ಚಿಕಿತ್ಸಾ ವೆಚ್ಚಕ್ಕೆ ರಂಗಕಲಾವಿದೆ ಪ್ರಯಾಸ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ, ಗದಗ, ಜು. 3
ರಂಗಕಲೆಯಲ್ಲಿ ಛಾಪು ಮೂಡಿಸಿರುವ ಹಿರಿಯ ರಂಗಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪ್ಲೋರಿನಾಬಾಯಿ ಇಂದು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಆಗದೇ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ರಂಗಕಲಾವಿದೆಯಾಗಿ 13ನೇ ವಯಸ್ಸಿನಲ್ಲಿಯೇ ನಾಟಕ ರಂಗವನ್ನು ಪ್ರವೇಶಿಸಿದ ಪ್ಲೋರಿನಾಬಾಯಿ ನೂರಾರು ನಾಟಕಗಳಲ್ಲಿ ಪಾತ್ರಕ್ಕೆ ಸೈ ಎನ್ನಿಸಿಕೊಳ್ಳುವಂತೆ ನಟನೆ ಮಾಡಿದ್ದಾರೆ. ಆದರೆ 2-3 ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದು ಪರದೆಯ ಮುಂದೆ ನಟಿಸಬೇಕಿದ್ದ ಪ್ಲೋರಿನಾಬಾಯಿ ಇಂದು ಪರದೆಯ ಹಿಂದೆ ಸರಿಯುವ ಪರಿಸ್ಥಿತಿ ಎದುರಾಗಿದೆ.
ಸಚಿವೆಯ ಭರವಸೆ ಈಡೇರಿಲ್ಲ
ಪ್ಲೋರಿನಾಬಾಯಿಯ ಸಾಧನೆ ಗುರುತಿಸಿ 2013ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ಜಿಲ್ಲೆಯ ಜನತೆಗೆ, ಕಲಾವಿದರಿಗೆ ಸಂತಸವನ್ನುಂಟು ಮಾಡಿತಾದರೂ ಅಗತ್ಯ ಚಿಕಿತ್ಸೆಗಾಗಿ ಬೇಕಾದ ವೆಚ್ಚವನ್ನು ಇಂದಿಗೂ ನೀಡಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ 2013ರ ಡಿಸೆಂಬರ್ 1ರಂದು ಪ್ಲೋರಿನಾಬಾಯಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಲು ಗದುಗಿನ ಅವರ ನಿವಾಸಕ್ಕೆ ಬಂದಾಗ ರಂಗಕಲಾವಿದೆಯ ದುಸ್ಥಿತಿ ಕಂಡು ಪ್ಲೋರಿನಾಬಾಯಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯ ವರೆಗೂ ವೈದ್ಯಕೀಯ ವೆಚ್ಚವನ್ನು ನೀಡಿಲ್ಲ.
ರು. 2 ಲಕ್ಷಕ್ಕೂ ಅಧಿಕ ವೆಚ್ಚ
2-3 ವರ್ಷಗಳಿಂದ ಹಾಸಿಗೆ ಹಿಡಿದಿರುವ ಪ್ಲೋರಿನಾಬಾಯಿ ವೈದ್ಯಕೀಯ ಚಿಕಿತ್ಸೆಗಾಗಿ ಈಗಾಗಲೇ ಸಾಲ ಮಾಡಿ ರು. 2 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಇಲ್ಲಿಯ ವರೆಗೂ ವೈದ್ಯಕೀಯ ವೆಚ್ಚ ನೀಡಿಲ್ಲ.
ಪ್ಲೋರಿನಾಬಾಯಿ ಇಂದು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದು, ಎರಡೂ ಕಾಲುಗಳು ಸಂಪೂರ್ಣವಾಗಿ ನಿಷ್ಕ್ರೀಯಗೊಂಡಿವೆ.
ಇದರ ಚಿಕಿತ್ಸೆಗಾಗಿ ಇನ್ನೂ ರು. 4-5 ಲಕ್ಷ ಅವಶ್ಯಕತೆಯಿದ್ದು, ಈ ಕುರಿತು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಗಮನಹರಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

