ರೈತರ ವಿವಿಧ ಬೇಡಿಕೆ ಈಡೇರಿಸಿ: ಧರಣಿ
ಕನ್ನಡಪ್ರಭ ವಾರ್ತೆ, ಗದಗ, ಜ. 30
ಸ್ವಾಮಿನಾಥನ್ ಆಯೋಗ ವರದಿ ಜಾರಿ, ಕಡಲೆಗೆ ಬೆಂಬಲ ಬೆಲೆ, ಕೇಂದ್ರ ಸರ್ಕಾರದ ಗೊಬ್ಬರದ ಅವೈಜ್ಞಾನಿಕ ಬೆಂಬಲ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ರಾಜ್ಯ ಬಿಜೆಪಿ ರೈತ ಮೋರ್ಚಾದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ಜಿಲ್ಲೆಯಲ್ಲಿನ ರೈತರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದಾರೆ. ಆದರೆ, ಸರ್ಕಾರ ಜಿಲ್ಲೆಯ ರೈತರ ಸಮಸ್ಯೆಗೆ ಬೇಕಾದ ಸೂಕ್ತ ಸೌಕರ್ಯ ಒದಗಿಸಿದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. 2-3 ವರ್ಷಗಳಿಂದ ಜಿಲ್ಲೆಯಲ್ಲಿ ಆವರಿಸಿದ ತೀವ್ರ ಬರಗಾಲದಿಂದಾಗಿ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು, ಈ ಮಳೆ ನಂಬಿಕೊಂಡು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬೆಳೆದಿದ್ದಾರೆ.
ಆದರೆ, ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕುಸಿದಿದೆ. ಎಕರೆಗೆ ರು. 30ರಿಂದ 50 ಸಾವಿರ ವರೆಗೆ ಖರ್ಚು ಮಾಡಿ ಬೆಳೆದ ಕಡಲೆಯನ್ನು ಕೇವಲ ಕ್ಟಿಂಟಲ್ಗೆ ರು. 2-3 ಸಾವಿರಗೆ ಮತ್ತು ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಕೊಡುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕಡಲೆಗೆ ರು. 6 ಸಾವಿರ ಬೆಂಬಲ ಬೆಲೆ ಘೋಷಿಸಿ ತಕ್ಷಣ ಖರೀದಿ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ವಾಮಿನಾಥನ್ ಆಯೋಗದ ವರದಿ(ರೈತರ ಆದಾಯಕ್ಕೆ ಶೇ. 50ರಷ್ಟು ಸೇರಿಸಿ ಬೆಂಬಲ ಬೆಲೆ ನೀಡಬೇಕು) ಯಥಾವತ್ತಾಗಿ ಜಾರಿಗೊಳಿಸಬೇಕು. ಕೇಂದ್ರ ರಾಸಾಯನಿಕ ಗೊಬ್ಬರದ ಅವೈಜ್ಞಾನಿಕ ಸಬ್ಸಿಡಿ ಕೈಬಿಡಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಸರ್ಕಾರದ ಬಸ್ಸುಗಳಲ್ಲಿ ಶೇ. 5ರಷ್ಟು ಎಥನಾಲ್ ಬಳಸಲು ಕೇಂದ್ರದ ಒಪ್ಪಿಗೆ ಪಡೆಯಬೇಕು. ರಾಜ್ಯ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಕನಿಷ್ಠ 12 ಗಂಟೆ, 3 ಫೇಸ್ ವಿದ್ಯುತ್ ಪೂರೈಸಬೇಕು. ರಾಜ್ಯ ಸರ್ಕಾರ ಸೊಸೈಟಿಗಾಗಿ ಸಾಲ ಮನ್ನಾ ಮಾಡಿದ ಬಾಕಿ ತುಂಬಿ ಹೊಸ ಸಾಲ ವಿತರಿಸಲು ತಕ್ಷಣ ಆದೇಶ ನೀಡಬೇಕು. ಈ ಎಲ್ಲ ಸಮಸ್ಯೆಗಳು ಒಂದು ವಾರದಲ್ಲಿ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದ ರೈತ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಮೋರ್ಚಾದ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ, ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಅಶೋಕ ನವಲಗುಂದ, ಕಾಂತಿಲಾಲ ಬನ್ಸಾಲಿ, ಎಂ.ಎಂ. ಹಿರೇಮಠ, ಎಂ.ಎಂ. ಚಿಂಚಲಿ, ಸಿ.ಎಂ. ಪಟ್ಟಣಶೆಟ್ಟಿ, ಎಸ್.ಎಂ. ಬಳ್ಳೊಳ್ಳಿ, ನಿಂಗಪ್ಪ ಮಣ್ಣೂರ, ಗುರುಶಾಂತಗೌಡ ಮರಿಗೌಡ್ರ, ಅಶೋಕ ಪವಾಡಶೆಟ್ಟರ್, ಶಿವಾನಂದ ಜಿಡ್ಡಿಬಾಗಿಲ, ಸಂಗನಗೌಡ ಪೊಲೀಸ್ಪಾಟೀಲ, ಕಳಕಪ್ಪ ಸಂಗೋಜಿ, ದಿವಾಕರ ಮುಂತಾದವರು ಧರಣಿಯಲ್ಲಿದ್ದರು.
