್ನು ಕರೆದುಕೊಂಡು ಹೋಗಿ ತೋರಿಸಿ ಎಂದರು. ಅದಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು.
ಡಂಬಳದಲ್ಲಿ ಬಿರುಕು ಬಿಟ್ಟಿರುವ ಅಂಗನವಾಡಿಯನ್ನು ನೆಲಸಮ ಮಾಡಿಸಿ ಹೊಸ ಅಂಗನವಾಡಿಯನ್ನು ಕಟ್ಟುವಂತೆ ಕಳೆದ ಒಂದು ವರ್ಷದಿಂದ ಸಿಡಿಪಿಒ ಕಚೇರಿಯಲ್ಲಿ ಹೇಳುತ್ತಾ ಬಂದಿದ್ದರೂ ತಾಪಂ ಸದಸ್ಯನಾದ ನನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಡಂಬಳ ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ ಹೇಳಿದರು. ಕೂಡಲೇ ಅದರ ವ್ಯವಸ್ಥೆಯನ್ನು ಮಾಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಬಿದರಹಳ್ಳಿಯ ಹೊಸ ಗ್ರಾಮದಲ್ಲಿ ಹೊಸ ಅಂಗನವಾಡಿಯ ಅವಶ್ಯಕತೆ ಇದೆ. ಪ್ರಾರಂಭಿಸಿ ಎಂದು ಸದಸ್ಯ ರಾಮಾಂಜನೇಯರಾಜು ಪೆನಮತ್ಸ ಸಭೆಯ ಗಮನ ಸೆಳೆದರು. ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ, ವಿದ್ಯುತ್ ಸೇರಿದಂತೆ ಅನೇಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ತಾಪಂ ಅಧ್ಯಕ್ಷೆ ತಾರಾಬಾಯಿ ಚವ್ಹಾಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅಕ್ಕಮಹಾದೇವಿ ಹಾರೋಗೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ. ಮೋಹನ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವ್ಯವಸ್ಥಾಪಕ ಇನಾಮದಾರ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

