ಶುದ್ಧ ಬರವಣಿಗೆ ವ್ಯಕ್ತಿತ್ವದ ಪ್ರತಿಬಿಂಬ
ಕನ್ನಡಪ್ರಭ ವಾರ್ತೆ, ಗದಗ, ಜ. 31
ಶುದ್ಧ ಬರವಣಿಗೆ ವ್ಯಕ್ತಿಯ ವ್ಯಕ್ತಿತ್ವದ ಪ್ರತಿಬಿಂಬ, ಪರಿಶುದ್ಧವಾದ ಬರಹದಿಂದ ವ್ಯಕ್ತಿತ್ವವನ್ನು ಅಳೆಯಬಹುದು. ಆದ್ದರಿಂದ ಶಿಕ್ಷಕರು ಅದರಲ್ಲೂ ವಿಶೇಷವಾಗಿ ಉರ್ದು ಶಿಕ್ಷಕರು ಶುದ್ಧ ಬರಹದ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಗದಗ ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ ಕರೆ ನೀಡಿದರು.
ಅವರು ಸ್ಥಳೀಯ ಆಂಗ್ಲೋ ಉರ್ದು ಸ್ಕೂಲ್ದ ಸಭಾಂಗಣದಲ್ಲಿ ಗದಗ ಜಿಪಂ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಉರ್ದು ಶಿಕ್ಷಕರ ಸಂಘಟನೆ ಗದಗ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಗದಗ ಜಿಲ್ಲೆಯ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಉರ್ದು ಭಾಷಾ ಶಿಕ್ಷಕರಿಗೆ 5 ದಿನಗಳ ಕ್ಯಾಲಿಗ್ರಾಫಿ (ಶುದ್ಧ ಬರಹ) ತರಬೇತಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶುದ್ಧ ಬರಹ ಭಾಷೆಯ ವೈವಿಧ್ಯತೆ ತೋರಿಸುತ್ತದೆ. ಎಲ್ಲ ಭಾಷೆಯೂ ತನ್ನದೇ ಆದ ಇತಿಹಾಸ ಪರಂಪರೆ ಇದೆ ಎಂದ ಅವರು ಸತ್ವಯುತವಾದ ಭಾಷೆಯನ್ನು ವೈಶಿಷ್ಟ್ಯಮಯವಾಗಿ ದುಡಿಸಿಕೊಳ್ಳುವ ಕಲೆಗಾರಿಕೆಯ ಗತ್ತು ಎಲ್ಲರಿಗೂ ಬರಬೇಕು. ಶಿಕ್ಷಕರಾದವರು ಮೊದಲು ತಮ್ಮ ಬರಹವನ್ನು ಪರಿಶುದ್ಧವಾಗಿ ಬರೆಯುವದನ್ನು ಇನ್ನಷ್ಟು ಅಭಿವೃದ್ಧಿ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಶುದ್ಧ ಬರಹ ಕಲಿಸಲು ಸಾಧ್ಯ ಎಂದರು.
ರಾಜ್ಯದಲ್ಲಿ ಉರ್ದು ಶಾಲೆಗಳ ಮತ್ತು ಉರ್ದು ಶಾಲೆಯ ಮಕ್ಕಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಉರ್ದು ಶಾಲೆಗಳನ್ನು ಉಳಿಸಿಕೊಳ್ಳಲು ಮತ್ತು ಸ್ಥಾಪಿಸಲು ಶಿಕ್ಷಣ ಪ್ರೇಮಿಗಳು ಮುಂದಾಗಬೇಕು. ಉರ್ದು ಶಾಲೆಗಳ ಸ್ಥಾಪನೆಗೆ ಅಗತ್ಯವಿರುವ ಜಮೀನು ನೀಡಲು ಪ್ರಜ್ಞಾವಂತರು ಮುಂದೆ ಬರಬೇಕು ಎಂದರು.
ರಾಜ್ಯ ಶಿಕ್ಷಣ ತರಬೇತಿ ಇಲಾಖೆಯ ವಿಶ್ರಾಂತ ಸಹ ನಿರ್ದೇಶಕ ಎಸ್.ಎನ್. ಖಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗದಗ ಆಂಗ್ಲೂ ಉರ್ದು ಸ್ಕೂಲ್ ಕಮಿಟಿಯ ಚೇರ್ಮನ್ ಸರಫರಾಜ ಉಮಚಗಿ, ಎಸ್.ಎನ್. ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಶಹರ ಬಿಇಒ ಐ.ಬಿ. ಬೆನಕೊಪ್ಪ, ಗದಗ ಗ್ರಾಮೀಣ ಬಿಇಒ ಶಂಕರ ಹೂಗಾರ, ಎಂ.ಎಂ. ಶೇಖ, ಸಂಪನ್ಮೂಲ ವ್ಯಕ್ತಿ ಉಮರ್ಷಾ ಫಿರಜಾದೆ, ಡಿ.ಎ. ಬಾಣಿ, ಎಸ್.ಎ. ಶೇಖ, ಹಿದಾಯತ್ವುಲ್ಲಾ ರಟ್ಟಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು. ಡಿ.ಎ. ಬಾಣಿ ಪ್ರಾರ್ಥಿಸಿದರು. ಎ.ಎ. ಖಾಜಿ ಸ್ವಾಗತಿಸಿದರು. ಉರ್ದು ಸಂಯೋಜಕ ಡಾ. ಎಂ.ಎನ್. ಮಕಾನದಾರ ನಿರೂಪಿಸಿದರು. ಎಚ್.ಎ. ಫಾರೂಖಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