--
ಪುರಂದರ ದಾಸರ ಆರಾಧನೆ ಮಹೋತ್ಸವ, ಮೆರವಣಿಗೆ
ಗಜೇಂದ್ರಗಡ: ಸ್ಥಳೀಯ ಶ್ರೀ ಗುರುಜಗನ್ನಾಥ ದಾಸರ ಭಜನಾ ಮಂಡಳಿ ವತಿಯಿಂದ ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ಅಂಗವಾಗಿ ಪುಷ್ಪಾಲಂಕೃತ ಪುರಂದರ ದಾಸರ ಭಾವಚಿತ್ರದ ಮೆರವಣಿಗೆಯನ್ನು ಭಕ್ತರು ಗುರುವಾರ ನಡೆಸಿದರು.
ರಾಮದೇವರ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಕನಕದಾಸ ಮತ್ತು ಜಗದಂಬಾದೇವಿ ಭಜನಾ ಮಂಡಳಿ ಭಕ್ತರು ಭಜನೆ, ಕೋಲಾಟ, ವಿವಿಧ ಸಂಗೀತ ವಾದ್ಯ ವೈಭವದಿಂದ ಕುಣಿಯುತ್ತಾ ಸಂಭ್ರಮಿಸಿದರು.
ಮೆರವಣಿಗೆ ಸಂಚರಿಸುವಾಗ ನಿವಾಸಿಗಳು ಮನೆಗಳ ಮೇಲಿಂದ ಪುಷ್ಪಗಳ ಸಿಂಚನ ಮೂಲಕ ಗೌರವ ನಮನ ಸಲ್ಲಿಸಿದರು. ಸಾಮೂಹಿಕ ಅನ್ನ ಪ್ರಸಾದ ವಿತರಿಸಲಾಯಿತು. ಗಾಯಿತ್ರಿ ಮಂಡಳದ ರಾಜೇಶ್ವರಿಬಾಯಿ ರಾಯಬಾಗಿ ಮಾತೆಯರು ಉಡಿ ತುಂಬುವ ಕಾರ್ಯಕ್ರಮ ನಡೆಸಿದರು. ಭೀಷ್ಮಾಸಾ ಬಾಕಳೆ, ಕಾಂತು ಧಲಭಂಜನ, ಲಖನ್ ರಾಯಬಾಗಿ, ರಾಜು ಹೊರಪೇಟಿ, ಈರಣ್ಣಾ ಉರವಕೊಂಡಾ, ಮಹದೇವ ವೆರ್ಣೇಕರ್, ನಾಗಪ್ಪ ಕವಡಿಮಟ್ಟಿ, ದತ್ತುಸಾ ಬಾಕಳೆ, ಗಣೇಶ ಫಲಮಾರಿ, ಲಕ್ಷ್ಮಣ ಬಾಕಳೆ, ನಾಗಪ್ಪ ಕವಡಿಮಟ್ಟಿ, ರಮೇಶ ಯಂಕಂಚಿ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

