20ನಿಮಿಷ 20ಸುದ್ದಿ
ಇಂದು ರೋಣದಲ್ಲಿ ಡ್ಯಾನ್ಸ್ ಸ್ಪರ್ಧೆ
ರೋಣ: ಪಟ್ಟಣದ ಮಲ್ಲಿಕಾರ್ಜುನ ಯುವಕ ಮಂಡಳ ಇವರ ಆಶ್ರಯದಲ್ಲಿ ಯುವಕ ಮಂಡಳ 6ನೇ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದ ಹಳೇ ಸಂತೆ ಬಜಾರ್ ಜಾಗೆಯಲ್ಲಿ ಜ. 26 ರಂದು ಸಂಜೆ 5 ಗಂಟೆಗೆ ಡ್ಯಾನ್ಸ್ (ನೃತ್ಯ) ಸ್ಪರ್ಧೆ ಜರುಗಲಿದೆ. ಸ್ಪರ್ಧೆಯ ಉದ್ಘಾಟನೆಯನ್ನು ಧಾರವಾಡದ ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್.ಪಾಟೀಲ ನೆರವೇರಿಸುವರು. ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಶ್ರೀಗಳು ವಹಿಸುವರು. ಅತಿಥಿಗಳಾಗಿ ಮಿಥುನ್ ಪಾಟೀಲ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಬಸನಗೌಡ ಪಾಟೀಲ, ತೋಟಪ್ಪ ನವಲಗುಂದ, ಮಂಜುನಾಥ ಹಾಳಕೇರಿ, ವಿದ್ಯಾ ಬಡಿಗೇರ, ರತ್ನಾ ಕೊಳ್ಳಿ, ರಾಜು ಪಲ್ಲೇದ ಮುಂತಾದವರು ಉಪಸ್ಥಿತರಿರುವರು ಎಂದು ಯುವಕ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಸಂಕನಗೌಡ್ರ, ಕಾರ್ಯದರ್ಶಿ ಈಶ್ವರ ಕಡಬಿನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ
ಗಜೇಂದ್ರಗಡ: ಸಮೀಪದ ಮುಶಿಗೇರಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಡಾ. ಜಿ.ಬಿ. ಕಾರಡಗಿಮಠ ಮಲ್ಟಿ ಸ್ಪೇಷಾಲಿಟಿ ಹಾಸ್ಪಿಟಲ್ ಬದಾಮಿ, ವೈದ್ಯರ ಸಂಘ ಮುಶಿಗೇರಿ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜ. 26 ಬೆಳಗ್ಗೆ 10ಕ್ಕೆ ನಡೆಯಲಿದೆ. ಜಿಪಂ ಮಾಜಿ ಅಧ್ಯಕ್ಷ ಎನ್.ಕೆ. ಬೇವಿನಮರದ, ಆರ್.ಎಸ್. ಮಾಲಗಿತ್ತಿ, ಗ್ರಾಪಂ ಉಪಾಧ್ಯಕ್ಷ ಚಂದಪ್ಪ ಗೂಡದೂರ ಪಾಲ್ಗೊಳ್ಳುವರು. ಶಿಬಿರದ ಸದುಪಯೋಗವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳಿಗೆ ಉಚಿತ ಬಟ್ಟೆ ವಿತರಣೆ
ನರೇಗಲ್ಲ: ಪಟ್ಟಣದ ಅನ್ನದಾನ ಶಿಕ್ಷಣ ಸಂಸ್ಥೆಯಲ್ಲಿ ತಾಯವ್ವ ಶಕ್ತಿ ಸಂಘ ಹೊಸಪೇಟೆ ಇದರ ಆಶ್ರಯದಲ್ಲಿ ಶುಕ್ರವಾರ ರಾತ್ರಿ ಕುವುಡ ಮತ್ತು ಮೂಕ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಬೆಡ್ಶೀಟ್, ದಿಂಬು ಮೊದಲಾದ ಅವಶ್ಯಕ ಸಾಮಗ್ರಿಗಳನ್ನು ಅನ್ನದಾನ ಶ್ರೀಗಳ ನೇತೃತ್ವದಲ್ಲಿ ತಾಯವ್ವ ಶಕ್ತಿ ಸಂಘದ ಸಂಸ್ಥಾಪಕಿ ಕವಿತಾ ಈಶ್ವರಸಿಂಗ್ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ. ಹಿರೇಮಠ, ಆಡಳಿತ ಮಂಡಳಿಯ ಕಾರ್ಯದರ್ಶಿ ಸಿ.