ಜಿನ್ನಿಂಗ್ ಫ್ಯಾಕ್ಟರಿ ಎತ್ತಂಗಡಿಗೆ ಮಾಡಿ: ದೊಡ್ಡಮೇಟಿ
ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಹತ್ತಿಕಾಳನ್ನು ಡಿಲಿಂಕ್ ಮಾಡುವ ಮೂಲಕ ಪರಿಸರ ಮೇಲೆ ಆಸಿಡ್ ದಾಳಿ ನಡೆಸಿರುವ ಜಿನ್ನಿಂಗ್ ಫ್ಯಾಕ್ಟರಿಯನ್ನು ಎತ್ತಂಗಡಿ ಮಾಡಲು ಜಿಲ್ಲಾಧಿಕಾರಿ ಮುಂದಾಗಬೇಕು. ಅಂದಾಗ ಇದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮಾನವ ಕುಲಕ್ಕೆ ಮುಂದೆ ಕಾಯ್ದಿದೆ ದೊಡ್ಡ ಗಂಡಾಂತರ. ಕೈಗಾರಿಕೆ ವ್ಯಾಪ್ತಿಗೆ ಒಳಪಡುವ ಜಿನ್ನಿಂಗ್ ಫಾಕ್ಟರಿ ಹೆಸರಿಗೆ ಮಾತ್ರ ಇದೆ. ಫ್ಯಾಕ್ಟರಿ ಒಳಗಡೆ ನಡೆಯುತ್ತಿರುವುದು ಅಕ್ರಮ ಚಟುವಟಿಕೆಯನ್ನು ಕಂಡು ಕಾಣದಂತೆ ಜಿಲ್ಲಾಡಳಿತ ಕಣ್ಮಿಚ್ಚಿರುವುದು ಪ್ರಜಾತಂತ್ರ ವೈಫಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಡಿಲಿಂಕ್ ಮಾಡುವ ಕಾರ್ಯ ಪ್ರಾರಂಭಿಸಿದಾಗ ರೈತರ ಅಡೆತಡೆಯಿಂದ ಸ್ಥಗಿತವಾಗಿರುತ್ತದೆ. ಬಳಿಕ ಮತ್ತೆ ಶುರು ಮಾಡುವುದು ಕಂಡರೆ ಇದರಲ್ಲಿ ಜಿಲ್ಲಾಡಳಿತವೂ ಶ್ಯಾಮಿಲಾಗಿದೆ ಎಂಬ ಶಂಕೆ ರೈತರಲ್ಲಿ ಮೂಡಿದೆ. ಗ್ರಾಮಸ್ಥರಲ್ಲಿ ಒಡ ಮೂಡಿರುವ ಈ ಭಾವನೆ ಹೋಗಬೇಕೆಂದರೆ ಜಿನ್ನಿಂಗ್ ಫಾಕ್ಟರಿ ಎತ್ತಂಗಡಿ ಮಾಡುವದೇ ಸೂಕ್ತ ಎಂದರು. ಐತಿಹಾಸಿಕ ದೇಗುಲ ಬಳಿ ಮನುಷ್ಯ ತನ್ನ ವೈಯಕ್ತಿಕ ಲಾಭಕ್ಕಾಗಿ ಇಂತಹ ಹೀನಕೃತ್ಯ ನಡೆಸಿರುವುದು ದೇವರು ಕ್ಷಮಿಸಲಾರರು. ಪ್ರಕೃತಿ ನಿರ್ಮಿತ ಗಾಳಿ, ಭೂಮಿ, ಹಸಿರು ಪರಿಸರ ಸೃಷ್ಟಿಸಲಾರದ ಮನುಷ್ಯನಿಗೆ ಅವುಗಳನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಪರಸರ ಮಾಲಿನ್ಯ ಮಾಡುವುದು ಕಂಡು ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳ ಉದಾಸೀನತೆ ಮುಂದೊಂದು ದಿನ ಮಾನವ ಕುಲಕ್ಕೆ ಪೆಟ್ಟು ಬೀಳಲಿದೆ ಎಂದರು. ಗ್ರಾಮದ ರೈತರಿಗೆ, ಐತಿಹಾಸಿಕ ದಕ್ಷಿಣ ಕಾಶಿ ದೇಗುಲಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ, ಜನ ವಸತಿಗೆ ಗಂಡಾಂತರ ತಂದೊಡ್ಡಿರುವ ಜತೆ ಅಂತರ್ಜಲ ಮಟ್ಟ ವಿಷಕಾರಿಯಾಗಿಸುವ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿಕಾಳನ್ನು ಡಿಲಿಂಕ್ ಮಾಡುವ ಕಾರ್ಯ ಈಗ ಸ್ಥಗಿತವಾಗಿರಬಹುದು. ಮುಂದೆ ಇದು ಇಡೀ ಜೀವ ಸಂಕುಲಕ್ಕೆ ಅಪಾಯಕಾರಿಯಾಗುವುದು ತಪ್ಪಿಸಬೇಕಾಗಿದೆ ಎಂದರು.
