ಕರ್ತವ್ಯದಲ್ಲಿರದ ಸಿಬ್ಬಂದಿ ಅಮಾನತು ಮಾಡಿದ ಡಿಸಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜ. 31
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರು ಶುಕ್ರವಾರ ಬೆಳಗ್ಗೆ 11ಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹಾಜರಿ ತೆಗೆದುಕೊಳ್ಳುವಾಗ ಅನುಪಸ್ಥಿತಿ ಇದ್ದ ಸಿಬ್ಬಂದಿ ಜೆ.ಐ. ಜಾಲಿಕಟ್ಟಿ ಅವರನ್ನು ಅಮಾನತು ಮಾಡಿದರು.
ಪಪಂ ವ್ಯಾಪ್ತಿಗೆಂದು ಅಳವಡಿಸಿದ್ದ ನೀರಿನ ಮೋಟರ್ಗಳು ಮೇಲಿಂದ ಮೇಲೆ ಸುಡುತ್ತಿವೆ. ಅದಕ್ಕೆ ಕಾರಣವೇನೆಂಬುದು ತಿಳಿಯುತ್ತಿಲ್ಲ. ಅದನ್ನು ತಾವು ಪರಿಶೀಲಿಸಬೇಕು. ನಿಜವಾದ ಆಪರೇಟರ್ ಅಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಅದರ ಬದಲಾಗಿ ದಿನಗೂಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅದರ ಬಗೆಗೆ ಸರಿಯಾದ ಮಾಹಿತಿ ಇಲ್ಲ. ಇದಕ್ಕೆ ಪರಿಹಾರ ದೊರಕಿಸಿಕೊಡಿ ಎಂದು ಪಪಂ ಸದಸ್ಯ ಶಶಿಧರ ಸಂಕನಗೌಡ್ರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ಸಮಸ್ಯೆಗೆ ಸ್ಪಂದಿಸಿದ ಡಿಸಿ ಸಂಬಂಧಿಸಿದ ಸಿಬ್ಬಂದಿಯನ್ನು ಸ್ಥಳದಲ್ಲಿಯೇ ಕರೆದು ಮೇಲಿಂದ ಮೇಲೆ ಮೋಟರ್ ಸುಡದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಆ ಸ್ಥಳದಲ್ಲಿ ಹೊಸದೊಂದು ಉತ್ತಮ ಕಂಪನಿಯ ಮೋಟರ್ ಅಳವಡಿಸಿ, ಇನ್ನುಮುಂದೆ ಇದೇ ರೀತಿ ಮುಂದುವರಿದಲ್ಲಿ ನಿಮ್ಮ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.
ನಮ್ಮಲ್ಲಿ ಯಾವುದೇ ಯೋಜನೆಯಲ್ಲಿ ಫಲಾನುಭವಿಗಳಾಗದವರು ಹಲವು ಜನರಿದ್ದಾರೆ. ಅವರನ್ನು ಬಿಟ್ಟು ವಾಜಪೇಯಿ ವಸತಿ ಯೋಜನೆಯಡಿ ವಿತರಣೆಯಾದ 40 ಮನೆಗಳ ಪೈಕಿ ಈಗಾಗಲೇ 15 ಫಲಾನುಭವಿಗಳಿಗೆ ಆಶ್ರಯ ಮನೆ ಯೋಜನೆ ಹೀಗೆ ಹಲವಾರು ಯೋಜನೆಗಳಲ್ಲಿ ಸೌಲಭ್ಯ ಪಡೆದಿದ್ದಾರೆ. ಆದರೂ ಅವರಿಗೆ ಮನೆ ಹಂಚಿಕೆ ಮಾಡಿರುವುದು ವಿಪರ್ಯಾಸ. ಈ ಕುರಿತು ಪರಿಶೀಲಿಸಿ ಯೋಗ್ಯ ಫಲಾನುಭವಿಗಳಿಗೆ ವಿತರಿಸುವಂತೆ ಎಂದು ಪಪಂ ಸದಸ್ಯ ವರುಣ ಸಂಗನಾಳ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪಪಂ ಸದಸ್ಯರಿಗೆ ಕ್ಯಾರೆ ಎನ್ನದ ಮುಖ್ಯಾಧಿಕಾರಿ: ಕೆಲವು ಪ್ರಮುಖ ಕಾಮಗಾರಿಗಳ ಬಗೆಗೆ ತಿಳಿದುಕೊಳ್ಳಲು ಮುಖ್ಯಾಧಿಕಾರಿ ಕೆ.ಎಫ್. ಕಟಗಿಯನ್ನು ಮಾಹಿತಿ ಕೇಳಿದರೆ ಪಪಂ ಸದಸ್ಯರಾದ ನಮಗೆ ಲಿಖಿತ ಪತ್ರ ನೀಡಿ ಆಮೇಲೆ ವಿಚಾರ ಮಾಡಿ ಹೇಳುವ ಎಂದು ಮುಖ್ಯಾಧಿಕಾರಿ ಹಾರಿಕೆ ಉತ್ತರ ನೀಡುತ್ತಾರೆ ಎಂದು ಕೆಲವು ಸದಸ್ಯರು ದೂರಿದರೆ, ಇನ್ನು ಕೆಲವರು 4-6 ತಿಂಗಳಿಂದ ಮಾಹಿತಿ ಕೇಳುತ್ತಿದ್ದರೂ ಹಿಂದಿನ ಮುಖ್ಯಾಧಿಕಾರಿಯೂ ನೀಡಲಿಲ್ಲ. ಸದ್ಯದ ಮುಖ್ಯಾಧಿಕಾರಿಯೂ ನೀಡುತ್ತಿಲ್ಲ. ಕೇಳಿದರೆ ನೋಡೋಣ, ಮಾಡೋಣ ಎನ್ನುತ್ತಾರೆ ಎಂದು ಆರೋಪಿಸಿದರು.
