ಗದಗ

ನೀರು ಪೂರೈಕೆಗೆ ರೇಲ್ವೆ ಹಳಿ ಅಡ್ಡಿ

Published On :

ಕನ್ನಡಪ್ರಭ ವಾರ್ತೆ, ರೋಣ, ಜ. 26
ತಾಲೂಕಿನ ಹೊಳೆಆಲೂರ ಗ್ರಾಪಂ ವ್ಯಾಪ್ತಿಯ ಹೊಳೆಆಲೂರ, ಗಾಡಗೋಳಿ ಮತ್ತು ಹೊಳೆಮಣ್ಣೂರ ಗ್ರಾಮಗಳಿಗೆ ಶುದ್ಧ ಮತ್ತು ಶಾಶ್ವತ ಕುಡಿಯುವ ನೀರು ಪೂರೈಸಲು ಬಹುಗ್ರಾಮ ನೀರಿನ ಯೋಜನೆಯಲ್ಲಿ ಸೋಮನಕಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಬೃಹತ್ ಕೆರೆ ನೀರು ಪೂರೈಕೆಗೆ ಕಳೆದ ಒಂದುವರೆ ವರ್ಷದಿಂದ ರೈಲು ಹಳಿ ಅಡ್ಡಾಗಾಲಾಗಿದೆ.  
ಹೌದು, ನರಗುಂದ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಈ ಗ್ರಾಮಗಳಿಗೆ ಕುಡಿಯುವ ನೀರಿನ ಬವಣೆ ನಿವಾರಿಸಲು, ಈ ಭಾಗದ ಜನರೊಂದಿಗೆ ಅಂದಿನ ಶಾಸಕರಾಗಿದ್ದ ಸಿ.ಸಿ. ಪಾಟೀಲರು ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 2010-11ನೇ ಸಾಲಿನಲ್ಲಿ ರಾಜೀವಗಾಂಧಿ ಸಬ್‌ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ ಸಹಯೋಗದಲ್ಲಿ ತಾಲೂಕಿನ ಸೋಮನಕಟ್ಟಿ ಒಳ ರಸ್ತೆಯಲ್ಲಿ 22 ಎಕರೆ ಪ್ರದೇಶದಲ್ಲಿ ರು. 472.5 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಬೃಹತ್ ಕೆರೆ ನಿರ್ಮಿಸಲಾಯಿತು.
2030 ಇಸ್ವಿಯ ವೇಳೆಗೆ ಈ ಮೂರು ಗ್ರಾಮಗಳ ಒಟ್ಟು ಜನಸಂಖ್ಯೆಯು 18708 ಆಗಬಹುದೆಂದು ಅಂದಾಜಿಸಿ, ಈ ಕೆರೆಯನ್ನು ನಿರ್ಮಿಸಲಾಗಿದೆ.  22 ಎಕರೆಯಲ್ಲಿ 16 ಎಕರೆ 27 ಗುಂಟೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಿಸಲಾಗಿದೆ. ಇನ್ನುಳಿದ ಪ್ರದೇಶದಲ್ಲಿ ಪಂಪ್ ಹೌಸ್, ಕ್ಲೋರಿನೇಷನ್ ಘಟಕ, ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಕೆರೆಯಿಂದ ನೀರು ಪಡೆಯುವಲ್ಲಿ ಜನತೆ ವಂಚಿತರಾಗಿದ್ದಾರೆ. ಈ ಯೋಜನೆ ಈಗ ಜಿಪಂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜನತೆಗೆ ಇಲ್ಲಿನ ನೀರು ಕುಡಿಯುವ ಕನಸು ನನಸಾಗುತ್ತಿಲ್ಲ.
ಸದಾನಂದಗೌಡ ಉದ್ಘಾಟನೆ: ಈ ಬೃಹತ್ ಕೆರೆಯ ನೀರು ಪೂರೈಕೆಗೆ 2012 ಏಪ್ರಿಲ್ 18 ರಂದು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಉದ್ಘಾಟನೆ ನೆರವೇರಿಸಿದರು. ಈವರೆಗೂ ಮಳೆಯ ಕೊರತೆಯಿಂದ ಮಲಪ್ರಭೆ ಕಾಲುವೆ ಮೂಲಕ ನೀರು ತುಂಬಿಸಲಾಗಿದೆ. ಸದ್ಯ ಕೆರೆಯಲ್ಲಿ ನೀರಿದೆ. ಆದರೆ, ಈ ಮೂರು ಗ್ರಾಮಗಳಿಗೆ ನೀರು ಪೂರೈಕೆಯಲ್ಲಿ ರೈಲು ಹಳಿ ಅಡ್ಡಿಯಾಗಿದ್ದು, ಇದರಿಂದ ಈವರೆಗೂ ಈ ಕೆರೆಯ ನೀರು ಕುಡಿಯುವ ಭಾಗ್ಯ ಜನತೆಗೆ ದೊರೆತಿಲ್ಲ.