ರೈತರು ನಡೆಸುವ ಹೋರಾಟದಲ್ಲಿ ಪಾಲ್ಗೊಳ್ಳುವೆ: ಗಜೇಂದ್ರಗಡ, ಕಾಲಕಾಲೇಶ್ವರ, ರಾಜೂರ ಗ್ರಾಮಗಳ ಬಳಿ ಖಾಸಗಿ ಒಡೆತನದ ಹತ್ತಿಮಿಲ್‌ನಲ್ಲಿ ಹತ್ತಿಬೀಜ ಡಿಲಿಂಕ್ ಮಾಡಿದ ಆ್ಯಸಿಡ್ ಬೇಕಾಬಿಟ್ಟಿ ಹರಿದು ಬಿಟ್ಟಿದ್ದಾರೆ. ಇದರಿಂದ ಸುತ್ತಲಿನ ವಾತಾವರಣ ಮಲಿನ ಜತೆ ಜನರ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಬಗೆಗೆ ರೈತರು ದೂರು ನೀಡಿದರೂ ಜಿಲ್ಲಾಧಿಕಾರಿಗಳ, ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಅಧಿಕಾರಿ ಶೋಭಾ ಗಜಕೋಶ ವರ್ತನೆ ರೈತರಲ್ಲಿ ಸಂಶಯ ಮೂ ಡಿಸಿದೆ. ಜಿಲ್ಲಾಡಳಿತ ಇದೇ ರೀತಿ ಉದಾಸೀನತೆ ತೋರಿದರೆ ರೈತರು ನಡೆಸುವ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದು ತಿಳಿಸಿದರು.
ಅಪಾಯ ತಪ್ಪಿಸಲು ಮುಂದಾಗಿ: ಜಿನ್ನಿಂಗ್ ಫ್ಯಾಕ್ಟರಿಯಿಂದ 1 ಕಿಮೀ ದೂರದ ವರೆಗೂ ಆ್ಯಸಿಡ್ ಜತೆ ರಾಸಾಯನಿಕಯುಕ್ತ ವಿಷಕಾರಕ ದ್ರವ ಹರಿದಿರುವ ಬಳಿಯ ಮರ ಗಿಡಗಳು ಒಣಗಿವೆ. ಪರಿಸರ ವಾತಾವರಣ ಹದಗೆಟ್ಟಿದೆ. ಶ್ರೀ ಕಾಲಕಾಲೇಶ್ವರ ದೇಗುಲಕ್ಕೆ ಆಗಮಿಸುವ ಸಹಸ್ರಾರು ಭಕ್ತರು ಹಾಗೂ ಗ್ರಾಮ ರೈತರ ಜೀವಕ್ಕೆ ಅಪಾಯ ಎದುರಾಗಿರುವುದನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾಜೂರ ಗ್ರಾಪಂ ಸದಸ್ಯ ಪರಶುರಾಮ ಚಿಲ್‌ಝರಿ, ಸುನೀಲ ಚಿಲ್‌ಝರಿ, ಆನಂದ ಭಾಂಡಗೆ, ಮಂಜುನಾಥ ಭಜಂತ್ರಿ, ಮಲ್ಲಿಕಾರ್ಜುನ ಕೆಂಪನಾಳ, ಮಂಜುನಾಥ ಮರಡಿ, ಮುತ್ತು ಕನ್ಯಾಳ, ಕಾಳಿಂಗ ಚಿಲ್‌ಝರಿ, ಕಳಕಪ್ಪ ಭಜಂತ್ರಿ, ಮುತ್ತು ಪಾಟೀಲ, ಪರಸಪ್ಪ ಕನ್ಯಾಳ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

