ಗದಗ

ಸಿಬ್ಬಂದಿ ಇಲ್ಲದೇ ಉಪಆರೋಗ್ಯ ಕೇಂದ್ರಗಳಿಗೆ ಬೀಗ

Published On :

ಮುಂಡರಗಿ: ಒಂದೆಡೆ ವೈದ್ಯರಿದ್ದರೆ ಕಟ್ಟಡಗಳಿರುವುದಿಲ್ಲ, ಇನ್ನೊಂದೆಡೆ ಕಟ್ಟಡಗಳಿದ್ದು ವೈದ್ಯರಿರುವುದಿಲ್ಲ. ಇದೀಗ ತಾಲೂಕಿನ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಶಿಂಗಟಾಲೂರ, ಬೀಡನಾಳ, ಕೊರ್ಲಹಳ್ಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಿದ ಉಪಕೇಂದ್ರಗಳ ಕಟ್ಟಡವಿದ್ದರೂ ಇಲ್ಲಿ ಕಾರ್ಯನಿರ್ವಹಿಸಲು ಕಿರಿಯ ಮಹಿಳಾ ಸಹಾಯಕಿಯರಿಲ್ಲ, ಹೀಗಾಗಿ ಇಲ್ಲಿಗೆ ಬರುವ ಜನತೆ ನಿತ್ಯ ಪರದಾಡುವಂತಾಗಿದೆ.
ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹಮ್ಮಿಗಿ, ಶಿಂಗಟಾಲೂರು, ಕೊರ್ಲಹಳ್ಳಿ, ಬೀಡನಾಳ ಸೇರಿದಂತೆ ನಾಲ್ಕು ಉಪಕೇಂದ್ರಗಳು ಒಳಪಡುತ್ತಿದ್ದು, ಇದೀಗ ಹಮ್ಮಿಗಿ ಉಪಕೇಂದ್ರವನ್ನು ಹೊರತುಪಡಿಸಿದರೆ ಉಳಿದ ಮೂರು ಉಪಕೇಂದ್ರಗಳಲ್ಲಿ ಸಿಬ್ಬಂದಿ ಇಲ್ಲದೇ ಉಪಕೇಂದ್ರಗಳು ನಿತ್ಯ ಬೀಗಹಾಕಿರುವುದು ಕಂಡು ಬರುತ್ತಿದೆ.
ಸಿಬ್ಬಂದಿ ಕೊರತೆ: ಈ ಹಿಂದೆ ಬೀಡನಾಳ ಉಪಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಿಧನವಾದ ನಂತರ ಮತ್ತೆ ಆ ಹುದ್ದೆಗೆ ಯಾರೂ ಬಂದಿಲ್ಲ, ಅದರಂತೆ ಶಿಂಗಟಾಲೂರ ಉಪಕೇಂದ್ರದಲ್ಲಿ ಕಳೆದ ಅನೇಕ ವರ್ಷಗಳಿಂದ ಸಿಬ್ಬಂದಿ ಇಲ್ಲದೇ ಕಟ್ಟಡ ಹಾಗೇ ಇದೆ. ಕೊರ್ಲಹಳ್ಳಿ ಗ್ರಾಮದಲ್ಲಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ವರ್ಗಾವಣೆಯಿಂದ ಖಾಲಿಯಾಗಿದ್ದು, ಇದುವರೆಗೂ ಯಾರೂ ಬಂದಿಲ್ಲ. ಉಪಕೇಂದ್ರದ ಮುಂದೆ ದನ-ಕರುಗಳನ್ನು ಕಟ್ಟಿ ದನದಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ಸಿಬ್ಬಂದಿ ಕೊರತೆ ಸಹ ಇದ್ದು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಜನತೆಯ ಪರದಾಟ: ಶಿಂಗಟಾಲೂರು ಉಪಕೇಂದ್ರದ ವ್ಯಾಪ್ತಿಗೆ ಬರುವ ಶೀರನಹಳ್ಳಿ, ಗಂಗಾಪುರ, ಬೀಡನಾಳ ಉಪಕೇಂದ್ರದ ವ್ಯಾಪ್ತಿಗೆ ಬರುವ ಬೀಡನಾಳ ಹಾಗೂ ಬೀಡನಾಳ ತಾಂಡಾ, ಕೊರ್ಲಹಳ್ಳಿ ಉಪಕೇಂದ್ರಕ್ಕೆ ಬರುವ ಕೊರ್ಲಹಳ್ಳಿ ಹಾಗೂ ಕೊರ್ಲಹಳ್ಳಿ ಪ್ಲಾಟ್ ಸೇರಿದಂತೆ ಎಲ್ಲ ಕಡೆಗೂ ಗರ್ಭಿಣಿಯರು, ಮಹಿಳೆಯರು, ಮಕ್ಕಳು, ವೃದ್ಧರು ನಿತ್ಯದ ಸಣ್ಣ ಪುಟ್ಟ ಕಾಯಿಲೆಗಳಿಗೆ ಮುಂಡರಗಿ ತಾಲೂಕು ಆಸ್ಪತ್ರೆ ಅಥವಾ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾಗಿದೆ. ಆದ್ದರಿಂದ ಈ ಕೂಡಲೇ ಎಲ್ಲ ಉಪಕೇಂದ್ರಗಳಿಗೂ ಸಿಬ್ಬಂದಿ ನೇಮಕವಾಗುವಂತೆ ಕ್ರಮ ಜರುಗಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.