ಅಡ್ಡಗಾಲು ಹಾಕಿದ ರೈಲು ಹಳಿ: ಹೊಳೆಆಲೂರ ಗ್ರಾಮದಿಂದ 2.5 ಕಿ.ಮೀ. ದೂರದಲ್ಲಿ ಸೋಮನಕಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಕೆರೆಯಿಂದ ನೀರು ಪೂರೈಕೆ ಮಾಡಲು ಹೊಳೆಆಲೂರ ರೇಲ್ವೆ ಸ್ಟೇಶನ್ ಹತ್ತಿರದ ಮೆಣಸಗಿ ಬೈ ಪಾಸ್ ಬಳಿ ರೇಲ್ವೆ ಹಳಿ ದಾಟಿ ನೀರು ಸರಬರಾಜು ಮಾಡಲು ಈ ರೈಲು ಹಳಿ ದಾಟಿಗೊಂಡು ನೀರು ತರಬೇಕಾದರೆ ಸುಮಾರು 200 ಎಂ.ಎಂ ವ್ಯಾಸದ ನೀರಿನ ಪೈಪ್‌ಲೈನ್ ಅಳವಡಿಸಬೇಕು. ಇದಕ್ಕೆ ರೇಲ್ವೆ ಇಲಾಖೆಯ ಅನುಮತಿ ಅವಶ್ಯವಿತ್ತು.  
ರೇಲ್ವೆ ಇಲಾಖೆ ಅನುಮತಿಗಾಗಿ 2011 ಜುಲೈ 16ರಂದು ಹುಬ್ಬಳ್ಳಿ ರೇಲ್ವೆ ಇಲಾಖೆಗೆ ಪತ್ರ ಬರೆದು ವಿನಂತಿಸಲಾಗಿತ್ತು. ಅದಕ್ಕೆ ಸ್ಪಂದಿಸದಿದ್ದ ಕಾರಣದಿಂದ ಮತ್ತೆ 2013 ಮೇ 3 ರಂದು ಮತ್ತೊಂದು ಪತ್ರ ಬರೆಯಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೇಲ್ವೆ ಇಲಾಖೆ 2013 ಸೆಪ್ಟೆಂಬರ್ 18 ರಂದು ಜಿಪಂಗೆ ಪತ್ರ ಬರೆದು, ರು. 78,641 ಹಣ ಕಟ್ಟಿ ಕ್ರಾಸಿಂಗ್ ಮಾಡುವಂತೆ ತಿಳಿಸಿತ್ತಂತೆ. ಅದರಂತೆ ಸ್ಥಳೀಯ ಗ್ರಾಪಂ 2013 ಅಕ್ಟೋಬರ್ 5 ರಂದು ಡಿ.ಡಿ. ಮುಖಾಂತರ ರೇಲ್ವೆ ಇಲಾಖೆಯ ವಿಭಾಗೀಯ ಫೈನಾನ್ಸ್‌ಗೆ ಹಣ ಪಾವತಿಸಲಾಗಿದ್ದರೂ ಅನುಮತಿ ನೀಡಿಲ್ಲ.
ಜನತೆಯ ಬಹುದಿನದ ಬೇಡಿಕೆ ಹಾಗೂ ಭಾರಿ ವೆಚ್ಚದಲ್ಲಿ ನಿರ್ಮಿಸಲಾದ ಕಾಮಗಾರಿ ಪೂರ್ಣಗೊಂಡಿದ್ದರೂ, ರೈಲು ಇಲಾಖೆಯ ಅನುಮತಿ, ಸಂಬಂಧಪಟ್ಟ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವಿಳಂಬವಾಗಿದೆ. ಅದೇನೇ ತಾಂತ್ರಿಕ ತೊಂದರೆಯಿದ್ದರೂ ಅಧಿಕಾರಿ ವರ್ಗ ಅದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನೂಕೂಲ ಕಲ್ಪಿಸುವಲ್ಲಿ ಮುಂದಾಗಬೇಕಿದೆ. ವಿಳಂಬವಾದಲ್ಲಿ ಹೊಳೆಆಲೂರ, ಗಾಡಗೋಳಿ ಮತ್ತು ಹೊಳೆಮಣ್ಣೂರ ಗ್ರಾಮಸ್ಥರೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು
 ಶಿವಣ್ಣ ಕಲ್ಯಾಣಿ, ಬಿಜೆಪಿ ಹಿರಿಯ ಮುಖಂಡ
 ಮೋತಿಲಾಲ ರಾವಳ, ತಾಲೂಕು ಹೋರಾಟ ಸಮಿತಿ ಸದಸ್ಯ
ರೇಲ್ವೆ ಹಳಿ ಕ್ರಾಸ್ ಮಾಡಿ ಪೈಪ್‌ಲೈನ್ ಅಳವಡಿಸಲು ಹುಬ್ಬಳ್ಳಿ ರೇಲ್ವೆ ವಿಭಾಗಕ್ಕೆ ಮೊದಲು ರು. 78,641 ಪಾವತಿಸಲಾಗಿತ್ತು. ಬಳಿಕ ಮತ್ತೆ ರು. 4.80 ಲಕ್ಷ ಪಾವತಿಸಲಾಗಿದೆ. ಬಳಿಕ 200 ಎಂಎಂ ವ್ಯಾಸದ ಪೈಪ್‌ಲೈನ್ ಅಳವಡಿಸಲು ರೇಲ್ವೆ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಇದಕ್ಕಾಗಿ ರು. 27 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಲು ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, 15 ದಿನಗಳೊಳಗಾಗಿ ಟೆಂಡರ್ ಕರೆದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
 ಕೆ.ಎಲ್. ಕಟ್ಟಿಮನಿ
ಎಇಇ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ ರೋಣ



-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.