ಕೆ. ಹಿರೇಮಠ, ಶಾಲಾ ಮುಖ್ಯೋಪಾಧ್ಯಾಯ ಬಸಪ್ಪ ಸಂಗಳದ, ಸಿ.ಜಿ. ಹುಡೇದಗಡ್ಡಿ, ಪಪೂ ಪ್ರಾ. ವೈ.ಸಿ. ಪಾಟೀಲ ಹಾಗೂ ತಾಯವ್ವ ಶಕ್ತಿ ಸಂಘದ ಹಲವಾರು ಸದಸ್ಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗಬೇಡಿ: ಬಡಿಗೇರ
ಗದಗ: ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೇ ಸದೃಢ ಶರೀರ ಹೊಂದುವುದರೊಂದಿಗೆ ಆರೋಗ್ಯವಂತರಾಗಿರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಹೇಳಿದರು. ಅವರು ಶನಿವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಹೂಗಾರ ಮಾತನಾಡಿ, ಶಿಸ್ತಿನಿಂದ ಆಯೋಜಿಸಿದ ಈ ಕ್ರೀಡಾಕೂಟ ನಿಜಕ್ಕೂ ಮೆಚ್ಚುವಂತದ್ದು ಎಂದರು. ಗಣೇಶಸಿಂಗ್ ಬ್ಯಾಳಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಕ್ರೀಡಾಕೂಟ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ವಿ.ಜಿ. ಕಾಂಬಳೇಕರ ಸ್ವಾಗತಿಸಿದರು. ಎಚ್.ಎಸ್. ಬ್ಯಾಳಿ ನಿರೂಪಿಸಿ, ವಂದಿಸಿದರು.
ಉದ್ಯಮಶೀಲತೆಗೆ ಪ್ರಾಮುಖ್ಯ ನೀಡಿ: ಲಿಂಬಯ್ಯಸ್ವಾಮಿಮಠ
ಗದಗ: ಯುವಶಕ್ತಿ ಸದೃಢ ದೇಶದ ಸಂಪನ್ಮೂಲವಾಗಿದ್ದು, ದುರದೃಷ್ಟವಶಾತ್ ಯುವಪೀಳಿಗೆ ಸರ್ಕಾರಿ ಹುದ್ದೆಗಳ ಮೇಲೆ ಅವಲಂಬಿತರಾಗುತ್ತ ಗುಲಾಮಗಿರಿ ಸಾಂಕೇತದ ದಾಸರಾಗುತ್ತಿದ್ದಾರೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹೇಳಿದರು. ಅವರು ಶುಕ್ರವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಸರ್ಕಾರೇತರ ಖಾಸಗಿ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಡೆದ ಉದ್ಯಮಶೀಲತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ಬೇವಿನಮರದ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಆರ್.ಐ. ಕುಂಬಾರ, ದೇವದಾಸ ಕಾಮತ, ವಿ.ಆರ್. ಮಾಳೆಕೊಪ್ಪಮಠ, ಪ್ರೇಮನಾಥ ಬಣ್ಣದ, ಜಯದೇವ ಮೆಣಸಗಿ ಮುಂತಾದವರು ಉಪಸ್ಥಿತರಿದ್ದರು.