ಆದಾಯ ತೆರಿಗೆ, ನೀರಿನ ಕರ ವಸೂಲಿ ಮಾಡಿ: ಸ್ಥಳೀಕವಾಗಿ ಬರಬೇಕಾದ ಆದಾಯ ಹಾಗೂ ನೀರಿನ ಕರವನ್ನು ಮೊದಲು ವಸೂಲಿ ಮಾಡಿ, ಅನಧಿಕೃತವಾಗಿ ತಲೆಯತ್ತಿ ನಿಂತಿರುವ ನಲ್ಲಿಗಳನ್ನು ಸ್ಥಗಿತಗೊಳಿಸಿ ಇಲ್ಲವಾದರೆ ಅವುಗಳನ್ನು ಅಧಿಕೃತವಾಗಿ ಮಾಡಿ, ಪಪಂ ಆವರಣದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿರುವ ಮಣ್ಣಿನ ಗುಂಪನ್ನು ಕಲ್ಲುಗಳನ್ನು ಮೊದಲು ತೆಗೆದುಹಾಕಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದರು. ಪಕ್ಕದಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿದ ಡಿಸಿ ಅಲ್ಲಿ ಅವ್ಯವಸ್ಥೆ ಪರಿಶೀಲಿಸಿದರು.
ಪಪಂ ಹಿಂಭಾಗದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುವ ಉದ್ಯಾನಕ್ಕೆ ಭೇಟಿ ನೀಡಿದ ಡಿಸಿ ಅಲ್ಲಿರುವ ವ್ಯವಸ್ಥೆ ಪರಿಶೀಲಿಸಿದರು. ಎಲ್ಲೆಂದರಲ್ಲಿ ಹರಡಿಕೊಂಡಿದ್ದ ಬಾಟಲಿಗಳು, ಸಾರಾಯಿ ಪ್ಯಾಕೆಟ್ಗಳು, ನೀರಿನ ಪೌಚ್, ಸಿಗರೇಟು, ಗುಟಕಾ ಚೀಟುಗಳು ಕಂಡುಬರುತ್ತಿವೇ ವಿನಃ ಉದ್ಯಾನ ಎನ್ನುವ ಸ್ವಲ್ಪ ಕುರುಹು ಕೂಡಾ ಕಂಡುಬರಲಿಲ್ಲ. ಇದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಈ ಕಾಮಗಾರಿಯ ಗುತ್ತಿಗೆದಾರರು ಯಾರು ಎನ್ನುವುದು ಮೊದಲು ನನಗೆ ಗೊತ್ತಾಗಲಿ, ಮುಖ್ಯಾಧಿಕಾರಿಗಳು ಬಂದ ತಕ್ಷಣ ನನ್ನನ್ನು ಈ ವಿಷಯ ಕುರಿತು ಸಂಪರ್ಕಿಸುವಂತೆ ತಿಳಿಸಿ ಎಂದು ಪಕ್ಕದಲ್ಲಿದ್ದ ಪಪಂ ಸಿಬ್ಬಂದಿಗೆ ತಿಳಿಸಿದರು.
4, 5 ಹಾಗೂ 16ನೇ ವಾರ್ಡಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶೌಚಾಲಯ ಕೆಡವಿದ್ದು ಅಲ್ಲಿರುವ ಸುತ್ತಮುತ್ತಲ ಜನತೆಗೆ ತುಂಬಾ ತೊಂದರೆಯಾಗುತ್ತಿದೆ. ಅದನ್ನು ತ್ವರಿತವಾಗಿ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿಕೊಂಡ ಸಾರ್ವಜನಿಕರ ಮನವಿಗೆ ಈ ಕಾಮಗಾರಿ ತ್ವರಿತವಾಗಿ ಪರಿಶೀಲಿಸಿ ಪರಿಹಾರ ಒದಗಿಸುವುದಾಗಿ ತಿಳಿಸಿದರು. ನಂತರ ನಾಡಕಚೇರಿ, ಗಾಂಧಿ ಭವನ ವೀಕ್ಷಿಸಿ ಗಾಂಧಿ ಭವನದ ಶುಚಿತ್ವ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ಎ.ಜೆ. ಪಂಡಿತ, ಆಹಾರ ನಿರೀಕ್ಷಕ ಆರ್.ಐ. ಕುನ್ನಿಬಾವಿ, ಪಪಂ ಸದಸ್ಯ ವರುಣ ಸಂಗನಾಳ, ಶಶಿಧರ ಸಂಕನಗೌಡ್ರ ಹಾಗೂ ಪಪಂ, ನಾಡಕಚೇರಿ, ನೆಮ್ಮದಿ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

