ಲಕ್ಷ್ಮೇಶ್ವರ: ಉಲ್ಟಾ ಹಾರಿದ ರಾಷ್ಟ್ರಧ್ವಜ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 26
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಪುರಸಭೆಯ ಆವರಣದ ಮುಂದೆ ಭಾನುವಾರ ಬೆಳಗ್ಗೆ ಜರುಗಿದ 65ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜ ಉಲ್ಟಾ ಹಾರಿಸಿದ ಘಟನೆ ಜರುಗಿತು.
ಸಾರ್ವಜನಿಕರು, ಎನ್ಸಿಸಿ, ಪೊಲೀಸ್, ಸ್ಕೌಟ್ಸ್ ಗೈಡ್ಸ್ ನೂರಾರು ವಿದ್ಯಾರ್ಥಿಗಳು, ಪುರಸಭೆ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಉಮಾ ವಿದ್ಯಾಲಯದ ಸರ್ವಶಿಕ್ಷಕರ ಸಮ್ಮುಖದಲ್ಲಿಯೇ ಧ್ವಜ ಉಲ್ಟಾ ಹಾರುತ್ತಿದ್ದಂತೆ, ಎಚ್ಚೆತ್ತುಕೊಂಡು ಮತ್ತೆ ಕೆಳಗಿಳಿಸಿ 2ನೇ ಬಾರಿ ಧ್ವಜಾರೋಹಣ ನೆರವೇರಿಸಲಾಯಿತು.
ಅದೇ ರೀತಿ ಪುರಸಭೆ ಆಡಳಿತದಲ್ಲಿರುವ ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿಯೂ ರಾಷ್ಟ್ರಧ್ವಜ ಉಲ್ಟಾ ಹಾರಿಸಿ, ಅದಕ್ಕೆ ವಂದನೆ ಸಲ್ಲಿಸಿ ಮತ್ತೆ ತಪ್ಪಿನ ಅರಿವಾದಾಗ ಶಿಕ್ಷಕರು ತಕ್ಷಣ ಧ್ವಜವನ್ನು ಕೆಳಗಿಳಿಸಿ ಇಲ್ಲಿಯೂ 2ನೇ ಬಾರಿ ಧ್ವಜಾರೋಹಣ ಮಾಡಿದರು. ಪಟ್ಟಣದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಮಾಧ್ಯಮದವರನ್ನು ಸಂಪರ್ಕಿಸಿದ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.
ಶಿರಹಟ್ಟಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಗೋಡಿ ಪ್ರತಿಕ್ರಿಯಿಸಿ, ಧ್ವಜ ಉಲ್ಟಾ ಹಾರಿಸಿದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಯುವ ಮುಖಂಡ ಶಂಕರ ಬಾಳಿಕಾಯಿ ರಾಷ್ಟ್ರಧ್ವಜ ಅವಮಾನಕ್ಕೆ ಕಾರಣರಾದರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಅಪಮಾನ: ಅಮಾನತಿಗೆ ಆಗ್ರಹ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ, ಪುರಸಭೆ ಆಡಳಿತ ಮಂಡಳಿಯ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗೆ ಮಾಡಿ ಹಾರಿಸಿ, ಧ್ವಜಕ್ಕೆ ಅಪಮಾನ ಮಾಡಿದ ಸಂಬಂಧಿಸಿದ ಅಧಿಕಾರಿ, ಮುಖ್ಯಾಧ್ಯಾಪಕಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಶಿರಹಟ್ಟಿ ತಾಲೂಕು ಕರವೇ ಕಾರ್ಯಕರ್ತರು ಭಾನುವಾರ ಮಧ್ಯಾಹ್ನ ಪುರಸಭೆ ಎದುರು ಪ್ರತಿಭಟನೆ ಮಾಡಿದ ಘಟನೆ ಜರುಗಿತು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಶರಣು ಗೋಡಿ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿ ರಾಷ್ಟ್ರಧ್ವಜ ಹಾರಿಸುವಾಗ ಕರ್ತವ್ಯಲೋಪ ಎಸಗಿದ್ದಾರೆ. ಮುಖ್ಯಾಧಿಕಾರಿ ಹಾಗೂ ಪುರಸಭೆ ಪ್ರೌಢಶಾಲಾ ಮುಖ್ಯಾಧ್ಯಾಪಕಿ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಯವರು ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ, ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಆರ್.ಬಿ. ನಿಂಗನಗೌಡರ ಹಾಗೂ ಸಿಪಿಐ ಶ್ರೀನಿವಾಸ ಮೇಟಿ ಕರವೇ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸದರಿ ಘಟನೆಯ ವರದಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕಾಗಿ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.
ಉಲ್ಟಾ ಹಾರಿದ ರಾಷ್ಟ್ರಧ್ವಜ: ಖಂಡನೆ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಆಡಳಿತ ಮಂಡಳಿಯವರು ಹಾಗೂ ಪುರಸಭೆಯ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗು ಮಾಡಿ ಹಾರಿಸಿದ ಘಟನೆ ಖಂಡನೀಯವಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ಹಿರಿಯ ಮುಖಂಡ ಚೆಂಬಣ್ಣ ಬಾಳಿಕಾಯಿ ಆಗ್ರಹಿಸಿದ್ದಾರೆ.
ಪಟ್ಟಣದ ಬಿಜೆಪಿಯ ಕಾರ್ಯಲಯದಲ್ಲಿ ಭಾನುವಾರ ಸಭೆ ನಡೆಸಿದ ಅವರು ಪುರಸಭೆಯ ಮುಖ್ಯಾಧಿಕಾರಿಗಳು ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ಜವಾಬ್ದಾರಿಯಿಂದ ವರ್ತಿಸದೇ ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರ ಮೇಲೆ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿ ಅವರನ್ನು ಸೇವೆಯಿಂದ ಅಮಾನತು ಮಡಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