ಕಬಡ್ಡಿ ಆಟಗಾರ ದೇವಪ್ಪ ಲಿಂಗದಾಳಗೆ ಸನ್ಮಾನ
ಗದಗ: ತಾಲೂಕಿನ ಹುಯಿಗೋಳ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಭಜನಾ ಮಂಡಳಿ ಹುಯಿಲಗೋಳ ಇವುಗಳ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಜಾನಪದ ಕಲಾಮೇಳ ಕಾರ್ಯಕ್ರದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರ ದೇವಪ್ಪ ಲಿಂಗದಾಳ ಅವರನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸನ್ಮಾನಿಸಿದರು. ಡಾ. ಅಂದಾನಯ್ಯ ಹಿರೇಮಠ, ಶೋಭಾ ಹುಯಿಲಗೋಳ, ಬಸವರಾಜ ಈರಣ್ಣವರ, ಸಿದ್ಧಪ್ಪ ಲಿಂಗದಾಳ, ಮಲ್ಲಿಕಾರ್ಜುನ ಗುಜ್ಜಾಯಿ, ಗ್ರಾಪಂ ಸದಸ್ಯ ಗೊಖಲೆಪ್ಪ ಬಿಳೆಯಲಿ, ಪಕ್ಕೀರವ್ವ ಕಡಿಯವರ, ಮುಂತಾದವರು ಉಪಸ್ಥಿತರಿದ್ದರು.
ಉದ್ಯಮಶೀಲತೆಗೆ ಪ್ರಾಮುಖ್ಯ ನೀಡಿ: ಲಿಂಬಯ್ಯಸ್ವಾಮಿಮಠ
ಗದಗ: ಯುವಶಕ್ತಿ ಸದೃಢ ದೇಶದ ಸಂಪನ್ಮೂಲವಾಗಿದ್ದು, ದುರದೃಷ್ಟವಶಾತ್ ಯುವಪೀಳಿಗೆ ಸರ್ಕಾರಿ ಹುದ್ದೆಗಳ ಮೇಲೆ ಅವಲಂಬಿತರಾಗುತ್ತ ಗುಲಾಮಗಿರಿ ಸಾಂಕೇತದ ದಾಸರಾಗುತ್ತಿದ್ದಾರೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹೇಳಿದರು. ಅವರು ಶುಕ್ರವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಸರ್ಕಾರೇತರ ಖಾಸಗಿ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಡೆದ ಉದ್ಯಮಶೀಲತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ಬೇವಿನಮರದ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಆರ್.ಐ. ಕುಂಬಾರ, ದೇವದಾಸ ಕಾಮತ, ವಿ.ಆರ್. ಮಾಳೆಕೊಪ್ಪಮಠ, ಪ್ರೇಮನಾಥ ಬಣ್ಣದ, ಜಯದೇವ ಮೆಣಸಗಿ ಮುಂತಾದವರು ಉಪಸ್ಥಿತರಿದ್ದರು.
ಲೆಕ್ಕಪತ್ರ ಬಹಿರಂಗ ಪಡಿಸಲು ಕಸಾಪಕ್ಕೆ ಆಗ್ರಹ
ಗದಗ: ರೋಣದಲ್ಲಿ 6ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷ ಮುಂಡರಗಿಯಲ್ಲಿ ನಡೆಸಿದ 5ನೇ ಜಿಲ್ಲಾ ಸಮ್ಮೇಳನದ ಖರ್ಚು-ವೆಚ್ಚದ ವಿವರಗಳನ್ನು ಈವರೆಗೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಸರ್ಕಾರದಿಂದ ರು. 5ಲಕ್ಷ ಅನುದಾನ, ಸಾರ್ವಜನಿಕರಿಂದ ದೇಣಿಗೆ, ನೌಕರರಿಂದ 1 ದಿನದ ವೇತನ ಹಾಗೂ ವಿವಿಧ ಸಂಘಟನೆಗಳಿಂದ ಪ್ರಾಯೋಜಕತ್ವ ಪಡೆದು ಸಮ್ಮೇಳನ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ಹಿಂದಿನ ಸಮ್ಮೇಳನದ ಲೆಕ್ಕಪತ್ರಗಳನ್ನು ಬಹಿರಂಗಪಡಿಸಬೇಕೆಂದು ಚುಟುಕು ಸಾಹಿತಿ ಡಿ.ವಿ. ಬಡಿಗೇರ ಆಗ್ರಹಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ತಿಳಿಸಿದರೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಲೆಕ್ಕಪತ್ರ ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ: ಹನುಮಸಾಗರ
ನರೇಗಲ್ಲ: ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಬಡ್ಡಿ ತಂಡದ ನಾಯಕ ಸಂತೋಷ ಹನುಮಸಾಗರ ಹೇಳಿದರು. ಅವರು ಗುರುವಾರ ಸ್ಥಳೀಯ ಓಂ ಶಿಕ್ಷಣ ಸಂಸ್ಥೆಯಲ್ಲಿ ನಡೆದ ನೇತಾಜಿ ಸುಭಾಸ್ ಚಂದ್ರ ಭೋಸರ 118ನೇ ಜಯಂತಿ ಹಾಗೂ 2013-14ನೇ ಸಾಲಿನ ಶಾಲಾ ವಾರ್ಷಿಕ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂತೋಷ ಹನುಮಸಾಗರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿ.ವಿ. ನಿಟಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬ್ಬಾಸ್ ರಾಹುತ್, ಶಿಕ್ಷಕಿ ಆರ್.ಬಿ. ಕೀರ್ತಿಗೌಡ್ರ, ಎನ್.ಆರ್. ಬಡಿಗಣ್ಣವರ, ಬಿ.ಎಂ. ಕುಲಕರ್ಣಿ, ವೈ.ಎಚ್. ಹೊಂದಗನ್, ಆನಂದ ಕೊಟಗಿ ಮುಂತಾದವರು ಉಪಸ್ಥಿತರಿದ್ದರು. ಐ.ಬಿ. ಶಿಳ್ಳಿನ ಸ್ವಾಗತಿಸಿದರು. ಜಿ.ಜಿ. ಪಾರ್ವತಿಮಠ ನಿರೂಪಿಸಿದರು. ಜೆ.ವಿ. ಕೆರಿಯವರ ವಂದಿಸಿದರು.
ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲು ಮನವಿ
ಗದಗ: ಪ್ರತಿಯೊಬ್ಬರೂ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹೇಳಿದರು. ಅವರು ಶನಿವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಐ.ಎಂ.ಎ. ಬ್ಲಡ್ ಬ್ಯಾಂಕ್ ಗದಗ ಇದರ 11ನೇ ವಾರ್ಷಿಕೋತ್ಸವದ ನಿಮಿತ್ತ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಲೈಯನ್ಸ್ಕ್ಲಬ್ ಹಾಗೂ ಐ.ಎಂ.ಎ. ಬ್ಲಡ್ ಬ್ಯಾಂಕ್ ಗದಗ ಇವುಗಳ ಆಶ್ರಯದಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಸಮಸ್ತ ಸಂಸ್ಥೆಯ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇನ್ನು ರಕ್ತದಾನ ಮಾಡುವಂತಹ ಆಸಕ್ತರು ಒಂದು ದಿನ ಮುಂಚಿತವಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಹೆಸರನ್ನು ನೋಂದಾಯಿಸಬೇಕು ಎಂದರು. ಸಂಸ್ಥೆಯ ಇಂಡಸ್ಟ್ರೀಯಲ್ ಉಪ ಸಮಿತಿ ಚೇರ್ಮನ್ ಶಿವಕುಮಾರ ಪಾಟೀಲ ಹಾಗೂ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಮುಂತಾದವರು ಉಪಸ್ಥಿತರಿದ್ದರು.
ಬಸ್ ಶೆಲ್ಟರ್ ನಿರ್ಮಿಸಲು ಒತ್ತಾಯ
ಗದಗ: ನಗರದ ಮುಳಗುಂದ ನಾಕಾ ವೃತ್ತದ ಮೂಲಕ ಮುಳಗುಂದ ಕಡೆಗೆ ಹೋಗುವ ಹಾಗೂ ಬರುವ ಬಸ್ ಹಾಗೂ ಇತರೆ ವಾಹನಗಳನ್ನು ಮೋರ ಶಾಪಿಂಗ್ ಸೆಂಟರ್ ಹತ್ತಿರ ನಿಲುಗಡೆ ಮಾಡುತ್ತಾರೆ. ಇನ್ನು ರಸ್ತೆಯ ಬದಿಯಲ್ಲಿ ಹೂವು ಹಣ್ಣು ಹಾಗೂ ಅನೇಕ ಡಬ್ಬಿ ಅಂಗಡಿಗಳು ಇರುವುದರಿಂದ ವಾಹನಗಲ್ಲಿ ಹತ್ತುವ ಪ್ರಯಾಣಿಕರು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದಾರೆ. ಮತ್ತು ವಾಹನಗಳ ದಟ್ಟಣೆ ಹೆಚ್ಚಾಗಿ ಇರುವುದರಿಂದ ಪಕ್ಕದಲ್ಲಿ ಹೋಗುವ ಬಸ್ಗಳಿಗೆ ತೊಂದರೆಯಾಗುತ್ತದೆ. ಅಪಘಾತಗಳು ಘಟಿಸುವ ಸಂಭವ ಇರುವುದರಿಂದ ಮುಳಗುಂದ ನಾಕಾ ಹುಡ್ಕೋ 1ನೇ ಕ್ರಾಸ್ ಹತ್ತಿರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿ, ಅಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಬಸ್ ಶೆಲ್ಟರ್ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಮತ್ತು ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಐತಿಹಾಸಿಕ ನಾಟಕಗಳಿಂದ ಬದುಕು ಬದಲಾವಣೆ
ಮುಂಡರಗಿ: ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಿಗೆ ಸಾಮಾಜಿಕ ಬದಲಾವಣೆಯ ಜತೆ, ವ್ಯಕ್ತಿಗಳ ನಡತೆ ಬದಲಾವಣೆ ಮಾಡುವ ಶಕ್ತಿಯಿದೆ ಎಂದು ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಹೇಳಿದರು. ಅವರು ಈಚೆಗೆ ತಾಲೂಕಿನ ಡಂಬಳ ತೋಂಟದಾರ್ಯ ಕಲಾಭವನದಲ್ಲಿ ಸ್ವಾತಂತ್ರ್ಯ ಸೇನಾನಿ, ಶ್ರೀನಿವಾಸ ವೆಂಕಟಾದ್ರಿ ದೇಸಾಯಿ ಕಲಾ ಸಾಂಸ್ಕೃತಿಕ ವೇದಿಕೆ ಹಾಗೂ ವಿವಿಧ ಸಂಘಟನೆಗಳ, ಜನಪ್ರತಿನಿಧಿಗಳ ನೇತೃತ್ವದಲ್ಲಿ ಜ. 30, 31 ಹಾಗೂ ಫೆ. 1 ಮೂರು ದಿನಗಳ ಕಾಲ ಜರುಗುವ ಶಿವಸಂಚಾರ ನಾಟಕೋತ್ಸವದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಿಪಂ ಸದಸ್ಯ ಬಿ.ಎಸ್. ಬಂಡಿ, ಡಿ. ಪ್ರಸಾದ, ಜಿ.ಎಸ್. ಕೊರ್ಲಹಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಯರಾಸಿ, ತಾಪಂ ಸದಸ್ಯ ಎನ್.ಟಿ. ಪ್ಯಾಟಿ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಪ್ರಸಾದ, ಸಿದ್ದಣ್ಣ ನಂಜಪ್ಪನವರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

